ಬಿಸಿಯೂಟದ ಸಾಂಬಾರ್‍ನಲ್ಲಿ ವಾಟು ಹುಳುಗಳು, ಶಾಲೆ ಮುಂದೆ ಪೋಷಕರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Sambar-Pandavapura

ಪಾಂಡವಪುರ, ಜೂ.7- ತಾಲೂಕಿನ ನಾರಾಯಣಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಸಾಂಬಾರ್‍ನಲ್ಲಿ ವಾಟು ಹುಳು ಮಿಶ್ರಿತವಾಗಿದ್ದರಿಂದ ಆಕ್ರೋಶಗೊಂಡ ಮಕ್ಕಳು ಪೋಷಕರು ಶಾಲೆ ಮುಂದೆ ಪ್ರತಿಭಟನೆ ನಡೆಸಿದರು. ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸುವ ಸಂದರ್ಭದಲ್ಲಿ ಬೇಳೆ ಸಾಂಬಾರ್‍ನಲ್ಲಿ ವಾಟು ಹುಳು ಕಾಣಿಸಿಕೊಂಡಿದೆ. ಈ ವೇಳೆ ಮಕ್ಕಳು ಕೆಲವರು ಊಟ ಮಾಡಿದರೆ ಇನ್ನೂ ಕೆಲವು ಮಕ್ಕಳು ಊಟ ಮಾಡದೆ ನಿರಾಕರಿಸಿದ್ದಾರೆ. ಈ ವೇಳೆ ಮಕ್ಕಳ ಪೋಷಕರು ಪ್ರತಿಭಟನೆ ನಡೆಸಿದರು.ಸಾಂಬಾರ್‍ನಲ್ಲಿ ವಾಟು ಹುಳುಗಳು ತೇಲಾಡುತ್ತಿವೆ. ಹೊಸ ಬೇಳೆ ಕಾಳು ಶಾಲೆಗೆ ಬಂದಿದ್ದರೂ ಇಲ್ಲಿನ ಮುಖ್ಯ ಶಿಕ್ಷಕಿ ಶಾಲೆಯಲ್ಲಿ ದಾಸ್ತಾನು ಮಾಡಿದ್ದ ಹಳೆಯ ಬೇಳೆಕಾಳನ್ನೇ ಉಪಯೋಗಿಸಿದ್ದರಿಂದ ಹುಳುಗಳು ಕಾಣಿಸಿಕೊಂಡಿವೆ. ಒಂದು ವೇಳೆ ಮಕ್ಕಳಿಗೆ ಅನಾಹುತ ಸಂಭವಿಸಿದ್ದರೆ ಹೊಣೆ ಯಾರು ಹೊರುತ್ತಿದ್ದರು ಎಂದು ಬಿಇಒ ಚಂದ್ರಶೇಖರ್ ಹಾಗೂ ಮುಖ್ಯ ಶಿಕ್ಷಕಿ, ಸಿಆರ್‍ಪಿ ಪುಟ್ಟ ರಾಜೇಗೌಡ ಮತ್ತು ಅಡುಗೆ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಖಾಸಗಿ ಶಾಲೆ ಬದಲಿಗೆ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿ ಎನ್ನುವ ಅಧಿಕಾರಿಗಳು ಬಿಸಿಯೂಟ ಪರಿಶೀಲಿಸಿ ಬೇಜವಾಬ್ದಾರಿ ಹಾಗೂ ಉದ್ಧಟತನ ತೋರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾಗಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಇಲ್ಲಿನ ಮುಖ್ಯ ಶಿಕ್ಷಕಿ ಸಾಕಮ್ಮ ಅವರು ಬಿಸಿಯೂಟವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಜತೆಗೆ ಮಕ್ಕಳಿಗೆ ಪಾಠ ಪ್ರವಚನವನ್ನೂ ಸರಿಯಾಗಿ ಮಾಡುತ್ತಿಲ್ಲ. ಜತೆಗೆ ನೀರಿನ ಟ್ಯಾಂಕ್ ನೀರು ಕೂಡ ಕಲುಷಿತಗೊಂಡಿದ್ದು, ಈ ನೀರನ್ನೇ ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದಕ್ಕೆ ಜವಾಬ್ದಾರರು ಯಾರು ಎಂದು ಪ್ರಶ್ನಿಸಿದರು.

ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಈ ವ್ಯಾಪ್ತಿಯ ಸಿಆರ್‍ಪಿ ಅವರುಗಳು ಶಾಲೆಯ ಬಿಸಿಯೂಟ ಸಂಬಂಧ ತೀವ್ರ ನಿರ್ಲಕ್ಷ್ಯ ವಹಿಸಿ ಉದ್ಧಟತನ ತಾಳಿರುವುದರಿಂದ ಈ ಕೂಡಲೇ ಶಾಲೆಯ ಮುಖ್ಯ ಶಿಕ್ಷಕಿ ಸಾಕಮ್ಮ ಹಾಗೂ ಸಿಆರ್‍ಪಿ ಪುಟ್ಟರಾಜೇಗೌಡ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.  ಪ್ರತಿಭಟನೆ ಹಿನ್ನೆಲೆಯಲ್ಲಿ ಈ ವೇಳೆ ಬಿಇಒ ಬಿ.ಚಂದ್ರಶೇಖರ್ ಹಾಗೂ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಸೀರ್ ಹುಸೇನ್ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಸಿಯೂಟದ ಗುಣಮಟ್ಟವನ್ನು ಎಲ್ಲಿ ರೆಕಾರ್ಡ್ ಮಾಡಿದ್ದೀರಿ. ಹೊಸ ಬೇಳೆಕಾಳು ನೀಡಿದ್ದರೂ ಏಕೆ ಹಳೆಯ ಸ್ಟಾಕ್‍ನ್ನು ಬಳಸಿದ್ದೀರಿ ಎಂದು ಮುಖ್ಯ ಶಿಕ್ಷಕಿ ಸಾಕಮ್ಮ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ಡಿಡಿಪಿಐ ಅವರಿಗೆ ವರದಿ ಸಲ್ಲಿಸಲಾಗುವುದು. ನಂತರ ಮುಖ್ಯ ಶಿಕ್ಷಕಿ ಹಾಗೂ ಸಿಆರ್‍ಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ಬಿ.ಚಂದ್ರಶೇಖರ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಕೈ ಬಿಡಲಾಯಿತು. ಎಸ್‍ಡಿಎಂಸಿ ಅಧ್ಯಕ್ಷ ಹರೀಶ್, ಮುಖಂಡರಾದ ಅನಿಲ್‍ಕುಮಾರ್, ಗಂಗಾಧರ್, ಎನ್.ಪಿ.ನರಸಿಂಹರಾಜು, ಎಸ್.ಸ್ವಾಮಿ, ಚೇತನ್, ಪ್ರಿಯಾಂಕ, ಭವ್ಯ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin