ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಿಂಗ್ ಯಾರು..?

ಈ ಸುದ್ದಿಯನ್ನು ಶೇರ್ ಮಾಡಿ

BBMP

ಬೆಂಗಳೂರು, ಆ.31- ಈ ಬಾರಿ ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಾರು ಕಿಂಗ್ಮೇಕರ್ ಆಗಲಿದ್ದಾರೆ ಎಂಬುದು ಕುತೂಹಲಕಾರಿ ವಿಷಯವಾಗಿದೆ. ಕಳೆದ ಬಾರಿ ಸೋತು ಗೆದ್ದಿದ್ದ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಮೈತ್ರಿಯೊಂದಿಗೆ ಅಧಿಕಾರ ಗದ್ದುಗೆಗೆ ಏರಿಸಲು ಕಾರಣಕರ್ತರಾಗಿದ್ದ ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿಬಸವರಾಜ್ ಅವರು ಇಂದು ರಾತ್ರಿ  ಅಕ್ಕ ಸಮ್ಮೇಳನದಲ್ಲಿ  ಭಾಗವಹಿಸಲು ಅಮೆರಿಕಕ್ಕೆ ತೆರಳಲಿದ್ದು, ಮೇಯರ್ ಚುನಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳುತ್ತಿಲ್ಲ. ಜೆಡಿಎಸ್ ಪಕ್ಷದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಸಾಧಿಸಲು ಮಹತ್ವದ ಪಾತ್ರ ವಹಿಸಿದ್ದ ಮೂವರು ಶಾಸಕರಾದ ಕೆ.ಗೋಪಾಲಯ್ಯ, ಅಖಂಡ ಶ್ರೀನಿವಾಸ್, ಜಮೀರ್ಅಹಮದ್ ಅವರು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಪರಿಣಾಮ ಪಕ್ಷದಿಂದ ಅಮಾನತುಗೊಂಡಿದ್ದಾರೆ.

ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಯಾರು ಕಿಂಗ್ಮೇಕರ್ ಆಗಲಿದ್ದಾರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಯಲಿದೆಯೇ, ಮುಂದುವರೆದರೆ ಅದರ ನೇತೃತ್ವ ಯಾರು ವಹಿಸಲಿದ್ದಾರೆ, ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಲಿದೆಯೇ, ಈ ಮೈತ್ರಿಯ ರೂವಾರಿ ಯಾರಾಗಲಿದ್ದಾರೆ ಎಂಬುದು ಪಾಲಿಕೆ ಆವರಣದಲ್ಲಿ ಬಹುಚರ್ಚಿತ ವಿಷಯವಾಗಿವೆ.  ಕಳೆದ ಬಾರಿ ಅತಿ ಹೆಚ್ಚು ಸ್ಥಾನ ಗಳಿಸಿದ್ದರೂ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ನ ಮೂವರು ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್ ಅವರು ಜೆಡಿಎಸ್ನೊಂದಿಗೆ ಮೈತ್ರಿ ಒಪ್ಪಂದವಾದ ಕೂಡಲೇ ಜೆಡಿಎಸ್ನ ಮೂವರು ಶಾಸಕರು ಹಾಗೂ ಎಲ್ಲಾ ಪಾಲಿಕೆ ಸದಸ್ಯರೊಂದಿಗೆ ರೆಸಾರ್ಟ್ ಯಾತ್ರೆಗೆ ತೆರಳಿದ್ದರು.

ಸದ್ಯ ಈಗ ಅವರ್ಯಾ್ರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಜೆಡಿಎಸ್ನ ಶಾಸಕರೂ ಮಂಡೆ ಬಿಸಿ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಅವರ ಕಟ್ಟಾ ಬೆಂಬಲಿಗರಾದ ಜೆಡಿಎಸ್ ಬಿಬಿಎಂಪಿ ಸದಸ್ಯರು ನಾವು ಶಾಸಕರ ಪರವಾಗಿದ್ದೇವೆ. ಆದರೆ ಪಕ್ಷದ ಆದೇಶವನ್ನು ಧಿಕ್ಕರಿಸುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ.  ರಾಜ್ಯಸಭಾ ಚುನಾವಣಾ ಸಂದರ್ಭದಲ್ಲಿ ಅಡ್ಡಮತದಾನ ಪರಿಣಾಮ ಅಮಾನತುಗೊಂಡಿರುವವರು ಇಲ್ಲಿ ಪಕ್ಷ ಏನಾದರೂ ವಿಪ್ ಕೊಟ್ಟರೆ ವಿಪ್ ಉಲ್ಲಂಘಿಸುವಂತಿಲ್ಲ. ವಿಪ್ ಉಲ್ಲಂಘಿಸಿದರೆ ಶಾಸಕ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.
ಈ ಎಲ್ಲದರ ನಡುವೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ತನ್ನೆಲ್ಲಾ ಪ್ರಯತ್ನಗಳನ್ನು ಮುಂದುವರೆಸಿದೆ. ಕಳೆದ ಮೂರು ತಿಂಗಳಿನಿಂದಲೇ ತೆರೆಮರೆಯ ಕಸರತ್ತುಗಳನ್ನು ಪ್ರಾರಂಭಿಸಿದೆ. ಕಳೆದ ಬಾರಿ ನೂರು ಸ್ಥಾನಗಳನ್ನು ಗಳಿಸಿ ಕೂದಲೆಳೆಯ ಅಂತರದಲ್ಲಿ ಅಧಿಕಾರ ಕಳೆದುಕೊಂಡು ಮುಖಭಂಗಕ್ಕೀಡಾಗಿದ್ದ ಮಾಜಿ ಸಚಿವ, ಬಿಜೆಪಿ ಮುಖಂಡ ಆರ್.ಅಶೋಕ್ ಅವರು ಈ ಬಾರಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ.

ಈ ಬಾರಿ ಬೆಂಗಳೂರು ಬಿಜೆಪಿ ಸಾಮ್ರಾಜ್ಯಕ್ಕೆ ಸಾಮ್ರಾಟನಾಗಲೇಬೇಕೆಂದು ಪಣತೊಟ್ಟು ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಇವರ ಈ ಪ್ರಯತ್ನಕ್ಕೆ ಕೇಂದ್ರ ಸಚಿವರು, ನಗರ ಶಾಸಕರು, ಬಹುತೇಕ ಎಲ್ಲಾ ಬಿಜೆಪಿ ಮುಖಂಡರು ಕೈ ಜೋಡಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರು ಅನಿವಾರ್ಯವಾಗಿ ಇವರಿಗೆ ಸಹಕರಿಸಬೇಕಾಗಿದೆ.  ನಗರದ ಶಾಸಕರಾದ ಅರವಿಂದ ಲಿಂಬಾವಳಿ, ವಿಜಯ್ಕುಮಾರ್ ಅವರನ್ನು ಹೊರತುಪಡಿಸಿದರೆ ಎಲ್ಲರೂ ಬಿಬಿಎಂಪಿಯಲ್ಲಿ ಅಧಿಕಾರ ಗದ್ದುಗೆ ಯನ್ನು ಬಿಜೆಪಿ ಹಿಡಿಯುವುದು ಸೂಕ್ತ ಎಂಬ ನಿರ್ಣಯಕ್ಕೆ ಬಂದು ಅಶೋಕ್ ರವರ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಎಲ್ಲರೂ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು ಹಸಿರು ನಿಶಾನೆ ತೋರಿರುವುದರಿಂದ ಯಡಿಯೂರಪ್ಪನವರೂ ಕೂಡ ಬೆಂಬಲ ವ್ಯಕ್ತಪಡಿಸಲಿದ್ದಾರೆ. ಹಾಗಾಗಿ ಈ ಬಾರಿ ಬಿಜೆಪಿ ಬಿಬಿಎಂಪಿ ಗದ್ದುಗೆ ಹಿಡಿಯುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.  ಲೆಕ್ಕಾಚಾರದ ಪ್ರಕಾರ ಮ್ಯಾಜಿಕ್ ಸಂಖ್ಯೆ 130 ಇರಬೇಕು. ಬಿಜೆಪಿ ಬಿಬಿಎಂಪಿ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು ಸೇರಿದಂತೆ 122 ಸದಸ್ಯ ಬಲ ಹೊಂದಿದೆ. ಎಂಟು ಮತಗಳ ಕೊರತೆ ಬರುತ್ತದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಕೈ ಜೋಡಿಸಲು ಒಲವು ತೋರಿದ್ದಾರೆ ಎನ್ನಲಾಗಿದ್ದು, ಅದು ಖಚಿತವಾದರೆ ಬಿಜೆಪಿ, ಜೆಡಿಎಸ್ ಮೈತ್ರಿ ಆಡಳಿತ ಬಿಬಿಎಂಪಿಯಲ್ಲಿ ಬರುವುದು ಸುಲಭವಾಗುತ್ತದೆ. ಇದೂ ಕೈ ತಪ್ಪಿದರೆ ಬಿಜೆಪಿ ಈಗಾಗಲೇ ಕಾಂಗ್ರೆಸ್ ಹೆಣೆದಿರುವ ರಣತಂತ್ರಕ್ಕೆ ಪ್ರತಿತಂತ್ರ ಹೂಡಿದೆ.
