ಬಿಬಿಎಂಪಿ ಮೇಯರ್-ಉಪಮೇಯರ್ ಪಟ್ಟ ಯಾರಿಗೆ…?

ಈ ಸುದ್ದಿಯನ್ನು ಶೇರ್ ಮಾಡಿ

BBMP--01

ಬೆಂಗಳೂರು, ಸೆ.26-ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮಹಾಪೌರರು ಹಾಗೂ ಉಪಮಹಾಪೌರರ ಸ್ಥಾನ ಅಲಂಕರಿಸುವವರು ಯಾರು ಎಂಬ ಕುತೂಹಲ ಕೆರಳಿಸಿದೆ. ಮೇಯರ್ ಸ್ಥಾನ ಎಸ್‍ಸಿಗೆ ಮೀಸಲಾಗಿರುವುದರಿಂದ ಡಿ.ಜೆ.ಹಳ್ಳಿ ವಾರ್ಡ್‍ನ ಸಂಪತ್‍ರಾಜ್ ಹಾಗೂ ಸುಭಾಷ್‍ನಗರ ವಾರ್ಡ್‍ನ ಗೋವಿಂದರಾಜು ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಸಂಪತ್‍ರಾಜ್ ಅವರಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲವಿದ್ದರೆ, ಗೋವಿಂದರಾಜು ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಅವರ ಕೃಪಾಕಟಾಕ್ಷವಿದೆ.

ಗೋವಿಂದರಾಜು ಅವರು ಮೂರು ಬಾರಿ ಬಿಬಿಎಂಪಿಗೆ ಆರಿಸಿ ಬಂದಿದ್ದರೂ ಅವರಿಗೆ ವಾಕ್ಚಾತುರ್ಯವಿಲ್ಲ ಎಂಬುದು ಮೈನಸ್‍ಪಾಯಿಂಟ್ ಆಗಿದ್ದರೆ, ಎರಡನೆ ಅವಧಿಗೆ ಬಿಬಿಎಂಪಿಗೆ ಆರಿಸಿ ಬಂದಿರುವ ಸಂಪತ್‍ರಾಜ್ ಅವರು ಉತ್ತಮ ವಾಗ್ಮಿ ಹಾಗೂ ಚಾಣಾಕ್ಷ ರಾಜಕಾರಣಿಯಾಗಿರುವುದು ಅವರಿಗೆ ಪ್ಲಸ್‍ಪಾಯಿಂಟ್ ಆಗಿರುವುದರಿಂದ ಮುಂದಿನ ಅವಧಿಯ ಮೇಯರ್ ಸ್ಥಾನ ಸಂಪತ್‍ರಾಜ್ ಅವರಿಗೆ ಲಭಿಸುವ ಸಾಧ್ಯತೆ ಇದೆ. ಈ ಬಾರಿ ಮೇಯರ್ ಪಟ್ಟ ನನ್ನ ಕ್ಷೇತ್ರಕ್ಕೆ ಸಿಗಬೇಕು ಎಂದು ಪಟ್ಟು ಹಿಡಿದಿದ್ದ ಸಂಸದ ಡಿ.ಕೆ.ಸುರೇಶ್, ಬಿಬಿಎಂಪಿ ಸದಸ್ಯರಾದ ಆಂಜನಪ್ಪ ಹಾಗೂ ವೇಲುನಾಯ್ಕರ್ ಅವರನ್ನು ಮೇಯರ್ ಸ್ಥಾನಕ್ಕೆ ನಿಯೋಜಿಸುವಂತೆ ಸೂಚಿಸಿದ್ದರು.

ಆದರೆ ಇಬ್ಬರು ಬಿಬಿಎಂಪಿ ಸದಸ್ಯರು ಹೊಸಬರಾಗಿರುವ ಹಿನ್ನೆಲೆಯಲ್ಲಿ ಇಬ್ಬರಲ್ಲಿ ಒಬ್ಬರಿಗೆ ಪ್ರಬಲ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಉಪಮೇಯರ್ ಪಟ್ಟ ಯಾರಿಗೆ?

