ಬುಲೇರೋಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದು ಇಬ್ಬರ ದುರ್ಮರಣ
ನೆಲಮಂಗಲ,ಫೆ.23- ಮುಂದೆ ಹೋಗುತ್ತಿದ್ದ ಬುಲೇರೋ ವಾಹನಕ್ಕೆ ಹಿಂದಿನಿಂದ ಅತಿವೇಗವಾಗಿ ಬಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಮೃತರನ್ನು ತುಮಕೂರಿನ ಗಂಗೋತ್ರಿನಗರದ ರಾಜೇಶ್(28) ಮತ್ತು ಕೆಂಪರಾಜು(35) ಎಂದು ಗುರುತಿಸಲಾಗಿದೆ.
ಬೆಂಗಳೂರು-ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗ್ಗೆ 9.30ರ ಸಮಯದಲ್ಲಿ ಇವರಿಬ್ಬರೂ ಬುಲೆರೋ ವಾಹನದಲ್ಲಿ ಕೆಲಸದ ನಿಮಿತ್ತ ತುಮಕೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದರು. ಟಿ.ಬೇಗೂರು ಗೇಟ್ ಬಳಿ ಮುಂದೆ ಹೋಗುತ್ತಿದ್ದ ಖಾಸಗಿ ಬಸ್ಗೆ ಯಾವುದೋ ವಾಹನ ಅಡ್ಡಬಂದ ಪರಿಣಾಮ ತಕ್ಷಣ ಬ್ರೇಕ್ ಹಾಕಿದೆ. ಪರಿಣಾಮವಾಗಿ ಹಿಂದೆ ಬರುತ್ತಿದ್ದ ವಾಹನ ಕೂಡ ಬ್ರೇಕ್ ಹಾಕಿದೆ. ಆದರೆ ಬುಲೆರೋ ಹಿಂದೆ ಬರುತ್ತಿದ್ದ ಕಂಟೈನರ್ ವಾಹನ ಬ್ರೇಕ್ ಹಾಕದೆ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಬುಲೇರೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಕಂಟೈನರ್ ಲಾರಿ ಚಾಲಕ ಹಾಗೂ ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ಈ ಮಾರ್ಗದಲ್ಲಿ ಅಪಘಾತ ಸಂಭವಿಸಿದ್ದರಿಂದ ಬೆಂಗಳೂರು -ತುಮಕೂರು ರಸ್ತೆ ಕೆಲಕಾಲ ಸಂಪೂರ್ಣ ಜಾಮ್ ಆಗಿತ್ತು. ಸುದ್ದಿ ತಿಳಿದ ನೆಲಮಂಗಲ ಸಂಚಾರಿ ಠಾಣೆ ಪಿಎಸ್ಐ ಕೃಷ್ಣಕುಮಾರ್ ಸಿಬ್ಬಂದಿಗಳೊಂದಿಗೆ ಅಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಾಹನದಲ್ಲಿ ಸಿಕ್ಕಿಕೊಂಡಿದ್ದ ಇಬ್ಬರ ಶವಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.