ಬಿಬಿಎಂಪಿ ದೋಸ್ತಿ 16ಕ್ಕೆ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappaಬೆಂಗಳೂರು, ಆ.14- ಬಿಬಿಎಂಪಿಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಮಂಗಳವಾರ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಯರ್-ಉಪಮೇಯರ್ ಸ್ಥಾನಕ್ಕೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೇ ಅಥವಾ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕೇ ಎಂಬ ಬಗ್ಗೆ ಮಂಗಳವಾರ ನಡೆಯುವ ಸಭೆಯಲ್ಲಿ ಚರ್ಚೆ ಮಾಡುವುದಾಗಿ ತಿಳಿಸಿದರು.  ಕೆಲವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೆಂಬ ಒಲವು ತೋರಿದ್ದಾರೆ. ಕಳೆದ ಬಾರಿ ನಮಗೆ ಕೂದಲೆಳೆ ಅಂತರದಲ್ಲಿ ಪಾಲಿಕೆ ಗದ್ದುಗೆ ಕೈ ತಪ್ಪಿ ಹೋಗಿತ್ತು. ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಬಂಧನಕ್ಕೆ ಒತ್ತಾಯ: ಭಾರತೀಯ ಸೇನೆ ವಿರುದ್ಧ ಹಾಗೂ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿರುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಬಿಎಸ್‍ವೈ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಿನ್ನೆ ಸಂಜೆ ಬೆಂಗಳೂರಿನ ವಸಂತನಗರ ಮಿಲ್ಲರ್ಸ್ ರಸ್ತೆಯಲ್ಲಿರುವ ಯುನೈಟೆಡ್ ಥಿಯಾಲಜಿಕಲ್ ಕಾಲೇಜಿನಲ್ಲಿ ಸರ್ಕಾರೇತರ ಸಂಸ್ಥೆ ವತಿಯಿಂದ ಕಾಶ್ಮೀರ ಸಂಘರ್ಷ ಕುರಿತ ಕಾರ್ಯಾಗಾರದಲ್ಲಿ ಕೆಲವರು ಪಾಕಿಸ್ತಾನ ಪರ ಹಾಗೂ ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿರುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.  ಭಾರತೀಯ ನಾಗರಿಕರಾಗಿ ಅನ್ಯ ರಾಷ್ಟ್ರದ ಪರ ಘೋಷಣೆ ಕೂಗುವುದು, ಇಲ್ಲವೆ ದೇಶ ಕಾಯುವ ಸೈನಿಕರ ವಿರುದ್ಧ ಧಿಕ್ಕಾರದ ಘೋಷಣೆ ಕೂಗುವುದು ಸರಿಯಲ್ಲ. ಸರ್ಕಾರ ತಕ್ಷಣವೇ ಇಂತಹ ದೇಶದ್ರೋಹಿಗಳ ವಿರುದ್ಧ ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು.  ಈ ಸಂಬಂಧ ಕೇಂದ್ರ ಗೃಹ ಸಚಿವ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕರ್ನಾಟಕ ಸರ್ಕಾರಕ್ಕೆ ಕಾನೂನು ಕ್ರಮ ಜರುಗಿಸಲು ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಲಾಗುವುದು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ಗೃಹ ಇಲಾಖೆಗೆ ಸೂಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ದೇಶ ರಕ್ಷಣೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜೀಯಾಗಬಾರದು. ಸೈನಿಕರ ತ್ಯಾಗ, ದೇಶಪ್ರೇಮದಿಂದ ನಾವೆಲ್ಲರೂ ನೆಮ್ಮದಿಯಾಗಿದ್ದೇವೆ. ಆದರೆ ಕೆಲವರು ಇಂತಹ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  ಕಾಲೇಜಿನಲ್ಲಿ ಕಾರ್ಯಾಗಾರ ಆಯೋಜಿಸಲು ಯಾರ ಅನುಮತಿ ಪಡೆಯಲಾಗಿತ್ತು. ಎನ್‍ಜಿಒ ಸಂಸ್ಥೆಯಾದ ಅಮೆಸ್ಟಿ ಇಂಟರ್‍ನ್ಯಾಷನಲ್ ಇಂತಹ ಕಾರ್ಯಾಗಾರ ಆಯೋಜಿಸುವ ಉದ್ದೇಶವಾದರೂ ಏನಿತ್ತು. ಕಾಲೇಜು ಆಡಳಿತ ಮಂಡಳಿ ಮತ್ತು ಎನ್‍ಜಿಒ ಸಂಸ್ಥೆ ವಿರುದ್ಧ ಕ್ರಮ ಜರುಗಿಸಲಿ ಎಂದು ಯಡಿಯೂರಪ್ಪ ಆಗ್ರಹಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin