ಬೆಂಗಳೂರಲ್ಲಿ ನಿಲ್ಲದ ಜೆಸಿಬಿಗಳ ಘರ್ಜನೆ : ಪ್ರತಿರೋಧದ ನಡುವೆಯೇ ಹಲವು ಕಟ್ಟಡಗಳ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

JDCb-01

ಬೆಂಗಳೂರು, ಆ.17-ನಿನ್ನೆ ತಟಸ್ಥವಾಗಿದ್ದ ಜೆಸಿಬಿಗಳು ಇಂದು ಮತ್ತೆ ಘರ್ಜಿಸಿ ಸ್ಥಳೀಯರ ವಿರೋಧದ ನಡುವೆಯೂ ಕಟ್ಟಡಗಳನ್ನು ನೆಲಸಮಗೊಳಿಸಿವೆ. ದೊಡ್ಡಬೊಮ್ಮಸಂದ್ರ, ರಾಜರಾಜೇಶ್ವರಿನಗರ, ಕೆ.ಆರ್.ಪುರ ವಲಯಗಳಲ್ಲಿ ಬಿಬಿಎಂಪಿ ಇಂದು ರಾಜಕಾಲುವೆ ಒತ್ತುವರಿ ತೆರವು ಕಾರ್ಯವನ್ನು ಮುಂದುವರೆಸಿದೆ. ದೊಡ್ಡಬೊಮ್ಮಸಂದ್ರದಲ್ಲಿ ಮಹಿಳೆಯರು ಮನೆ ತೆರವು ಮಾಡಬಾರದೆಂದು ಪರಿಪರಿಯಾಗಿ ಬೇಡಿಕೊಂಡರೂ ಕೂಡ ಅಧಿಕಾರಿಗಳು ಲೆಕ್ಕಿಸದೆ ಮನೆ ತೆರವುಗೊಳಿಸಿದರು.  ಕೆ.ಆರ್.ಪುರದ ಹೊರಮಾವು ವಾರ್ಡ್ನ ಕ್ಯಾಲಸನಹಳ್ಳಿಯ ಸಿದ್ದರಾಮೇಶ್ವರ ಕಾಲೇಜು ಹಿಂಭಾಗ ಜೆಸಿಬಿಗಳು ಕಾಂಪೌಂಡ್ ತೆರವುಗೊಳಿಸಿದವು. ಈ ವೇಳೆ ಜಂಟಿ ಆಯುಕ್ತ ಮುನಿವೀರಪ್ಪ ಮಾತನಾಡಿ, ಇಂದು ಎರಡು ಬೃಹತ್ ಕಟ್ಟಡಗಳನ್ನು ನಾವು ತೆರವು ಮಾಡಿಯೇ ತೀರುತ್ತೇವೆ. ಯಾವ ಮುಲಾಜಿಗೂ ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕೆಲವರು ಸರ್ವೇ ಕಾರ್ಯ ಸರಿಯಿಲ್ಲ, ಮರು ಸರ್ವೆ ಮಾಡಬೇಕು, ಸರ್ವೆ ವರದಿಯನ್ನು ಮತ್ತೆ ಪರಿಶೀಲಿಸಬೇಕು ಎಂದು ಪಟ್ಟುಹಿಡಿದು ಅಧಿಕಾರಿಗಳ ಮುಂದೆ ಕೆಲಕಾಲ ಪ್ರತಿಭಟನೆ ಸಹ ನಡೆಸಿದರು.  ಇದ್ಯಾವುದಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯ ಮುಂದುವರೆಸಿದರು. ದೊಡ್ಡಬೊಮ್ಮಸಂದ್ರದಲ್ಲಿ ಮಹಿಳೆಯರು ಮನೆ ತೆರವು ಮಾಡಬಾರದೆಂದು ಪರಿಪರಿಯಾಗಿ ಬೇಡಿಕೊಂಡರೂ ಕೂಡ ಅಧಿಕಾರಿಗಳು ಲೆಕ್ಕಿಸದೆ ಮನೆ ತೆರವುಗೊಳಿಸಿದರು.  ರಾಜರಾಜೇಶ್ವರಿನಗರದ 8 ಕಡೆ ಕಟ್ಟಡಗಳು ಹಾಗೂ ಬೊಮ್ಮನಹಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯವನ್ನು ಕೈಗೊಳ್ಳಲಾಯಿತು. ಯಲಹಂಕದಲ್ಲಿ ತೆರವು ಸದ್ಯಕ್ಕಿಲ್ಲ : ಯಲಹಂಕ ವಲಯದ ಅಳ್ಳಾಳಸಂದ್ರ, ಸುರಭಿ ಲೇಔಟ್, ಜಕ್ಕೂರು ಬಡಾವಣೆ, ಚಿಕ್ಕಬೊಮ್ಮಸಂದ್ರ, ಯಲಹಂಕ ಓಲ್ಡ್ ಟೌನ್, ಪುಟ್ಟೇನಹಳ್ಳಿಯಲ್ಲಿ ಇಂದು ವಾರ್ಡ್ ಇಂಜಿನಿಯರ್ ಪಾಲಾಕ್ಷಯ್ಯ, ದಯಾನಂದ್ ಮತ್ತಿತರರು ಸರ್ವೇ ಕಾರ್ಯ ಕೈಗೊಂಡರು.
ನಿನ್ನೆ ಸರ್ವೇ ಕಾರ್ಯ ಮಾಡುವಾಗ ಸ್ಥಳೀಯರು ತೀವ್ರ ಪ್ರತಿರೋಧ ಒಡ್ಡಿದ್ದರು. ಇದರಿಂದಾಗಿ ಇಂದು ಪಾಲಿಕೆಯ ಸರ್ವೆ ವಿಭಾಗದವರು ಪೊಲೀಸರ ನೆರವಿನಲ್ಲಿ ಸರ್ವೆ ಕಾರ್ಯವನ್ನು ಮುಂದುವರೆಸಿದರು.

ಈ ವೇಳೆ ಇಂಜಿನಿಯರ್ ಪಾಲಾಕ್ಷಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ರಾಜಕಾಲುವೆ ಒತ್ತುವರಿಯಾಗಿರುವುದನ್ನು ಸರ್ವೆ ಮಾಡಿ ಮಾರ್ಕ್ ಮಾಡುತ್ತೇವೆ. ಯಾವುದೇ ಕಟ್ಟಡವನ್ನು ಒಡೆಯುತ್ತಿಲ್ಲ ಮಾರ್ಕ್ ಮಾಡಿದ ನಂತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ತೆರವು ಕಾರ್ಯ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin