ಬಿಬಿಎಂಪಿ ವಿಭಜನಾ ತಜ್ಞರ ಸಮಿತಿಗೆ ತೆರಿಗೆ ಹೊಣೆ

ಈ ಸುದ್ದಿಯನ್ನು ಶೇರ್ ಮಾಡಿ

bbmp

ಬೆಂಗಳೂರು, ಅ.30-ಬಿಬಿಎಂಪಿಯ ಆದಾಯವನ್ನು ವೃದ್ದಿಗೊಳಿಸುವ ಉದ್ದೇಶದಿಂದ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಜವಾಬ್ದಾರಿಯನ್ನು  ಬಿ.ಎಸ್.ಪಾಟೀಲ್ ನೇತೃತ್ವದ ಬಿಬಿಎಂಪಿ ವಿಭಜನಾ ತಜ್ಞರ ಸಮಿತಿಗೆ ವಹಿಸಲಾಗಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಮಹಾನಗರದಲ್ಲಿ ದಿನೇ ದಿನೇ ನೂರಾರು ಕಟ್ಟಡಗಳು ತಲೆ ಎತ್ತುತ್ತಿವೆ. ನಾಗರಿಕರು ಸ್ವಯಂಪ್ರೇರಿತರಾಗಿ ತೆರಿಗೆಯನ್ನು ಕಟ್ಟಬೇಕಾಗಿದೆ. ಆದರೆ ಆ ಕೆಲಸಗಳು ಆಗುತ್ತಿಲ್ಲ. ಸಾವಿರಾರು ಕಟ್ಟಡಗಳು ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿದ್ದು, ಪಾಲಿಕೆಗೆ ಬರುವ ಆದಾಯ ತಪ್ಪುತ್ತಿದೆ. ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಮತ್ತು ಆದಾಯ ಕ್ರೋಢೀಕರಣ ದೃಷ್ಟಿಕೋನದಿಂದ ಬಿಬಿಎಂಪಿ ವಿಭಜನಾ ತಜ್ಞರ ಸಮಿತಿಗೆ ಈ ಜವಾಬ್ದಾರಿ ವಹಿಸುವ ನಿರ್ಣಯವನ್ನು ಸ್ವಯಂಪ್ರೇರಿತವಾಗಿ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯನ್ನು ವಿಭಜನೆ ಮಾಡಲು ತಜ್ಞರ ಸಮಿತಿಯನ್ನು ಸರ್ಕಾರ ನೇಮಕ ಮಾಡಿದೆ. ಸಂಪನ್ಮೂಲ ಕ್ರೋಢೀಕರಣ ಮಾಡಲು ಪೈಲಟ್ ಮಾದರಿಯಲ್ಲಿ ಈ ಸಮಿತಿ ಅಧ್ಯಯನ ನಡೆಸುತ್ತಿದೆ. ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಕಟ್ಟಡಗಳ ಪರಿಶೀಲನೆ, ಹಾಲಿ ಕಟ್ಟಡಗಳ ಮರುಪರಿಶೀಲನೆಯನ್ನು ಈ ಸಮಿತಿ ನಡೆಸಿ ವರದಿ ನೀಡಲಿದೆ. ಪಾಲಿಕೆಯ ಹಿತದೃಷ್ಟಿಯಿಂದ ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ವಲಯ ವ್ಯಾಪ್ತಿಯಲ್ಲಿ ಕೈ ಬಿಟ್ಟಿರುವ ಸ್ವತ್ತುಗಳ ಪರಿಶೀಲನೆಯನ್ನು ವಿಭಜನಾ ಸಮಿತಿಗೆ ವಹಿಸಲು ನಿರ್ಣಯ ಕೈಗೊಳ್ಳಲಾಗಿದ್ದು, ಈ ಸಂಬಂಧದ ಕಡತಗಳನ್ನು ಆಯುಕ್ತರಿಗೆ ರವಾನಿಸಲಾಗಿದೆ ಎಂದು ತಿಳಿಸಿದರು.

ಆದಾಯ ಸೋರಿಕೆಯಿಂದ 200 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. 343 ಬೃಹತ್ ಕಟ್ಟಡಗಳಿಂದ ತೆರಿಗೆ ವಂಚನೆಯಾಗಿದೆ. ಮಾರತ್‍ಹಳ್ಳಿ, ವೈಟ್‍ಫೀಲ್ಡ್, ಮಹದೇವಪುರ ಮುಂತಾದ ಕೈಗಾರಿಕಾ ವಲಯ ಪ್ರದೇಶಗಳಲ್ಲಿ ಇಂತಹ ತೆರಿಗೆ ವಂಚನೆ ಪ್ರಮಾಣ ಹೆಚ್ಚಾಗಿದೆ. ಇದನ್ನು ಈ ಸಮಿತಿ ಪರಿಶೀಲನೆ ನಡೆಸಲಿದೆ ಎಂದು ಗುಣಶೇಖರ್ ತಿಳಿಸಿದರು. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಶೇ.68ರಷ್ಟು ಸಾಧನೆ ಮಾಡಿರುವುದಾಗಿ ಅವರು ಹೇಳಿದರು. 2017-18ನೆ ಸಾಲಿನಲ್ಲಿ 1756 ಕೋಟಿ ರೂ.ಗಳಲ್ಲಿ 468 ಕೋಟಿ ರೂ.ಗಳು. ಆನ್‍ಲೈನ್ ಮೂಲಕವೇ ಸಂಗ್ರಹವಾಗಿದೆ ಎಂದು ತಿಳಿಸಿದರು.

ಈ ವರ್ಷ ಎರಡು ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ ಎಂದು ಅವರು ಹೇಳಿದರು. ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಟ್ಟಡಗಳ ಸರ್ವೆ ನಡೆಸಿ ನೋಟಿಸ್ ನೀಡಲಾಗಿದೆ. ದಕ್ಷಿಣವಲಯದ ನಾಲ್ಕು ಕಟ್ಟಡಗಳಿಂದ ವ್ಯತ್ಯಾಸದ ಬಾಕಿ 36.38 ಕೋಟಿ ಇದೆ. ಬೊಮ್ಮನಹಳ್ಳಿಯಲ್ಲಿ 28.20 ಕೋಟಿ, ಮಹದೇವಪುರ 3 ಕಟ್ಟಡದಿಂದ 23 ಕೋಟಿ ಬಾಕಿ ಬರಬೇಕಿದೆ. ಒಟ್ಟು 12 ಕಟ್ಟಡಗಳಿಂದ 153 ಕೋಟಿ ರೂ. ಬಾಕಿ ಬರಬೇಕಿದೆ. ಟರ್ಫ್ ಕ್ಲಬ್‍ನಿಂದ 60 ಕೋಟಿ ರೂ. ಬಾಕಿ ವಸೂಲಿ ಮಾಡಲು ಆಯುಕ್ತರು ಆದೇಶಿಸಿದ್ದಾರೆ. ನಗರದಲ್ಲಿ ದೆಹಲಿ ಮಾದರಿಯಲ್ಲಿ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಮಾಡಲು 35 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ನೀಡಲಾಗಿದೆ ಎಂದು
ಹೇಳಿದರು.

Facebook Comments

Sri Raghav

Admin