ಬಿಬಿಎಂಪಿ ಮೇಯರ್ ಪಟ್ಟಕ್ಕಾಗಿ ಮೂರು ಪಕ್ಷಗಳಲ್ಲಿ ಗೇಮ್ ಪ್ಲಾನ್

ಈ ಸುದ್ದಿಯನ್ನು ಶೇರ್ ಮಾಡಿ

BBMP

ಬೆಂಗಳೂರು, ಸೆ.25-ಬಿಬಿಎಂಪಿ ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮಹಾಪೌರರ ಪಟ್ಟ ದಕ್ಕಿಸಿಕೊಳ್ಳಲು ಮೂರೂ ಪಕ್ಷಗಳಲ್ಲೂ ಗೇಮ್ ಪ್ಲ್ಯಾನ್ ಶುರುವಾಗಿದೆ. ಇದೇ 28ರಂದು ಮೇಯರ್ ಚುನಾವಣೆ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಯುವುದು ಬಹುತೇಕ ಖಚಿತವಾಗಿದೆ. ಉಭಯ ಪಕ್ಷಗಳ ನಡುವೆ ಕೊಡು-ಕೊಳ್ಳುವ ಮಾತುಕತೆ ಮಾತ್ರ ಬಾಕಿ ಉಳಿದಿದ್ದು, ಕಾಂಗ್ರೆಸ್‍ನಿಂದ ಜಿ.ಪದ್ಮಾವತಿ ಇಲ್ಲವೆ ಸೌಮ್ಯ ಶಿವಕುಮಾರ್ ಮೇಯರ್ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ಜೆಡಿಎಸ್ ಕೂಡ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದ್ದು, ಅದೃಷ್ಟವಶಾತ್ ಅಂತಹ ಅವಕಾಶ ದಕ್ಕಿದರೆ ಲಗ್ಗೆರೆ ವಾರ್ಡ್‍ನ ಮಂಜುಳ ನಾರಾಯಣಸ್ವಾಮಿ ಮೇಯರ್ ಅಭ್ಯರ್ಥಿಯಾಗಲಿದ್ದಾರೆ. ಆದರೆ ಜೆಡಿಎಸ್‍ನೊಂದಿಗೆ ಮೈತ್ರಿ ಇಲ್ಲ ಎಂದು ಪರೋಕ್ಷವಾಗಿ ಹೇಳಿರುವ ಬಿಜೆಪಿ ಮೇಯರ್ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿರುವುದರಿಂದ ಮೂರೂ ಪಕ್ಷಗಳ ನಡುವೆ ಮೇಯರ್ ಸ್ಥಾನ ದಕ್ಕಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಆರಂಭವಾಗಿದೆ.

112 ಸದಸ್ಯ ಸ್ಥಾನ ಹೊಂದಿರುವ ಕಾಂಗ್ರೆಸ್‍ಗೆ 23 ಸದಸ್ಯ ಬಲದ ಜೆಡಿಎಸ್ ಬೆಂಬಲ ನೀಡಿದರೆ 135 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಮೇಯರ್ ಆಗಲಿದ್ದಾರೆ.
ಆದರೆ 127 ಸ್ಥಾನಗಳನ್ನು ಹೊಂದಿರುವ ಬಿಜೆಪಿಗೆ 7 ಪಕ್ಷೇತರರು ಸಾಥ್ ನೀಡಿದರೆ 134 ಸ್ಥಾನಗಳನ್ನು ಪಡೆಯುವ ಮೂಲಕ ಮೇಯರ್ ಸ್ಥಾನದಿಂದ ವಂಚಿತರಾಗುತ್ತಾರೆ. ಆದರೂ ಬಿಜೆಪಿಯವರು ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಆ ಪಕ್ಷ ಗೇಮ್ ಪ್ಲ್ಯಾನ್ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಬಿಜೆಪಿ ಮೇಯರ್‍ಗೆ ಪಟ್ಟು ಹಿಡಿದಿರುವ ಮಾಜಿ ಡಿಸಿಎಂ ಆರ್.ಅಶೋಕ್ ಜೆಡಿಎಸ್‍ನೊಂದಿಗೆ ಮೈತ್ರಿ ಇಲ್ಲ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದರೂ ನಮ್ಮ ಪಕ್ಷ ಮೇಯರ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಹೇಳಿಕೆ ನೀಡಿರುವುದು ಗೇಮ್ ಪ್ಲ್ಯಾನ್‍ನ ಒಂದು ಅಂಗವಾಗಿದೆ. 27ರಂದು ಬಿಜೆಪಿ ಸದಸ್ಯರ ಸಭೆ ಕರೆದು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ತಂತ್ರಕ್ಕೆ ಯಾವ ರೀತಿ ತಿರುಮಂತ್ರ ಹಾಕಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ.  ಕಾಂಗ್ರೆಸ್ ಇಲ್ಲವೆ ಜೆಡಿಎಸ್‍ನ ಇಬ್ಬರು ಸದಸ್ಯರು ಚುನಾವಣೆಗೆ ಗೈರು ಹಾಜರಾದರೂ ಬಿಜೆಪಿಗೆ ಮೇಯರ್ ಸ್ಥಾನ ಅನಾಯಾಸವಾಗಿ ಒಲಿದು ಬರಲಿದೆ.  ಹೀಗಾಗಿ ಮೂರೂ ಪಕ್ಷಗಳಲ್ಲೂ ಮೇಯರ್ ಸ್ಥಾನ ದಕ್ಕಿಸಿಕೊಳ್ಳಲು ತಂತ್ರ-ಪ್ರತಿತಂತ್ರ ರೂಪಿಸುತ್ತಿರುವುದಂತೂ ಸತ್ಯ.

► Follow us on –  Facebook / Twitter  / Google+

Facebook Comments

Sri Raghav

Admin