ಬಿಬಿಎಂಪಿ ಮೇಯರ್-ಆಯುಕ್ತರ ನಡುವೆ ಮುಸುಕಿನ ಗುದ್ದಾಟ

ಈ ಸುದ್ದಿಯನ್ನು ಶೇರ್ ಮಾಡಿ

BBMP-Padmavathi-01

ಬೆಂಗಳೂರು, ಡಿ.14- ಮೇಯರ್ ಜಿ.ಪದ್ಮಾವತಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ನಗರದ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ ಸರ್ಕಾರ ಬಿಡುಗಡೆ ಮಾಡಿರುವ 7300ಕೋಟಿ ರೂ.ಗಳ ಅನುದಾನ ಬಳಕೆ ಸಂಬಂಧ ಮೇಯರ್ ಹಾಗೂ ಆಯುಕ್ತರ ನಡುವಿನ ಗುದ್ದಾಟ ಆರಂಭಗೊಂಡಿದೆ.  ಮೇಯರ್ ಅವರ ಅಧಿಕಾರವನ್ನು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೈಜಾಕ್ ಮಾಡಿ 7300 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳಿಗೆ ಬಿಬಿಎಂಪಿ ಕೌನ್ಸಿಲ್ ಸಭೆ ಮತ್ತು ಸ್ಥಾಯಿ ಸಮಿತಿ ಸಭೆಗಳಲ್ಲಿ ಚರ್ಚಿಸಿ ಅನುಮೋದನೆ ಪಡೆಯಬೇಕಿಲ್ಲ ಎಂಬ ಹೊಸ ಪದ್ಧತಿಯನ್ನು ಜಾರಿಗೊಳಿಸಿರುವುದರಿಂದ ಈ ಸಮಸ್ಯೆ ಉದ್ಬವಿಸಿದೆ.

ಇದನ್ನೇ ಆಧಾರವಾಗಿಟ್ಟುಕೊಂಡು ಆಯುಕ್ತ ಮಂಜುನಾಥ್ ಪ್ರಸಾದ್ ಮೇಯರ್ ಅವರ ಗಮನಕ್ಕೂ ತಾರದೆ ನಗರಾಭಿವೃದ್ಧಿ ಸಚಿವ ಜಾರ್ಜ್ ಅವರ ತಾಳಕ್ಕೆ ಕುಣಿಯುತ್ತಿದ್ದಾರೆ. ಅಲ್ಲದೆ ಅದರಂತೆ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಮೇಯರ್ ಅಧಿಕಾರ ಪ್ರಯೋಜನವಿಲ್ಲದಂತಾಗಿದೆ.  ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಮೇಯರ್ ಪದ್ಮಾವತಿ ಪ್ರತ್ಯಕ್ಷವಾಗಿ ಹೇಳಿಕೊಳ್ಳದಿದ್ದರೂ ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.  ಪಾಲಿಕೆ ಸಭೆಯಲ್ಲಿ ಅಧಿಕಾರವನ್ನು ಮೊಟಕುಗೊಳಿಸಿರುವ ಬಗ್ಗೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ವಿಷಯ ಪ್ರಸ್ತಾಪಿಸಿದ ಸಂದರ್ಭದಲ್ಲಿ ಮೇಯರ್ ಸಮರ್ಥಿಸಿಕೊಂಡಿದ್ದರು. ಆದರೆ,  ತಮ್ಮನ್ನು ಕ್ಯಾರೆ ಅನ್ನದ ಆಯುಕ್ತ ಮಂಜುನಾಥ್ ಪ್ರಸಾದ್ ನಡುವೆ ಮೇಯರ್ ಮುಸುಕಿನ ಗುದ್ದಾಟಕ್ಕಿಳಿದಿದ್ದು, ಮುಂದೇನಾಗುವುದೋ ಕಾದು ನೋಡಬೇಕಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin