ಬಿರುಬಿಸಿಲಿನ ಎಫೆಕ್ಟ್ : 35 ರೂ. ದಾಟಿದ ಎಳನೀರಿನ ಬೆಲೆ

ಈ ಸುದ್ದಿಯನ್ನು ಶೇರ್ ಮಾಡಿ

coconut

ಬೆಂಗಳೂರು,ಏ.24- ಬಿರು ಬೇಸಿಗೆ, ಪೂರೈಕೆ ಕೊರತೆ, ಮಾರುಕಟ್ಟೆಯಲ್ಲೇ ದರ ಹೆಚ್ಚಳ, ಸಾಗಾಣಿಕೆ ವೆಚ್ಚ ದುಬಾರಿ ಇತ್ಯಾದಿ ಕಾರಣಗಳಿಂದ ಕೇವಲ ಎರಡೇ ತಿಂಗಳಲ್ಲಿ ಎಳನೀರು ಬೆಲೆ ಮತ್ತೆ 5 ರೂ. ಹೆಚ್ಚಳವಾಗಿದೆ.ಎರಡು ತಿಂಗಳ ಹಿಂದೆ 25 ರೂ.ನಿಂದ 30 ರೂ.ಗೆ ಏರಿಕೆ ಮಾಡಲಾಗಿತ್ತು. ಆದರೆ ಕಳೆದ ಒಂದು ವಾರದಿಂದ ಎಳನೀರು ಇನ್ನಷ್ಟು ದುಬಾರಿಯಾಗಿದ್ದು, 35 ರೂ.ಗೆ ನಗರದ ಹಲವೆಡೆ ಮಾರಾಟವಾಗುತ್ತಿದೆ. ಆಸ್ಪತ್ರೆ ಪ್ರದೇಶದಲ್ಲಿ ಈ ಬೆಲೆ 40 ರೂ. ಕೂಡ ಆಗಿದೆ.
ಎಲ್ಲೆಡೆ ದುಬಾರಿ:

ನಗರದ ಜನನಿಬಿಡ ಪ್ರದೇಶಗಳು, ಪ್ರಮುಖ ವೃತ್ತಗಳು, ಬಸï, ರೈಲು ನಿಲ್ದಾಣ, ಆಸ್ಪತ್ರೆ, ದೇವಸ್ಥಾನ ಇತ್ಯಾದಿ ಜನ ಹೆಚ್ಚಾಗಿ ಕಂಡು ಬರುವ ಪ್ರದೇಶದಲ್ಲಿ ಪ್ರಮುಖ ರಸ್ತೆಗಳ ಜಂಕ್ಷನ್  ಗಳಲ್ಲಿ ಇರುವ ಎಳನೀರು ಅಂಗಡಿಗಳಲ್ಲಿ ಬೆಲೆ 35 ರೂ. ತಲುಪಿದೆ. ಜನವಸತಿ ಪ್ರದೇಶ, ಸಣ್ಣಪುಟ್ಟ ರಸ್ತೆ, ಗಲ್ಲಿಗಳಲ್ಲಿ ಹಾಕಿಕೊಂಡಿರುವ ಎಳನೀರು, ತಳ್ಳುಗಾಡಿಗಳಲ್ಲಿ ತರುವ ಸಣ್ಣ ಗಾತ್ರದ ಎಳನೀರುಗಳ ಬೆಲೆ ಅಷ್ಟಾಗಿ ಹೆಚ್ಚಾಗಿಲ್ಲ.ಆಸ್ಪತ್ರೆ ಸಮೀಪ ಇರುವ ಎಳನೀರಿನ ಬೆಲೆ 40 ತಲುಪಿದೆ. ಅದಾಗಲೇ ಉತ್ತರ ಕರ್ನಾಟಕ ಭಾಗಗಳಲ್ಲಿ, ಬಯಲುಸೀಮೆ ಜಿಲ್ಲೆಗಳಲ್ಲಿ, ಕರಾವಳಿ ಪ್ರದೇಶದಲ್ಲಿ ಎಳನೀರು ಬೆಲೆ 40 ರೂ. ಆಗಿದೆ. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಬೆಲೆ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಬೇಸಿಗೆ ಬೇಗೆ ನೀಗಿಸುವ ಎಳನೀರು ಜೇಬಿಗೆ ಇನ್ನಷ್ಟು ಭಾರವಾಗಿ ಪರಿಣಮಿಸುತ್ತಿದೆ.

ಮಾರುಕಟ್ಟೆಯಲ್ಲೇ ಬೆಲೆ ಜಾಸ್ತಿ:

ಸಾಮಾನ್ಯವಾಗಿ ಮಧ್ಯವರ್ತಿಗಳು ಬೆಲೆ ಹೆಚ್ಚಿಸುವುದರಿಂದ ಇಷ್ಟು ಸಮಯ ಎಳನೀರಿನ ಬೆಲೆ ವರ್ಷಕ್ಕೆ ಒಮ್ಮೆ ಹೆಚ್ಚಳ ಆಗುತ್ತಿತ್ತು. ಆದರೆ ತೀವ್ರ ಬರ, ತೆಂಗು ಬೆಳೆ ನಷ್ಟ, ಪೂರೈಕೆಯಲ್ಲಿ ಕೊರತೆ ಆಗಿರುವುದರಿಂದ ಈ ವರ್ಷ ಎರಡು ತಿಂಗಳಲ್ಲಿ ಎರಡನೇ ಸಾರಿ ಬೆಲೆ ಹೆಚ್ಚಳ ಆಗಿದೆ.  ಬೆಂಗಳೂರಿನ ಹಲವು ಭಾಗಗಳಿಗೆ ಹಳೆ ಮೈಸೂರು ಪ್ರಾಂತ್ಯದಿಂದ ಎಳನೀರು ಪೂರೈಕೆಯಾಗುತ್ತದೆ. ಹೆಚ್ಚಿನವರು ಮದ್ದೂರು ಮಾರುಕಟ್ಟೆಯಿಂದ ಲೋಡ್  ಗಟ್ಟಲೆ ಎಳನೀರು ತರಿಸಿಕೊಳ್ಳುತ್ತಾರೆ. ಅಲ್ಲಿಯೇ ಈಗ ಎಳನೀರು ಕೊರತೆ ಎದುರಾಗಿದ್ದು, ಮಾರಾಟ ಬೆಲೆಯಲ್ಲಿ 5 ರೂ. ಹೆಚ್ಚಳ ಮಾಡಲಾಗಿದೆ. ಇದರಿಂದ ಅದನ್ನು ಕೊಂಡು ಬೆಂಗಳೂರು ನಗರಕ್ಕೆ ತಂದು ವ್ಯಾಪಾರ ಮಾಡುವವರು ಬೆಲೆ ಹೆಚ್ಚಿಸಿದ್ದಾರೆ. ವ್ಯಾಪಾರಿಗಳು ಹೇಳೋದೇನು? ಮದ್ದೂರು ಮಾರುಕಟ್ಟೆಯಲ್ಲೇ ಎಳನೀರಿಗೆ 30 ರೂ. ಮಾಡಿದ್ದಾರೆ. ಅದನ್ನು ತೆಗೆದುಕೊಂಡು ಬರಲು ನಮಗೆ ಖರ್ಚಾಗುತ್ತೆ. ಒಂದು ಎಳನೀರಿನ ಮೇಲೆ ಕನಿಷ್ಠ 2 ರೂ. ಲಾಭ ಇಟ್ಟುಕೊಂಡಿಲ್ಲ ಅಂದರೆ ವ್ಯಾಪಾರ ನಡೆಸುವುದು ಕಷ್ಟ. 5 ರೂ. ಹೆಚ್ಚಿಸುವುದು ನಮಗೆ ಅನಿವಾರ್ಯ ಎನ್ನುತ್ತಾರೆ ಹೊಸಕೆರೆಹಳ್ಳಿಯ ಎಳನೀರು ವ್ಯಾಪಾರಿ ಕೃಷ್ಣೇಗೌಡ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin