ಬಿಬಿಎಂಪಿಯಿಂದ ಸ್ಪಾಟ್‍ನಲ್ಲಿ ತೆರಿಗೆ ವಸೂಲಿ

ಈ ಸುದ್ದಿಯನ್ನು ಶೇರ್ ಮಾಡಿ

bbmp--01

ಬೆಂಗಳೂರು, ಆ.11– ಟಾಪ್ 10 ತೆರಿಗೆ ವಂಚಿತರ ಪಟ್ಟಿ ಸಿದ್ದಪಡಿಸಿದ್ದ ಬಿಬಿಎಂಪಿಯು ಅಂತಹ ವಂಚಕರಿಂದ ಯಾವುದೇ ಮುಲಾಜಿಲ್ಲದೆ ಸ್ಪಾಟ್‍ನಲ್ಲೇ ಕೋಟ್ಯಂತರ ರೂ. ತೆರಿಗೆ ಪೀಕಿಸುತ್ತಿದೆ.
ಈಗಾಗಲೇ ಮಾನ್ಯತಾ ಟೆಕ್‍ಪಾರ್ಕ್‍ನವರಿಂದ ಕೋಟ್ಯಂತರ ರೂ. ತೆರಿಗೆ ಪೀಕಿಸಿದ್ದ ಪಾಲಿಕೆ ಅಧಿಕಾರಿಗಳು ಇಂದು ವಿಠಲ್‍ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್‍ಗೆ ದಾಳಿ ನಡೆಸಿತು.   ಈ ಹೋಟೆಲ್‍ನವರು 2013-14ರಿಂದ 2.38 ಕೋಟಿ ತೆರಿಗೆ ಪಾವತಿಸಿರಲಿಲ್ಲ. ಇದರ ಬಡ್ಡಿ ಸೇರಿ ಒಟ್ಟು 5.59 ಕೋಟಿ ರೂ. ಬಾಕಿ ಉಳಿದಿದೆ. ಈಗಾಗಲೇ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ 2-3 ಬಾರಿ ಹೋಟೆಲ್ ಮಾಲೀಕರಿಗೆ ನೋಟಿಸ್ ಕೊಟ್ಟಿದ್ದರೂ ಕೂಡ ಅವರು ಕ್ಯಾರೆ ಅಂದಿರಲಿಲ್ಲ.

ಹಾಗಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ್ ಸೂಚನೆ ಮೇರೆಗೆ ಇಂದು ಪೂರ್ವ ವಲಯ ಜಂಟಿ ಆಯುಕ್ತ ಯತೀಶ್‍ಕುಮಾರ್ ಮತ್ತು ಇತರೆ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ನಡೆಸಿದರು.  ಮೊದಲು ಹೋಟೆಲ್‍ನವರು ತೆರಿಗೆ ಕಟ್ಟಲು ನಿರಾಕರಿಸಿದರು. ಆಗ ಅಲ್ಲಿದ್ದ ಪೀಠೋಪಕರಣಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು. ತಕ್ಷಣ ಎಚ್ಚೆತ್ತ ಹೋಟೆಲ್‍ನವರು 1.95 ಕೋಟಿ ತೆರಿಗೆ ಕೊಡಲು ಮುಂದಾದರು. ಆದರೆ, ಯತೀಶ್‍ಕುಮಾರ್ ಇದನ್ನು ಮುಟ್ಟದೆ 5.59 ಕೋಟಿ ಬಾಕಿ ತೆರಿಗೆ ಕೊಡುವವರೆಗೂ ಇಲ್ಲಿಂದ ಕದಲುವುದಿಲ್ಲಎಂದು ಪಟ್ಟು ಹಿಡಿದರು. ಕಡೆಗೆ ಹೋಟೆಲ್‍ನವರು 5.59 ಕೋಟಿ ತೆರಿಗೆಯನ್ನು ಸ್ಪಾಟ್‍ನಲ್ಲಿ ಕಟ್ಟಿದರು.

ಶಿವರಾಜ್ ಸಂತಸ:

ನಾವು ಟಾಪ್ 10 ತೆರಿಗೆ ವಂಚಿತರ ಪಟ್ಟಿ ಮಾಡಿದ್ದೆವು. ಈಗಾಗಲೇ ಮಾನ್ಯತಾ ಟೆಕ್‍ಪಾರ್ಕ್‍ನವರಿಂದ ತೆರಿಗೆ ಕಟ್ಟಿಸಿದ್ದೇವೆ. ಇಂದು ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್‍ನವರು 5.59 ಕೋಟಿ ತೆರಿಗೆ ಕಟ್ಟುವಂತೆ ಮಾಡಿದ್ದೇವೆ. ಇದು ನಮ್ಮ ಅಧಿಕಾರಿಗಳಿಗೆ ಸ್ಪೂರ್ತಿ ತಂದಿದೆ. ತೆರಿಗೆ ಸಂಗ್ರಹವಾಗುತ್ತಿರುವುದಕ್ಕೆ ಸಂತಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.  ಮುಂದೆಯೂ ದಾಳಿ ಮುಂದುವರೆಯಲಿದೆ. ತೆರಿಗೆ ವಂಚಕರು ನಮ್ಮಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. 2-3 ಬಾರಿ ನೋಟಿಸ್ ಕೊಡುತ್ತೇವೆ. ಆಗಲೂ ತೆರಿಗೆ ಕಟ್ಟದಿದ್ದರೆ ಅಂತಹ ಸಂಸ್ಥೆಗಳ ಮುಂದೆ ಕಸ ಸುರಿಯುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳುತ್ತೇವೆ. ಒಟ್ಟಾರೆ ನಿಗದಿತ ತೆರಿಗೆ ಸಂಗ್ರಹ ಗುರಿ ತಲುಪುವುದೇ ನಮ್ಮ ಉದ್ದೇಶವಾಗಿದೆ ಎಂದು ಅವರು ಈ ಸಂಜೆಗೆ ತಿಳಿಸಿದರು.

Facebook Comments

Sri Raghav

Admin