ಬಿಸಿ ಮುಟ್ಟಿಸಿದ ಭಾರತ : 48 ಗಂಟೆಯೊಳಗೆ ಭಾರತ ಬಿಟ್ಟು ತೊಲಗುವಂತೆ ಪಾಕ್ ಹೈಕಮೀಷನರ್ಗೆ ಸೂಚನೆ
ನವದೆಹಲಿ,ಅ.27-ಭಾರತದ ರಕ್ಷಣಾ ಇಲಾಖೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಹೊಂದಿದ್ದ ಆರೋಪದ ಮೇಲೆ ರಾಜಧಾನಿಯಲ್ಲಿರುವ ಪಾಕಿಸ್ತಾನ ಹೈಕಮೀಷನರ್ ಕಚೇರಿಯ ಉನ್ನತ ಅಧಿಕಾರಿ ಸೇರಿದಂತೆ ಮೂವರನ್ನು ದೆಹಲಿಯ ಅಪರಾಧ ತನಿಖಾ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ದೇಶದ ರಕ್ಷಣೆಗೆ ಸಂಬಂಧಿಸಿದಂತೆ ಪಾಕಿಸ್ತಾನದಿಂದ ಬೇಹುಗಾರಿಕೆ ಚಟುವಟಿಕೆಗಳು ನಡೆಯುತ್ತಿರುವ ಆತಂಕದ ನಡುವೆಯೇ ಈ ಬೆಳವಣಿಗೆ ಆತಂಕ ಮೂಡಿಸಿದೆ. ಈ ಆರೋಪದ ಹಿನ್ನೆಲೆಯಲ್ಲಿ 48 ಗಂಟೆಯೊಳಗೆ ಭಾರತ ಬಿಟ್ಟು ಹೋಗುವಂತೆ ಪಾಕಿಸ್ತಾನ ಹೈಕಮೀಷನರ್ ಅಬ್ದುಲ್ ಬಸಿತ್ ಅವರಿಗೆ ಸ್ಪಷ್ಟ ಸೂಚನೆ ನೀಡುವ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ಭಾರತ ಬಿಸಿ ಮುಟ್ಟಿಸಿದೆ.
ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮೀಷನರ್ ಕಚೇರಿಯ ಹಿರಿಯ ಅಧಿಕಾರಿ ಮೊಹಮ್ಮದ್ ಅಖ್ತರ್ ಹಾಗೂ ಸಿಬ್ಬಂದಿಗಳಾದ ಮೌಲಾನ ರಂಜಾನ್ ಮತ್ತು ಸುಭಾಷ್ ಜಹಂಗೀರ್ನನ್ನು ದೇಶದ ರಕ್ಷಣೆಗೆ ಸಂಬಂಧಿಸಿದ ದಾಖಲೆಗಳನ್ನು ಅಕ್ರಮವಾಗಿ ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಬಗ್ಗೆ ನಿಖರ ಮಾಹಿತಿ ಕಲೆ ಹಾಕಿದ ದೆಹಲಿ ಜಂಟಿ ಪೊಲೀಸ್ ಆಯುಕ್ತ ರವೀಂದ್ರ ಯಾದವ್ ನೇತೃತ್ವದ ಸಿಬ್ಬಂದಿ ಈ ಮೂವರನ್ನು ಬಂಧಿಸಿತು. ಈ ಸಂಬಂಧ ಹೈಕಮೀಷನರ್ ಅಬ್ದುಲ್ ಬಸಿತ್ ಅವರಿಗೆ ವಿದೇಶಾಂಗ ಇಲಾಖೆ ವಿವರ ಕೇಳಿ ಸಮನ್ಸ್ ಜಾರಿಗೊಳಿಸಿದೆ ಹಾಗೂ 48 ಗಂಟೆಗಳೊಳಗಾಗಿ ಭಾರತ ಬಿಟ್ಟು ಹೊರಡುವಂತೆ ಸೂಚನೆ ನೀಡಲಾಗಿದೆ.
ಹೈಕಮೀಷನರ್ ಕಚೇರಿಯ ಅಧಿಕಾರಿ ಅಖ್ತರ್ಗೆ ರಾಜಸ್ಥಾನ ನಿವಾಸಿಗಳಾದ ರಂಜಾನ್ ಮತ್ತು ಜಹಂಗೀರ್ ಮಹತ್ವದ ಮಾಹಿತಿಗಳನ್ನು ರವಾನಿಸುತ್ತಿದ್ದರು. ಅವರನ್ನು ಬಂಧಿಸಿ ಪರಿಶೀಲಿಸಿದಾಗ ಬಿಎಸ್ಎಫ್ ಕುರಿತ ದಾಖಲೆಗಳು, ಗಡಿಭಾಗದ ನಕ್ಷೆ ಪತ್ತೆಯಾಗಿವೆ. ಇವರು ಕಳೆದ ಒಂದು ವರ್ಷದಿಂದಲೂ ಬೇಹುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದು , ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದರು. ಇದೇ ವೇಳೆ ರಾಜಸ್ಥಾನದಲ್ಲಿ ಮತ್ತಿಬ್ಬರು ಐಎಸ್ಐ ಏಜೆಂಟ್ಗಳನ್ನು ಬಂಧಿಸಲಾಗಿದೆ ಎಂದು ಯಾದವ್ ವಿವರಿಸಿದ್ದಾರೆ. ಸಿಬ್ಬಂದಿಯನ್ನು ಬಂಧಿಸಿದÀ ವಿಷಯವನ್ನು ಗೃಹಸಚಿವ ರಾಜನಾಥ್ ಸಿಂಗ್ ಅವರ ಗಮನಕ್ಕೆ ತರಲಾಗಿದೆ. ಬಂಧಿತ ಅಖ್ತರ್ನನ್ನು ವಿಚಾರಣೆಗೊಳಪಡಿಸಿ ರಾಜತಾಂತ್ರಿಕ ನೀತಿ ಕಾನೂನಿನ ಅನ್ವಯ ಬಿಡುಗಡೆಗೊಳಿಸಲಾಗಿದೆ ಎಂದು ರವೀಂದ್ರ ಯಾದವ್ ತಿಳಿಸಿದ್ದಾರೆ.
► Follow us on – Facebook / Twitter / Google+