ಬಿಬಿಎಂಪಿ ಕಾಲೇಜು ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್

ಈ ಸುದ್ದಿಯನ್ನು ಶೇರ್ ಮಾಡಿ

Free-Laptom

ಬೆಂಗಳೂರು, ಜ.29- ಈ ಕೂಡಲೇ ಕಿಯೊನಿಕ್ ಸಂಸ್ಥೆ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮೇಯರ್ ಸಂಪತ್‍ರಾಜ್ ಪಾಲಿಕೆ ಸಭೆಯಲ್ಲಿಂದು ಆದೇಶ  ಹೊರಡಿಸಿದರು. ಪಾಲಿಕೆ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಮಹಮ್ಮದ್ ರಿಜ್ವಾನ್, ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಸೇರಿದಂತೆ ಹಲವಾರು ಸದಸ್ಯರು ಕಲ್ಯಾಣ ಯೋಜನೆ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುವುದು ನಿಧಾನವಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.  ಈ ಹಿಂದೆಯೇ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲು ನಿರ್ಣಯ ಕೈಗೊಳ್ಳಲಾಗಿತ್ತು.

ಈ ಪ್ರಕ್ಯ್ರೂರ್‍ಮೆಂಟ್‍ನಲ್ಲಿ ಟೆಂಡರ್ ಕರೆಯಲಾಗಿತ್ತು. ಆದರೆ, ಅಧಿಕಾರಿಗಳು ಕಿಯೊನಿಕ್ ಸಂಸ್ಥೆಯಿಂದ ಲ್ಯಾಪ್‍ಟಾಪ್ ಕೊಡಲು ನಿರ್ಧರಿಸಿದರು. ಆದರೂ ಮತ್ತೆ ತಗಾದೆ ತೆಗೆದು ಲ್ಯಾಪ್‍ಟಾಪ್ ಕೊಡುವುದನ್ನು ಮುಂದೂಡಲು ಯತ್ನಿಸುತ್ತಿದ್ದಾರೆ. ಇನ್ನೇನು ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತದೆ. ಆದ್ದರಿಂದ ಕೂಡಲೇ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿ ಎಂದು ಆಗ್ರಹಿಸಿದರು. ಈ ವೇಳೆ ಕಾಂಗ್ರೆಸ್‍ನ ಎಂ.ಗುಣಶೇಖರ್ ಮಾತನಾಡಿ, ನಾನು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದಾಗ ಸಭೆ ಕರೆದು ಕಿಯೊನಿಕ್ ಸಂಸ್ಥೆಯಿಂದ ಲ್ಯಾಪ್‍ಟಾಪ್ ವಿತರಿಸುವಂತೆ ಸೂಚಿಸಿದ್ದೆ. ಆದರೆ, ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಇದಕ್ಕೆ ಮೇಯರ್ ಸಂಪತ್‍ರಾಜ್ ಪ್ರತಿಕ್ರಿಯಿಸಿ, ಈ ಕೂಡಲೇ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲು ಮತ್ತು ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ರಿಲ್ಯಾಕ್ಸೇಷನ್:

ಕಲ್ಯಾಣ ಕಾರ್ಯಕ್ರಮ ಯೋಜನೆಯಡಿ ಹೊಲಿಗೆಯಂತ್ರ, ಐರನ್‍ಬಾಕ್ಸ್, ಸೈಕಲ್‍ಗಳನ್ನು ವಿತರಿಸಬೇಕಿದೆ. ಆದರೆ, ಇವುಗಳನ್ನು ಪಡೆಯುವ ಫಲಾನುಭವಿಗಳಿಗೆ ಜಾತಿ ಮತ್ತು ಆದಾಯ ಪತ್ರ ಕಡ್ಡಾಯ ಮಾಡಿದ್ದೀರಿ. ಈ ಪ್ರಮಾಣ ಪತ್ರವನ್ನು ಪಡೆಯಲು ಸುಮಾರು ಮೂರು ಸಾವಿರ ಖರ್ಚಾಗುತ್ತದೆ. ಮೂರು ಸಾವಿರ ಖರ್ಚು ಮಾಡಿ ಐದು ಸಾವಿರ ರೂ.ಗಳ ಸೌಲಭ್ಯ ಪಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆಕ್ಷೇಪಿಸಿದರು. ಇದಕ್ಕೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಾಕಿರ್ ಪ್ರತಿಕ್ರಿಯಿಸಿ, ನಾನು ಅಧ್ಯಕ್ಷನಾದ ಮೇಲೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ರಿಲ್ಯಾಕ್ಸೇಷನ್ ಕೊಟ್ಟಿದ್ದೇನೆ. ಫಲಾನುಭವಿಗಳು ಸ್ವಯಂಘೋಷಿತ ಮನವಿ ಕೊಟ್ಟರೆ ಸಾಕು ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಆಯುಕ್ತರ ಸ್ಥಾನದಲ್ಲಿ ಕುಳಿತಿದ್ದ ವಿಜಯಶಂಕರ್ ಮಾತನಾಡಿ, 14ನೇ ಆಯೋಗದ ಅನುದಾನವನ್ನು ಆದಷ್ಟು ಶೀಘ್ರ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.

Facebook Comments

Sri Raghav

Admin