ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ಫೈಟ್, ಗುಂಡಣ್ಣನಿಗೂ ಲಕ್

ಈ ಸುದ್ದಿಯನ್ನು ಶೇರ್ ಮಾಡಿ

BBMP-News-01

ಬೆಂಗಳೂರು, ಅ.7- ಬಿಬಿಎಂಪಿಯ 12 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಇದೇ 25ರಂದು ಚುನಾವಣೆ ನಿಗದಿಯಾಗಿರುವ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಜೆಡಿಎಸ್‍ಗೆ ನಾಲ್ಕು ಸಮಿತಿ ಬಿಟ್ಟುಕೊಡಲು ಕಾಂಗ್ರೆಸ್ ಸಮ್ಮತಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮಿತಿ ಸಂಖ್ಯೆಯನ್ನು 5ಕ್ಕೆ ಹೆಚ್ಚಳ ಮಾಡಬೇಕು ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯನ್ನು ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿರುವುದು ಹೊಸ ತಲೆನೋವಾಗಿ ಪರಿಣಮಿಸಿದೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯನ್ನು ಜೆಡಿಎಸ್‍ಗೆ ಬಿಟ್ಟುಕೊಡುವ ಅನಿವಾರ್ಯತೆ ಕಾಂಗ್ರೆಸ್‍ಗೆ ಎದುರಾಗಿದೆ. ಅದರ ಬದಲು ಬೇರೆ ಸಮಿತಿ ನೀಡಲಾಗುವುದು ಎಂಬ ಬೇಡಿಕೆಗೆ ಜೆಡಿಎಸ್‍ಗೆ ಮಣಿಯುತ್ತಿಲ್ಲ. ಪ್ರಸ್ತುತ ನಗರಯೋಜನೆ, ಶಿಕ್ಷಣ, ಲೆಕ್ಕಪತ್ರ ಹಾಗೂ ವಾರ್ಡ್‍ಮಟ್ಟದ ಕಾಮಗಾರಿ ಸಮಿತಿಯನ್ನು ಹೊಂದಿರುವ ಜೆಡಿಎಸ್‍ಗೆ ಈ ಬಾರಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಬೃಹತ್ ಕಾಮಗಾರಿ, ಶಿಕ್ಷಣ, ಸಾಮಾಜಿಕ ನ್ಯಾಯ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿ ದೊರೆಯುವ ಸಾಧ್ಯತೆ ಇದೆ. ತೆರಿಗೆ ಸಮಿತಿ ಜೆಡಿಎಸ್‍ಗೆ ಬಿಟ್ಟುಕೊಟ್ಟರೆ ಮಾರಪ್ಪನಪಾಳ್ಯದ ಜೆಡಿಎಸ್ ಸದಸ್ಯ ಮಹದೇವ್ ಅಧ್ಯಕ್ಷರಾಗುವುದು ಬಹುತೇಕ ಖಚಿತ. ಉಳಿದಂತೆ ಗಂಗಮ್ಮ, ರಾಜಶೇಖರ್, ಇಮ್ರಾನ್‍ಪಾಷಾ ಹಾಗೂ ಸಲ್ಮಾ ಅವರುಗಳಿಗೆ ಉಳಿದ ಸಮಿತಿ ಅಧ್ಯಕ್ಷ ಸ್ಥಾನ ದೊರೆಯುವ ಸಾಧ್ಯತೆಗಳಿವೆ.

ಗುಂಡಣ್ಣನಿಗೆ ಲಕ್:

ಪಕ್ಷೇತರ ಸದಸ್ಯರಾಗಿರುವ ಗಾಯತ್ರಿ ಹಾಗೂ ಏಳುಮಲೆ ಅವರು ಸತತ ಎರಡನೇ ಬಾರಿಗೆ ಕ್ರಮವಾಗಿ ಮಾರುಕಟ್ಟೆ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಈ ಬಾರಿಯೂ ಈ ಇಬ್ಬರೂ ಪಕ್ಷೇತರರಿಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ದೊರೆಯುವುದು ಬಹುತೇಕ ನಿಚ್ಛಳ. ಇದರೊಂದಿಗೆ ಮೊದಲನೆ ಅವಧಿಯಲ್ಲಿ ನಗರ ಯೋಜನೆ ಅಧ್ಯಕ್ಷರಾಗಿದ್ದ ದೊಮ್ಮಲೂರು ವಾರ್ಡ್‍ನ ಲಕ್ಷ್ಮೀನಾರಾಯಣ್(ಗುಂಡಣ್ಣ) ಅವರಿಗೆ ಈ ಬಾರಿ ಮತ್ತೊಮ್ಮೆ ಅಧ್ಯಕ್ಷಗಾದಿ ಸಿಗುವ ಭರವಸೆದೊರೆತಿದೆ.

ಪಕ್ಷೇತರರಾಗಿದ್ದರೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಗುಂಡಣ್ಣ ಅವರು ಮೇಯರ್ ಸಂಪತ್‍ರಾಜ್ ಆಪ್ತವಲಯದಲ್ಲಿದ್ದಾರೆ. ಮಾತ್ರವಲ್ಲ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದರಿಂದ ಕಾಂಗ್ರೆಸ್ ಕೃಪೆ ಲಕ್ಷ್ಮೀನಾರಾಯಣ್‍ಗೆ ಒಲಿಯುವ ಸಾಧ್ಯತೆಗಳಿವೆ.

ಹಿರಿಯರಿಗೆ ಮಣೆ:

ಜೆಡಿಎಸ್, ಪಕ್ಷೇತರರನ್ನು ತೃಪ್ತಿಪಡಿಸಿದ ನಂತರ ಉಳಿಯುವ ಸಮಿತಿಗಳು ಕಾಂಗ್ರೆಸ್ ಪಾಲಾಗಲಿದ್ದು, ಹಿರಿಯ ಸದಸ್ಯರಿಗೆ ಮಣೆಹಾಕಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಹಿರಿಯ ಸದಸ್ಯರಾದ ಗೋವಿಂದರಾಜು, ರಾಮಚಂದ್ರ, ಕೇಶವಮೂರ್ತಿ, ಜಾಕೀರ್‍ಹುಸೇನ್, ರಾಜಣ್ಣ ಅವರ ಹೆಸರು ಮುಂಚೂಣಿಯಲ್ಲಿದ್ದರೆ ಇವರೊಂದಿಗೆ ಹೊಸಬರಾದ ಆಂಜನಪ್ಪ, ವೇಲುನಾಯ್ಕರ್ ಅವರ ಹೆಸರುಗಳು ಕೇಳಿಬರುತ್ತಿದೆ.

Facebook Comments

Sri Raghav

Admin