ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy

ಬೆಂಗಳೂರು, ಆ.14– ಬಿಬಿಎಂಪಿ ಮೇಯರ್-ಉಪಮೇಯರ್ ಸ್ಥಾನದ ಚುನಾವಣೆ ಬಗ್ಗೆ ನಡೆಯುತ್ತಿರುವ ಸರ್ಕಸ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಮೇಯರ್-ಉಪಮೇಯರ್ ಸ್ಥಾನ ಪಡೆಯುವುದಕ್ಕಿಂತ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.  ಬಿಬಿಎಂಪಿ ಅಧಿಕಾರ ಹಿಡಿಯಲು ಹಲವು ಬಗೆಯ ಸರ್ಕಸ್ ನಡೆಯುತ್ತಿವೆ. ಮೈತ್ರಿ ಕುರಿತು ಬೇರೆ ಪಕ್ಷಗಳ ನಾಯಕರು ಮಾತುಕತೆ ನಡೆಸಿರುವುದು ನಿಜ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.  ಜೆಡಿಎಸ್‍ನಿಂದ ಚುನಾಯಿತರಾಗಿದ್ದ ಬಿಬಿಎಂಪಿ ಸದಸ್ಯರ ಪೈಕಿ 7 ಮಂದಿ ನಮ್ಮ ಜತೆಗಿದ್ದಾರೆ. ಆದರೆ, ನಮ್ಮ ಬೆಂಬಲದ ಅಗತ್ಯವಿಲ್ಲದೆಯೇ ಮೇಯರ್-ಉಪಮೇಯರ್ ಸ್ಥಾನ ಪಡೆದುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೇಯರ್-ಉಪಮೇಯರ್ ಚುನಾವಣೆಗೆ ಹೊಸದಾಗಿ ಮತದಾರರನ್ನು ಸೃಷ್ಟಿಸಿಕೊಳ್ಳುವ ಯತ್ನದಲ್ಲಿ ಕಾಂಗ್ರೆಸ್ ತೊಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಈ ಎಲ್ಲ ಬೆಳವಣಿಗೆಗಳೂ ಯಾವ ಹಂತಕ್ಕೆ ತಲುಪಲಿವೆ ಎಂಬ ಬಗ್ಗೆ ಗಮನ ಹರಿಸಬೇಕೆಂದು ಈ ಹಿಂದೆಯೇ ಹೇಳಿದ್ದೆ ಎಂದರು. ಮೇಯರ್-ಉಪಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಏನೇ ಬೆಳವಣಿಗೆಗಳಾದರೂ ನಾವು ತಲೆ ಕೆಡಿಸಿಕೊಂಡಿಲ್ಲ. ಇದಕ್ಕಿಂತ ಮುಖ್ಯವಾಗಿ ರಾಜ್ಯದ ಜನ ಎದುರಿಸುತ್ತಿರುವ ಸಮಸ್ಯೆಗಳು ಸಾಕಷ್ಟಿವೆ. ಅವುಗಳನ್ನು ನಿವಾರಿಸುವ ಅಗತ್ಯವಿದ್ದು, ಆ ಕಡೆಗೆ ಹೆಚ್ಚಿನ ಗಮನ ಹರಿಸಲಾಗುವುದು. ಮುಂದಿನ ತಿಂಗಳಿನಿಂದ ರಾಜ್ಯ ಪ್ರವಾಸ ಕೈಗೊಂಡು ಗ್ರಾಮೀಣ ಜನರ ನೋವು ಆಲಿಸುತ್ತೇವೆ. ಅವರ ಸಮಸ್ಯೆ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ಕೈಗೊಳ್ಳುವುದಾಗಿ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin