ಬೀದಿಬದಿ ವ್ಯಾಪಾರಿಗಳ ತೆರವು ವಿಷಯ : ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಮಾರಾಮಾರಿ

ಈ ಸುದ್ದಿಯನ್ನು ಶೇರ್ ಮಾಡಿ

magadi9

ಮಾಗಡಿ, ಅ.22- ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ವಿಷಯದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಘಟನೆ ಪಟ್ಟಣದಲ್ಲಿಂದು ನಡೆದಿದೆ.ಪುರಸಭೆ ಕಚೇರಿ ಹಿಂಭಾಗದ ರಸ್ತೆಯಲ್ಲಿ ಕಳೆದ 50 ವರ್ಷಗಳಿಂದ ಫುಟ್‍ಪಾತ್ ಮೇಲೆ ಮಹಿಳೆಯರು ಹಣ್ಣು, ಹೂ, ತರಕಾರಿ ವ್ಯಾಪಾರ ಮಾಡುತ್ತಾ ಬಂದಿದ್ದಾರೆ.ವಾಹನ ದಟ್ಟಣೆ ಹೆಚ್ಚಾದಂತೆ ಬೀದಿ ಬದಿ ವ್ಯಾಪಾರಿಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ತಹಸೀಲ್ದಾರ್ ಲಕ್ಷ್ಮೀಚಂದ್ರ ನೇತೃತ್ವದಲ್ಲಿ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಪಿಎಲ್‍ಡಿ ಬ್ಯಾಂಕ್ ಬಳಿ ಖಾಲಿ ನಿವೇಶನದಲ್ಲಿ ವ್ಯಾಪಾರ ಮಾಡುವಂತೆ ಆದೇಶಿಸಿದ್ದರು.ಈ ನಿವೇಶನದಲ್ಲಿ ಶೌಚಾಲಯಗಳಿರುವುದರಿಂದ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. ನಾವು ಯಾರಿಗೂ ತೊಂದರೆಯಾಗದಂತೆ ಫುಟ್‍ಪಾತ್ ಬಳಿ ಇರುವ ಚರಂಡಿ ಮೇಲೆ ಶೀಟ್‍ಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತೇವೆ ಎಂದು ಮಹಿಳಾ ವ್ಯಾಪಾರಿಗಳು ಅಲವತ್ತುಗೊಂಡಿದ್ದರು.
ಇಂದು ಬೆಳಗ್ಗೆ ಕೆಪಿಸಿಸಿ ಸದಸ್ಯ ಎ.ಮಂಜುನಾಥ್ ಹಾಗೂ ಕಾರ್ಯಕರ್ತರು ಬೀದಿ ಬದಿ ವ್ಯಾಪಾರಿಗಳನ್ನು ಪುರಸಭೆ ಕಚೇರಿ ಹಿಂಭಾಗದ ರಸ್ತೆಗೆ ವಾಪಸ್ ಕರೆತಂದು ಇಲ್ಲೇ ವ್ಯಾಪಾರ ಮಾಡಿ ಎಂದು ಹೇಳಿದರು.

ಈ ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಜೆಡಿಎಸ್ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಇಲ್ಲಿ ವ್ಯಾಪಾರ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇವರನ್ನು ಮೊದಲು ಇಲ್ಲಿಂದ ತೆರವುಗೊಳಿಸಿ ಎಂದು ಪ್ರತಿಭಟನೆಗೆ ಮುಂದಾದರು. ಇದರಿಂದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ, ಕಾಂಗ್ರೆಸ್‍ನ ಅಶೋಕ್ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆತಂಕದ ವಾತಾವರಣ ಸೃಷ್ಟಿಯಾಯಿತು.ಸುದ್ದಿ ತಿಳಿದು ತಹಸೀಲ್ದಾರ್ ಲಕ್ಷ್ಮೀಚಂದ್ರ ಹಾಗೂ ಮಾಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತಿತರರು ಪುರಸಭೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin