ಬೆಂಗಳೂರಲ್ಲಿ ನಿಲ್ಲದ ಸರ ಅಪಹರಣ, ಮನೆಗಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

chain--snatcher

ಬೆಂಗಳೂರು, ಸೆ.19-ನಗರದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಹಾಡಹಗಲೇ ಮನೆಗಳ್ಳತನ ನಡೆಯುತ್ತಲೇ ಇದ್ದು, ಮತ್ತೊಂದು ಕಡೆ ಸರ ಅಪಹರಣ ಪ್ರಕರಣಗಳಿಗೆ ಕೊನೆಯೇ ಇಲ್ಲದಂತಾಗಿದೆ.
ಮಾರತ್‍ಹಳ್ಳಿ:
ಶಾಲೆಗೆ ಮಕ್ಕಳನ್ನು ಬಿಟ್ಟು ಅರ್ಧಗಂಟೆಯೊಳಗೆ ಮನೆಗೆ ಬರುವಷ್ಟರಲ್ಲಿ ಕಳ್ಳರು ಇವರ ಮನೆಯ ಬೀಗ ಒಡೆದು ಒಳನುಗ್ಗಿ 10 ಸಾವಿರ ಹಣ ಹಾಗೂ 100 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಸಿಎನ್‍ಆರ್ ರೆಸಿಡೆನ್ಸಿ, ಮೊದಲನೆ ಕ್ರಾಸ್,3ನೆ ಮಹಡಿಯಲ್ಲಿ ಕೆ.ಪಿ.ಭಾಸ್ಕರ್ ಎಂಬುವರು ವಾಸವಾಗಿದ್ದು, ಇವರು ನಿನ್ನೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದಾಗ ಪತ್ನಿ ಮಕ್ಕಳನ್ನು ಶಾಲೆಗೆ ಬಿಡಲು 9 ಗಂಟೆಗೆ ಹೋಗಿದ್ದಾರೆ. ಈ ವೇಳೆ ಕಳ್ಳರು ಇವರ ಮನೆಯ ಬೀಗ ಒಡೆದು ಒಳನುಗ್ಗಿ ಹಣ-ಆಭರಣ ದೋಚಿ ಪರಾರಿಯಾಗಿದ್ದಾರೆ. 9.45ಕ್ಕೆ ಮನೆಗೆ ವಾಪಸ್ಸಾದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಕಮರ್ಷಿಯಲ್ ಸ್ಟ್ರೀಟ್:
ಕಾಮರಾಜ ರಸ್ತೆಯ ನಿವಾಸಿ ಅಕ್ಷಯ್ ಬಪನ್ ಎಂಬುವರ ಮನೆಯ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು ಲ್ಯಾಪ್‍ಟಾಪ್, ಬೆಳ್ಳಿಯ ನಾಣ್ಯಗಳು, ನಗದು ದೋಚಿದ್ದು, ಒಟ್ಟು ಮೌಲ್ಯ ತಿಳಿದುಬಂದಿಲ್ಲ.

ಆರ್.ಟಿ.ನಗರ:
ಆರ್.ಟಿ.ನಗರದಲ್ಲಿರುವ ಇಂಡಿಯಾ ಲಿಮಿಟೆಡ್ ಎಂಬ ವಾಣಿಜ್ಯ ಮಳಿಗೆಯ ರೋಲಿಂಗ್ ಶಟರ್ ಮೀಟಿ ಒಳನುಗ್ಗಿದ ಕಳ್ಳರು ಕ್ಯಾಷ್‍ಬಾಕ್ಸ್‍ನಲ್ಲಿದ್ದ ಹಣ ಹಾಗೂ ಮೊಬೈಲ್ ದೋಚಿರುವ ಘಟನೆ ನಡೆದಿದೆ. ಕ್ಯಾಷ್‍ಬಾಕ್ಸ್‍ನಲ್ಲಿ 2.85ಲಕ್ಷ ರೂ. ಹಣವಿತ್ತೆಂದು ಇಂಡಿಯಾ ಲಿಮಿಟೆಡ್‍ನ ಮ್ಯಾನೇಜರ್ ಬೀರ್ ಮನ್ಸೂರ್ ಆಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್:
ಇಲ್ಲಿನ 12ನೆ ಕ್ರಾಸ್‍ನಲ್ಲಿರುವ ಮಹಾಲಕ್ಷ್ಮಿ ಬ್ಯಾಟರಿ ಪ್ರಿಂಟರ್ಸ್ ಎಂಬ ಮಳಿಗೆಯ ರೋಲಿಂಗ್ ಶಟರ್ ಮೀಟಿ 22 ಸಾವಿರ ಹಣ ದೋಚಿರುವ ಘಟನೆ ನಡೆದಿದೆ. ಆನಂದ್ ಎಂಬುವರು ಕೆಲಸ ಮುಗಿಸಿ ಬೀಗ ಹಾಕಿ ಮನೆಗೆ ಹೋದಾಗ ಈ ಘಟನೆ ನಡೆದಿದೆ.

ಜಯನಗರ:
ವಾಯುವಿಹಾರ ಮಾಡುತ್ತಿದ್ದ ಮಹಿಳೆಯ ಹಿಂಬದಿಯಿಂದ ಬಂದ ಚೋರರು 50 ಗ್ರಾಂ ತೂಕದ ಸರ ಎಗರಿಸಿರುವ ಘಟನೆ ನಡೆದಿದೆ.
ಸೌತ್ ಎಂಡ್ ಸರ್ಕಲ್, ಕಂಠೀರವ ರಸ್ತೆ 6ನೆ ಬ್ಲಾಕ್‍ನ ಬ್ಯಾಡ್ಮಿಂಟನ್ ಕೋರ್ಟ್‍ನಲ್ಲಿ ರುಕ್ಮಿಣಿ ಎಂಬುವರು ವಾಯುವಿಹಾರ ಮಾಡುತ್ತಿದ್ದಾಗ ಸರಗಳ್ಳರು ಇವರನ್ನು ಹಿಂಬಾಲಿಸಿ ಸರ ಎಗರಿಸಿದ್ದಾರೆ.

ಬ್ಯಾಟರಾಯನಪುರ:
ಮದ್ದೂರಿನಿಂದ ನಗರಕ್ಕೆ ಬಂದಿದ್ದ ವ್ಯಕ್ತಿಯನ್ನು ಅಡಗಟ್ಟಿದ ದರೋಡೆಕೋರರು ಚಾಕು ತೋರಿಸಿ ಬೆದರಿಸಿ ಮೊಬೈಲ್ ಹಾಗೂ 250 ರೂ. ದೋಚಿದ್ದಾರೆ.
ಇಂದು ಮುಂಜಾನೆ 4.50ರಲ್ಲಿ ಮದ್ದೂರಿನಿಂದ ಎಂದಿನಂತೆ ನಾಗೇಶ್‍ಕುಮಾರ್ ಎಂಬುವರು ನಗರಕ್ಕೆ ಕೆಲಸಕ್ಕೆ ಬಂದಾಗ ವಿಶ್ವೇಶ್ವರಯ್ಯನಗರದ 2ನೆ ಕ್ರಾಸ್‍ನಲ್ಲಿ ಈ ಘಟನೆ ನಡೆದಿದೆ. ಈ ಎಲ್ಲಾ ಪ್ರಕರಣಗಳನ್ನು ಆಯಾ ಠಾಣಾ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin