ಬಿಬಿಎಂಪಿ ಅಧಿಕಾರಿಗಳಿಂದ 350 ಕೋಟಿ ರೂ. ಮೌಲ್ಯದ ಭೂಮಿ ಗೋಲ್‍ಮಾಲ್..!

ಈ ಸುದ್ದಿಯನ್ನು ಶೇರ್ ಮಾಡಿ

bbmp2

ಬೆಂಗಳೂರು, ಜ.30- ನಗರದ ಹೃದಯ ಭಾಗದಲ್ಲಿರುವ 350 ಕೋಟಿ ರೂ. ಮೌಲ್ಯದ 1.28 ಲಕ್ಷ ಚದರಡಿ ಭೂಮಿಗೆ ಬಿಬಿಎಂಪಿ ಅಧಿಕಾರಿಗಳು ಭೋಗಸ್ ಖಾತೆ ಮಾಡಿದ್ದು, ಕೂಡಲೇ ಈ ನಕಲಿ ಖಾತೆ ರದ್ದು ಪಡಿಸಿ ಪಾಲಿಕೆ ಆಸ್ತಿ ವಶಕ್ಕೆ ಪಡೆದು ಇಡೀ ಪ್ರಕರಣವನ್ನು ಸಿಬಿಐ ತನಿಗೆ ವಹಿಸಬೇಕೆಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಪಾಲಿಕೆ ಸಭೆಯಲ್ಲಿ ಆಗ್ರಹಿಸಿದರು. ಪಾಲಿಕೆ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಪದ್ಮನಾಭರೆಡ್ಡಿ, ಕನ್ನಿಂಗ್‍ಹ್ಯಾಂ ಮತ್ತು ಮಿಲ್ಲರ್ ರಸ್ತೆ ಬಳಿ 1.28 ಲಕ್ಷ ಚದರಡಿ ಜಾಗವಿದೆ. ಅದು ಈ ಹಿಂದೆ ಕಂಟೋನ್‍ಮೆಂಟ್‍ಗೆ ಸೇರಿತ್ತು. ನಂತರ ಬಿಬಿಎಂಪಿಗೆ ಹಸ್ತಾಂತರವಾಗಿತ್ತು. ಅದು ಖಾಲಿ ಜಾಗವಾಗಿತ್ತು.
ಬಳಿಕ ನರಸಮ್ಮ ಎಂಬುವರು ಎರಡು ಚದರ ಹೆಂಚಿನ ಮನೆ ಕಟ್ಟಿ ಖಾತೆ ಮಾಡಿಸಿಕೊಂಡು 590ರೂ. ತೆರಿಗೆ ಕಟ್ಟುತ್ತಿದ್ದರು. ಇದರ ಈಗಿನ ಬೆಲೆ 350 ಕೋಟಿ ಆಗಿದೆ ಎಂದು ಹೇಳಿದರು.

ಇಂತಹ ಅಮೂಲ್ಯ ಆಸ್ತಿ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಬಿಲ್ಡರ್ ಸುಬ್ಬರಾಜು ಎಂಬುವರಿಗೆ ಈ ಜಾಗ ಮಾರಾಟವಾಗಿತ್ತು. 2007-08ರಲ್ಲಿ ಈ ಜಾಗವನ್ನು ಅವರ ಮಕ್ಕಳಿಗೆ ಮೂರು ಭಾಗ ಮಾಡಲಾಗಿದೆ. ಆಗಲೂ ಪಾಲಿಕೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತರು. ಅಲ್ಲದೆ ಆ ಮೂರು ಮಕ್ಕಳಿಗೂ ಖಾತ ಹಂಚಿಕೆ ಮಾಡಿಕೊಟ್ಟಿದ್ದಾರೆ ಎಂದು ವಿವರಿಸಿದರು. 2008ರಿಂದ 2016ರವರೆಗೂ 1.28 ಚದರ ಅಡಿ ಆಸ್ತಿ ಸುಬ್ಬರಾಜು ಅವರಿಗೆ ಸೇರಿದ್ದು ಎಂದು ಅವರ ಮಕ್ಕಳಿಗೆ ಖಾತಾ ಹಂಚಿಕೆ ಮಾಡಿಕೊಟ್ಟಿದ್ದಾರೆ. ಭೂಗಳ್ಳರ ಜತೆ ಕೈಜೋಡಿಸಿರುವ ಅಂದಿನ ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ, ಎಸಿ, ಡಿಸಿಗಳು ಎಲ್ಲಾ ಸೇರಿ ಒಂದೇ ದಿನ ಆಸ್ತಿ ಸುಬ್ಬರಾಜ್‍ಗೆ ಸೇರಿದ್ದು ಎಂದು ಖಾತ ಮಾಡಿಕೊಟ್ಟಿದ್ದಾರೆ. ಇಂತಹ ಅಮೂಲ್ಯ ಆಸ್ತಿ ಪಾಲಿಕೆ ಕೈ ಬಿಟ್ಟು ಹೋಗುತ್ತಿದೆ. ಇದರ ಕಡತ ಕೊಡಿ. ಪರಿಶೀಲನೆ ಮಾಡಬೇಕೆಂದು ಕೇಳಿದರೆ ಕಡತ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು. ಇದನ್ನೆಲ್ಲಾ ನೋಡಿದರೆ ಅಧಿಕಾರಿಗಳು ಭೂಗಳ್ಳರ ಜತೆ ಶಾಮೀಲಾಗಿದ್ದಾರೆ ಅನ್ನಿಸುತ್ತಿದೆ. ಕೂಡಲೇ ಭೋಗಸ್ ಖಾತೆ ರದ್ದು ಮಾಡಿ ಆಸ್ತಿ ವಶಪಡಿಸಿಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಪದ್ಮನಾಭರೆಡ್ಡಿ ಆಗ್ರಹಿಸಿದರು.

ಶಿವರಾಜ್ ಬೆಂಬಲ:

ಆಸ್ತಿ ಸಂರಕ್ಷಣಾ ಸಮಿತಿಯವರು ಮಿಲ್ಲರ್ ರಸ್ತೆಯಲ್ಲಿ 1.28 ಚದರಡಿ ಆಸ್ತಿ ಇದ್ದು, ಇದು ಬಿಬಿಎಂಪಿಗೆ ಸೇರಿದ್ದು ಎಂದು ವರದಿ ಕೊಟ್ಟಿದ್ದಾರೆ. ನಾನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದಾಗ ಈ ಆಸ್ತಿ ವಶಪಡಿಸಿಕೊಳ್ಳಲು ಮುಂದಾಗಿದ್ದೆ. ಆದರೆ, ಸಾಧ್ಯವಾಗಿರಲಿಲ್ಲ. ಇದು ಈಗ ಬೇರೆಯವರ ಪಾಲಾಗುತ್ತಿದೆ. ಕೂಡಲೇ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸುವ ಮೂಲಕ ಪದ್ಮನಾಭರೆಡ್ಡಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

Facebook Comments

Sri Raghav

Admin