ಬಿಬಿಎಂಪಿ ಮೇಯರ್ ಚುನಾವಣೆಗೆ ಸಿದ್ಧತೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

BBMP-01

ಬೆಂಗಳೂರು, ಸೆ.22- ಇದೇ 28ರಂದು ಪಾಲಿಕೆ ಕೌನ್ಸಿಲ್ ಕಟ್ಟಡದಲ್ಲಿ ನಡೆಯಲಿರುವ ಬಿಬಿಎಂಪಿ ಮೇಯರ್, ಉಪಮೇಯರ್, ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆಗೆ ಸಕಲ ಸಿದ್ಧತೆ ಪ್ರಾರಂಭಗೊಂಡಿವೆ.  ಇಂದು ಕೌನ್ಸಿಲ್ ಸಭಾಂಗಣಕ್ಕೆ ಆಗಮಿಸಿದ ಪ್ರಾದೇಶಿಕ ಆಯುಕ್ತೆ ಜಯಂತಿ, ಜಿಲ್ಲಾಧಿಕಾರಿ ವಿ.ಶಂಕರ್, ಕೇಂದ್ರ ವಿಭಾಗದ ಡಿಸಿಪಿ ಸಂದೀಪ್‍ಪಾಟೀಲ್, ಕೌನ್ಸಿಲ್ ಕಾರ್ಯದರ್ಶಿ ಪಲ್ಲವಿ ಮತ್ತಿತರ ಅಧಿಕಾರಿಗಳು ಚುನಾವಣಾ ಪೂರ್ವ ಸಿದ್ಧತೆ ಕೈಗೆತ್ತಿಕೊಂಡರು.  ಮತದಾನದಲ್ಲಿ ಪಾಲ್ಗೊಳ್ಳಲಿರುವ 269 ಸದಸ್ಯರ ಹೆಸರುಗಳ ನಾಮಫಲಕಗಳನ್ನು ಆಯಾ ಸ್ಥಾನದಲ್ಲಿ ಕಾಯ್ದಿರಿಸಲಾಯಿತು. ಈ ವೇಳೆ ಮಾತನಾಡಿದ ಪ್ರಾದೇಶಿಕ ಆಯುಕ್ತೆ ಜಯಂತಿ, ಮೇಯರ್ ಚುನಾವಣೆಗೆ ಸಕಲಸಿದ್ಧತೆ ಮಾಡಿಕೊಂಡಿದ್ದೇವೆ.

ನಾಮಫಲಕಗಳನ್ನು ಹಾಕಿ ಯಾರಾರೂ ಎಲ್ಲಿ ಕುಳಿತುಕೊಳ್ಳಬೇಕೆಂದು ನಿಗದಿ ಪಡಿಸಿದ್ದೇವೆ ಎಂದರು. ಮತದಾನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಮತದಾರರಿಗೆ ಗುರುತಿನ ಚೀಟಿ ಕಡ್ಡಾಯ ಮಾಡಿದ್ದೇವೆ. ಸದಸ್ಯರ ಜತೆ ಆಗಮಿಸುವ ಬೆಂಬಲಿಗರು ಹಾಗೂ ಹಿಂಬಾಲಕರಿಗೆ ಕೌನ್ಸಿಲ್ ಕಟ್ಟಡಕ್ಕೆ ನಿಷೇಧ ಮಾಡಲಾಗಿದೆ. ಹಾಗಾಗಿ ಬಿಗಿ ಭದ್ರತೆ ಒದಗಿಸುವಂತೆ ಪೊಲೀಸರಿಗೆ ನಾವು ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು. ಈ ಬಾರಿ ಮತದಾರರ ಪಟ್ಟಿಯಲ್ಲಿ ಅತಿ ಹೆಚ್ಚು ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರ ಹೆಸರು ಸೇರ್ಪಡೆಯಾಗಿರುವುದರಿಂದ ಹೊಸ ಮತದಾರರ ಗುರುತು ಪತ್ತೆಹಚ್ಚಲು ವಿಧಾನಸಭೆ ಸಚಿವಾಲಯದ ಕೆಲವು ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುತ್ತಿದ್ದೇವೆ ಎಂದರು.

ಮೇಯರ್ ಚುನಾವಣೆ ಸಂದರ್ಭದಲ್ಲಿ ಎಲ್ಲಾರೀತಿಯ ವಾಹನಗಳನ್ನು ಪಾಲಿಕೆ ಆವರಣಕ್ಕೆ ಬರದಂತೆ ನಿಷೇಧಿಸಿದ್ದೇವೆ. ಪಾಲಿಕೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ಪಾರ್ಕಿಂಗ್ ಮಾಡಬೇಕಾಗಿದೆ ಎಂದರು.   ಒಟ್ಟಾರೆ ಯಾವುದೇ ಗೊಂದಲವಿಲ್ಲದಂತೆ ಚುನಾವಣೆ ನಡೆಸಲು ಸಕಲ ಸನ್ನದ್ಧರಾಗಿದ್ದೇವೆ ಎಂದು ಜಯಂತಿ ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin