ಬಿರುಕು ಬಿಟ್ಟ ನೀರಿನ ಟ್ಯಾಂಕ್ : ಪ್ರಾಣ ಭಯದಲ್ಲಿ ವಿದ್ಯಾರ್ಥಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಹುಳಿಯಾರು, ಮಾ.6-ಪಟ್ಟಣದ ಎಂಪಿಎಸ್ ಶಾಲೆ ಮೈದಾನದಲ್ಲಿರುವ ನೀರಿನ ಟ್ಯಾಂಕೊಂದು ನಿತ್ಯ ಸಮಸ್ಯೆ ಒಡ್ಡುತ್ತಿದೆ. ಹಳೆಯ ನೀರಿನ ಟ್ಯಾಂಕ್ ಸಂಪೂರ್ಣ ಬಿರುಕು ಬಿಟ್ಟಿದು ಧರೆಗುರುಳುವ ಮಟ್ಟ ತಲುಪಿದೆ. ಇದರ ಆಸುಪಾಸಿನಲ್ಲಿ ಸಂಚಾರ ನಡೆಸುವ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಾಣ ಭಯದಲ್ಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣಕ್ಕೆ ನೀರು ಪೂರೈಸಲು ನಿರ್ಮಾಣವಾದ ಮೊದಲ ಟ್ಯಾಂಕ್ ಇದಾಗಿದೆ. ಹಲವು ವರ್ಷಗಳಿಂದ ಇಡೀ ಗ್ರಾಮಕ್ಕೆ ನೀರು ಪೂರೈಕೆಯನ್ನು ಮಾಡುತ್ತಿದ್ದ ಈ ನೀರಿನ ಟ್ಯಾಂಕ್ ಬಿರುಕು ಬಿಟ್ಟ ಪರಿಣಾಮ ಈಗಾಗಲೇ 2 ಹೊಸ ಟ್ಯಾಂಕ್‍ಗಳನ್ನು ನಿರ್ಮಿಸಲಾಗಿದೆ. ಹೊಸ ಟ್ಯಾಂಕ್ ನಿರ್ಮಾಣವಾಗಿದ್ದರು ಹಳೆಯ ಟ್ಯಾಂಕನ್ನು ಕೆಡವದಿರುವುದರಿಂದ ಇಲ್ಲಿನ ನಿವಾಸಿಗಳಿಗೆ ಹಾಗೂ ದಾರಿಹೋಕರಿಗೆ ನಿತ್ಯ ಸಮಸ್ಯೆ ಎದುರಾಗಿದೆ.

ಹಳೆಯ ಟ್ಯಾಂಕ್ ಕೆಳ ಭಾಗದಲ್ಲಿ ಸಂಪೂರ್ಣ ಬಿರುಕು ಬಿಟ್ಟಿದ್ದು ಸಿಮೆಂಟ್ ಸ್ಲಬ್‍ಗಳು ಎದ್ದು ಹೋಗಿವೆ. ಕಬ್ಬಿಣದ ರಾಡುಗಳು ಗೋಚರಿಸುತ್ತಿದ್ದು ಧರಶಾಹಿಯಾಗುವ ಮಟ್ಟ ತಲುಪಿದೆ.
ಹೊಸ ಟ್ಯಾಂಕ್ ನಿರ್ಮಾಣವಾಗಿ ನೀರು ಪೂರೈಕೆಯ ಕಾರ್ಯ ಮಾಡುತ್ತಿದ್ದರೂ ಹಳೆಯ ಟ್ಯಾಂಕ್ ಕೆಡವುವರ ಬಗ್ಗೆ ಸಂಬಂಧಪಟ್ಟವರು ಯೋಚನೆಯನ್ನೇ ಮಾಡದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದಲೂ ಹಳೆಯ ಟ್ಯಾಂಕನ್ನು ಕೆಡವಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರೂ ಯಾವುದೇ ರೀತಿಯಲ್ಲೂ ಪ್ರಯೋಜನವಾಗಿಲ್ಲ. ಈ ಟ್ಯಾಂಕ್ ಅಡಿಯಲ್ಲೇ ಕೈ ಪಂಪಿದ್ದು ಶಾಲೆಗೆ ಬರುವ ಮಕ್ಕಳು ನೀರು ಕುಡಿಯಲು, ಬಿಸಿಯೂಟವಾದ ನಂತರ ತಟ್ಟೆ ತೊಳೆಯಲು ಇದರಡಿ ಇದ್ದೇ ಇರುತ್ತಾರೆ.
ಹಾಗಾಗಿ ಅಪಾಯದ ಸುಳಿಯಲ್ಲಿರುವ ಈ ನಿರುಪಯುಕ್ತ ಬಿರುಕು ಬಿಟ್ಟ ನೀರಿನ ಟ್ಯಾಂಕ್ ಆದಷ್ಟು ಬೇಗ ಕೆಡವುವಲ್ಲಿ ಸಂಬಂದಿಸಿದ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin