ಬಿರುಕು ಬಿಟ್ಟ ನಾಲೆ, ಪೋಲಾಯ್ತು ಹೇಮಾವತಿ ನೀರು

ಈ ಸುದ್ದಿಯನ್ನು ಶೇರ್ ಮಾಡಿ

Hemavathi--01

ತಿಪಟೂರು. ಆ. 14-ತಾಲ್ಲೂಕಿನ ನಾರಸಿಕಟ್ಟೆ ಗ್ರಾಮದ ಬಳಿ ಹೇಮಾವತಿ ನಾಲೆಯ ಮಣ್ಣು ಕುಸಿದು ಬಿರುಕು ಬಿಟ್ಟ ಪರಿಣಾಮ ನಾಲೆಯ ನೀರು ಅಪಾರ ಪ್ರಮಾಣದಲ್ಲಿ ತೋಟ ಹಾಗೂ ಮನೆಗಳಿಗೆ ನುಗ್ಗಿ ಪೋಲಾಗಿದೆ. ಹಾಸನ ಜಿಲ್ಲೆ ಗೊರೂರು ಜಲಾಶಯದಿಂದ ಹೇಮಾವತಿ ನದಿಯ ನೀರನ್ನು ತುಮಕೂರು ಜಿಲ್ಲೆಗೆ ಕಳೆದ ಎರಡು ದಿನಗಳಿಂದ ಹರಿಸಲಾಗುತ್ತಿದ್ದು, 1300 ಕ್ಯೂಸೆಕ್ಸ್ ನೀರು ತಾಲ್ಲೂಕಿನ ನಾಲೆಗಳಿಗೆ ಹರಿಯುತ್ತಿದೆ. ಆದರೆ ತಾಲ್ಲೂಕಿನ ನಾರಸಿಕಟ್ಟೆ ಗ್ರಾಮದ ಬಳಿ ಹೇಮಾವತಿ ನಾಲೆಯು ಬಿರುಕು ಬಿಟ್ಟ ಪರಿಣಾಮ ಹೆಚ್ಚಿನ ನೀರು ಪೋಲಾಗಿ ಅಕ್ಕಪಕ್ಕದ ತೋಟ ಮತ್ತು ಮನೆಗಳಿಗೆ ನುಗ್ಗಿದೆ.

ಘಟನೆಯ ಮಾಹಿತಿ ಪಡೆದ ತುಮಕೂರು ಹೇಮಾವತಿ ನಾಲೆಯ ಮುಖ್ಯ ಇಂಜಿನಿಯರ್ ಶಿವಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ನಾಲೆಯ ನೀರಿನ ಪ್ರಮಾಣವನ್ನು ಕಡಿಮೆಗೊಳಿಸಿ, ಹಾನಿಗೊಂಡ ನಾಲೆಯ ಭಾಗಗಳಿಗೆ ಮರಳಿನ ಚೀಲವನ್ನು ಜೋಡಿಸಬೇಕೆಂದು ಸಿಬ್ಬಂದಿಗಳಿಗೆ ಸೂಚಿಸಿದರು.
ಸ್ಥಳಕ್ಕೆ ಜೆಡಿಎಸ್ ಮುಖಂಡ ಲೋಕೇಶ್ವರ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತನಾಡಿ ಈಗಾಗಲೇ ನೀರಿನ ಅಭಾವ ಹೆಚ್ಚಿದ್ದು, ರೈತರು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ.

ಕಳೆದ ಎರಡು ದಿನಗಳಿಂದ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸಲಾಗುತ್ತಿದ್ದು, ಒಡೆದು ಹೋಗಿರುವ ನಾಲೆಯ ದುರಸ್ಥಿ ಕಾರ್ಯವನ್ನು ತಕ್ಷಣ ಮಾಡಬೇಕು. ಅಲ್ಲದೆ ಮುನ್ನಚ್ಚರಿಕೆ ಕ್ರಮ ವಹಿಸಿ ಇತರೆ ಸಣ್ಣಪುಟ್ಟ ಬಿರುಕು ಬಿಟ್ಟ ಸ್ಥಳಗಳನ್ನು ಪರಿಶೀಲಿಸಿ ಕೆರೆಗಳಿಗೆ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದರು.  ಈ ಸಂದರ್ಭದಲ್ಲಿ ಇಂಜಿನಿಯರ್‍ಗಳಾದ ವಾಸುದೇವ್, ವಿಜಯಕುಮಾರ್, ವೆಂಕಟಚಲಪತಿ, ಜೆಡಿಎಸ್ ಮುಖಂಡ ಕರಡಿ ದೇವರಾಜು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು, ರೈತರು ನೆರೆದಿದ್ದರು.

Facebook Comments

Sri Raghav

Admin