ಇನ್ನು ಮೈತ್ರಿ ಆಡಳಿತದಲ್ಲಿ ಉಪಮೇಯರ್ ಸ್ಥಾನ ಜೆಡಿಎಸ್‍ಗೆ ಲಭಿಸಿದ್ದು, ಸಾಮಾನ್ಯ ಮಹಿಳಾ ಮೀಸಲಾತಿಯ ಉಪಮಹಾಪೌರರ ಸ್ಥಾನಕ್ಕೆ ಹಾಲಿ ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರಾನಾರಾಯಣ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಾವತಿ ನರಸಿಂಹಮೂರ್ತಿ ಹಾಗೂ ಜೆಡಿಎಸ್ ಗುಂಪಿನ ನಾಯಕಿಯಾಗಿರುವ ರಮೀಳಾ ಉಮಾಶಂಕರ್ ಅವರ ಹೆಸರುಗಳು ಚಾಲ್ತಿಯಲ್ಲಿವೆ. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿ ಪಕ್ಷದ ಮುಖಂಡರಿಂದ ಶಹಭಾಷ್‍ಗಿರಿ ಪಡೆದಿರುವ ಕುಶಾಲನಗರ ವಾರ್ಡ್‍ನ ನೇತ್ರಾನಾರಾಯಣ್ ಅವರ ಹೆಸರು ಉಪಮೇಯರ್ ಸ್ಥಾನಕ್ಕೆ ಪ್ರಬಲವಾಗಿ ಕೇಳಿ ಬರುತ್ತಿದೆ.

ನೇತ್ರಾನಾರಾಯಣ್ ಅವರಿಗೆ ಉಪಮೇಯರ್ ಸ್ಥಾನ ನೀಡಿದರೆ ಚುನಾವಣಾ ವರ್ಷದಲ್ಲಿ ಪಕ್ಷದ ವರ್ಚಸ್ಸು ವೃದ್ಧಿಸುವ ಸಾಧ್ಯತೆ ಇದೆ ಎಂಬ ಭಾವನೆ ಹಿನ್ನೆಲೆಯಲ್ಲಿ ನೇತ್ರಾ ಅವರಿಗೆ ಉಪಮೇಯರ್ ಸ್ಥಾನ ನೀಡುವ ಸಾಧ್ಯತೆ ಇದೆ. ಆದರೆ ಕಳೆದ ಎರಡು ಬಾರಿಯೂ ಉಪಮೇಯರ್ ಸ್ಥಾನವನ್ನು ಒಕ್ಕಲಿಗ ಜನಾಂಗಕ್ಕೆ ನೀಡಿರುವುದು ನೇತ್ರಾ ನಾರಾಯಣ್ ಅವರಿಗೆ ಮೈನಸ್‍ಪಾಯಿಂಟ್ ಆಗಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಕ್ಕಲಿಗರನ್ನು ಹೊರತುಪಡಿಸಿದ ಅಭ್ಯರ್ಥಿಯ ಆಯ್ಕೆಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಹಾಗೂ ರಾಜಗೋಪಾಲನಗರ ವಾರ್ಡ್‍ನ ಪದ್ಮಾವತಿ ನರಸಿಂಹಮೂರ್ತಿ ಮತ್ತು ಕಾವೇರಿಪುರ ವಾರ್ಡ್ ಸದಸ್ಯೆ ಹಾಗೂ ಜೆಡಿಎಸ್ ಗುಂಪಿನ ನಾಯಕಿ ರಮೀಳಾ ಉಮಾಶಂಕರ್ ಅವರಲ್ಲಿ ಒಬ್ಬರು ಉಪಮೇಯರ್ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಾಧನೆ ಆಧಾರದಲ್ಲಿ ನೇತ್ರಾ ನಾರಾಯಣ್ ಮುಂಚೂಣಿಯಲ್ಲಿದ್ದರೆ, ಜಾತಿ ಆಧಾರದಲ್ಲಿ ಪದ್ಮಾವತಿ ಹಾಗೂ ರಮೀಳಾ ಅವರ ಹೆಸರುಗಳು ಕೇಳಿ ಬರುತ್ತಿದ್ದು, ಈ ಮೂವರಲ್ಲಿ ಒಬ್ಬರು ಉಪಮೇಯರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತಪಟ್ಟಿದೆ.

Facebook Comments

Sri Raghav

Admin