ತಮ್ಮ ಮತಗಳನ್ನು ಹೆಚ್ಚಿಸಿಕೊಳ್ಳಲು ವೆಂಕಯ್ಯನಾಯ್ಡು, ಬಿಜೆಪಿ ಬಗ್ಗೆ ಒಲವಿರುವ ಅಪ್ಪಾಜಿಗೌಡ, ಸಿ.ಆರ್.ಮನೋಹರ್ ಅವರ ವಿಳಾಸಗಳನ್ನು ಮೂರು ತಿಂಗಳ ಹಿಂದೆಯೇ ಬೆಂಗಳೂರು ನಗರಕ್ಕೆ ಬದಲಾಯಿಸಿದೆ ಎಂದು ತಿಳಿದುಬಂದಿದೆ. ಒಟ್ಟಾರೆ ಬಿಜೆಪಿ ಅಧಿಕಾರಕ್ಕೆ ಹತ್ತಿರವಾಗಿದೆ. ಆದರೆ ಅಧಿಕಾರದ ಗದ್ದುಗೆಗೆ ಏರಲು ಏಣಿ ಆಟದಲ್ಲಿ ಕಿಂಗ್ಮೇಕರ್ ಯಾರಾಗುತ್ತಾರೆ ಎಂಬುದೇ ಈಗ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಉದ್ಭವಿಸಿರುವ ಕುತೂಹಲಕಾರಿ ಪ್ರಶ್ನೆಯಾಗಿದೆ. ಕಳೆದ ಬಾರಿ ಕಿಂಗ್ಮೇಕರ್ ಆಗಿದ್ದವರು ಈಗ ಹಿಂದೆ ಸರಿದಿದ್ದಾರೆ. ಈಗ ಕಾಂಗ್ರೆಸ್-ಜೆಡಿಎಸ್ನಲ್ಲಿ ಹೊಸಬರು ಬರುತ್ತಾರೆಯೇ ಕಾದು ನೋಡಬೇಕು. ನಿನ್ನೆ ನಡೆದ ಬೆಳವಣಿಗೆಯಲ್ಲಿ ಅಕ್ಕ ಸಮ್ಮೇಳನಕ್ಕೆ ಹೊರಟ ತ್ರಿಮೂರ್ತಿ ಶಾಸಕರು, ಬಿಬಿಎಂಪಿ ಕಾಂಗ್ರೆಸ್ ಸದಸ್ಯರು, ಬಂಡಾಯ ಜೆಡಿಎಸ್ ಶಾಸಕರು ಹಾಗೂ ಜೆಡಿಎಸ್ ಸದಸ್ಯರೊಂದಿಗೆ ರಹಸ್ಯ ಮಾತುಕತೆ ನಡೆಸಿರುವುದು ತಿಳಿದುಬಂದಿದ್ದು, ಅಕಸ್ಮಾತ್ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಏರ್ಪಡುವ ಸಾಧ್ಯತೆ ಕಂಡುಬಂದರೆ ಕೊನೆ ಗಳಿಗೆಯಲ್ಲಿ ತಮ್ಮ ಅಕ್ಕ ಪ್ರವಾಸವನ್ನು ರದ್ದುಗೊಳಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಈ ನಡುವೆ ಸಚಿವ ರಾಮಲಿಂಗಾರೆಡ್ಡಿ,ಮೇಯರ್ ಮಂಜುನಾಥರೆಡ್ಡಿ, ಪಾಲಿಕೆ ಸದಸ್ಯೆ ಜಿ.ಪದ್ಮಾವತಿ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.  ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ಗುಂಡೂರಾವ್ ಮೈತ್ರಿ ಮುಂದುವರೆಯುವ ಮಾತನಾಡಿದ್ದಾರೆ. ಈ ನಡುವೆ ಬಿಜೆಪಿ ಮಾತ್ರ ಭಾರೀ ಪ್ರಯತ್ನವನ್ನು ನಡೆಸಿರುವುದು ಸತ್ಯ. ಸೆಪ್ಟೆಂಬರ್ 19 ರಂದು ನಡೆಯಲಿರುವ ಚುನಾವಣೆಯಲ್ಲಿ ಯಾವ ಪಕ್ಷ, ಯಾರ ಮೈತ್ರಿಯೊಂದಿಗೆ ಅಧಿಕಾರ ಹಿಡಿಯಲಿದೆ ಎಂಬುದನ್ನು ಕಾದುನೋಡಬೇಕು.

► Follow us on –  Facebook / Twitter  / Google+

Facebook Comments

Sri Raghav

Admin