ಬೆಂಗಳೂರಲ್ಲಿ ನೆಲಕ್ಕುರುಳಲು ಕಾಯುತ್ತಿವೆ ಇನ್ನೂ ಹಲವು ಕಟ್ಟಡಗಳು, ಕಣ್ಮುಚ್ಚಿ ಕೂತ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

Building-Bengaluru

ಬೆಂಗಳೂರು, ಆ.18-ಈಜೀಪುರದಲ್ಲಿ ಐದಂತಸ್ತಿನ ಕಟ್ಟಡ ವಾಲಿದ ನಂತರ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಲಕ್ಷಾಂತರ ಕಟ್ಟಡಗಳ ಅಸಲಿ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೌದು. ಕೇವಲ 250 ಕಿ.ಮೀ.ಸುತ್ತಳತೆಯಿದ್ದ ಬಿಬಿಎಂಪಿ ಇದೀಗ 800 ಕಿ.ಮೀ. ವ್ಯಾಪ್ತಿಯ ಸುತ್ತಳತೆಗೆ ವಿಸ್ತಾರಗೊಂಡಿದೆ. 7 ನಗರಸಭೆ, 1 ಪುರಸಭೆ, 110 ಹಳ್ಳಿಗಳು ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದೆ.   ಬಿಬಿಎಂಪಿ ವ್ಯಾಪ್ತಿಗೆ ಸೇರುವ ಮುನ್ನ 7 ನಗರಸಭೆ, 1 ಪುರಸಭೆ ಮತ್ತು 110 ಹಳ್ಳಿಗಳಲ್ಲಿ ನಿರ್ಮಿಸಲಾಗಿದ್ದ ಬಹುತೇಕ ಕಟ್ಟಡಗಳು ಅಕ್ರಮ ಎಂಬುದು ಜಗಜ್ಜಾಹೀರು.

ಇದರ ಮಧ್ಯೆ ಹಳೇ ಬೆಂಗಳೂರಿನಲ್ಲಿದ್ದ ಸಾವಿರಾರು ಕಟ್ಟಡಗಳನ್ನು ನಕ್ಷೆ ಉಲ್ಲಂಘಿಸಿ ನಿರ್ಮಿಸಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದ ಪರಿಣಾಮ ಇದೀಗ ಸಾವಿರಾರು ಕಟ್ಟಡಗಳು ಸದೃಢತೆಯಿಂದ ಕೂಡಿಲ್ಲದಿರುವುದು ಪತ್ತೆಯಾಗಿದೆ. ಈಜೀಪುರದಲ್ಲಿ ಕೇವಲ ಒಂದಂತಸ್ತಿನ ಕಟ್ಟಡಕ್ಕೆ ಅನುಮತಿ ಪಡೆದು ಐದಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದುದ್ದೇ ಮಳೆಯಾದ ಸಂದರ್ಭದಲ್ಲಿ ಕಟ್ಟಡ ವಾಲಲು ಕಾರಣ ಎನ್ನಲಾಗಿದೆ.

ಕಟ್ಟಡ ನಿರ್ಮಿಸುತ್ತಿದ್ದ ವ್ಯಕ್ತಿ ಸ್ಥಳೀಯ ಬಿಬಿಎಂಪಿ ಸದಸ್ಯ ರಾಮಚಂದ್ರ ಅವರ ಸಂಬಂಧಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಇಡೀ ಈಜೀಪುರ ಗ್ರಾಮವೇ ಒಂದು ಕಾಲದಲ್ಲಿ ರಾಮಚಂದ್ರ ಅವರ ಪೂರ್ವಿಕರ ಆಸ್ತಿ. ಇಡೀ ಆಸ್ತಿಯನ್ನು ನಿವೇಶನಗಳನ್ನಾಗಿ ವಿಂಗಡಿಸಿ ಹಂಚಿಕೆ ಮಾಡಲಾಗಿದೆ. ಇಂದಿಗೂ ಈಜೀಪುರದಲ್ಲಿ ಪಂಚಾಯ್ತಿ ನಡೆಸುವುದು ರಾಮಚಂದ್ರ ಅವರ ಪೋಷಕರೇ ಎಂಬುದು ಇಲ್ಲಿ ಗಮನಾರ್ಹ.  ಇಡೀ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸಾವಿರಾರು ಕಟ್ಟಡಗಳಲ್ಲಿ ಸುಮಾರು 80 ಭಾಗ ಅಕ್ರಮ ಕಟ್ಟಡಗಳು ಎನ್ನಲಾಗಿದೆ. ಈ ವಿಷಯ ತಿಳಿದಿದ್ದರೂ ಯಾವೊಬ್ಬ ಅಧಿಕಾರಿಯೂ ತುಟಿ ಬಿಚ್ಚದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ನಕ್ಷೆ ಉಲ್ಲಂಘಿಸಿ ಮನಸೋ ಇಚ್ಛೆ ಕಟ್ಟಡ ನಿರ್ಮಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕಾನೂನುಬದ್ಧವಾಗಿ ಮನೆ ನಿರ್ಮಿಸಿಕೊಂಡ ಅಕ್ಕಪಕ್ಕದ ಅಮಾಯಕ ನಿವಾಸಿಗಳ ಗೋಳು ಹೇಳತೀರದಾಗಿದೆ. ನ್ಯಾಯಾಲಯದಲ್ಲಿರುವ ಅಕ್ರಮ-ಸಕ್ರಮ ಯೋಜನೆ ವ್ಯಾಜ್ಯ ಇತ್ಯರ್ಥಗೊಂಡು ನಗರದಲ್ಲಿ ಅಕ್ರಮ-ಸಕ್ರಮ ಯೋಜನೆ ಜಾರಿಗೆ ಬಂದರೆ ಇಂತಹ ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡಿಕೊಳ್ಳಬಹುದು ಎಂದು ಬಹುತೇಕ ಕಟ್ಟಡ ಮಾಲೀಕರು ಭಾವಿಸಿದ್ದಾರೆ. ಆದರೆ ಇರುವ ಸತ್ಯಾಂಶವೇ ಬೇರೆ. ನಿರ್ಮಿತ ಕಟ್ಟಡ ಶೇ.50ರಷ್ಟು ಅಕ್ರಮವಾಗಿದ್ದರೆ ಮಾತ್ರ ಸಕ್ರಮ ಮಾಡಬಹುದು. ಆದರೆ ಈಜೀಪುರದಲ್ಲಿರುವ ಮುಕ್ಕಾಲುಭಾಗದ ಕಟ್ಟಡಗಳು ಸರಿಸುಮಾರು ಶೇ.200ರಷ್ಟು ನಿಯಮ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ. ಇಂತಹ ಕಟ್ಟಡಗಳನ್ನು ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿಯೂ ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ತಜ್ಞರು.

Building-Bengaluru

ಇತರ ಗ್ರಾಮಗಳಿಗೂ ಅನ್ವಯ:

ಅಕ್ರಮವಾಗಿ ಬಹುಮಹಡಿ ಕಟ್ಟಡ ನಿರ್ಮಿಸುವುದು ಕೇವಲ ಈಜೀಪುರಕ್ಕೆ ಮಾತ್ರ ಸೀಮಿತವಾಗಿಲ್ಲ. ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‍ಗಳಲ್ಲೂ ಇಂತಹ ಲಕ್ಷಾಂತರ ಅಕ್ರಮ ಕಟ್ಟಡಗಳಿವೆ.  ಬಹುತೇಕ ಬೃಹತ್ ಕಟ್ಟಡಗಳು ಅಗ್ನಿಶಾಮಕದಳದ ನಿಯಮಗಳನ್ನು ಉಲ್ಲಂಘಿಸಿವೆ. ಬಹಳಷ್ಟು ಕಟ್ಟಡಗಳು ನಕ್ಷೆ ಮಂಜೂರಾತಿ ಅನ್ವಯ ನಿರ್ಮಿಸಿಲ್ಲ. ಹೀಗಾಗಿ ಇಡೀ ಬಿಬಿಎಂಪಿ ವ್ಯಾಪ್ತಿಯಲ್ಲೇ ಯಾವುದೇ ಸಂದರ್ಭದಲ್ಲಿ ಕುಸಿದು ಬೀಳಬಹುದಾದಂತಹ ಸಾವಿರಾರು ಕಟ್ಟಡಗಳಿವೆ.

ದೇವರೇ ಗತಿ:

ಕೇವಲ ಎರಡು ದಿನದ ಸಾಧಾರಣ ಮಳೆಗೆ ಹಲವಾರು ಮನೆಗಳು ಉರುಳಿಬಿದ್ದು, ಐದಂತಸ್ತಿನ ಕಟ್ಟಡವೊಂದು ವಾಲಿದೆ. ಇನ್ನು ಮುಂಬೈನಲ್ಲಿ ಆದಂತಹ ಭಾರೀ ಮಳೆ ಬೆಂಗಳೂರಿನಲ್ಲಿ ಬಂದರೆ ಅದೆಷ್ಟು ಕಟ್ಟಡಗಳು ಕುಸಿದು ಬೀಳುತ್ತವೋ ಆ ದೇವರೇ ಬಲ್ಲ.  ಸತ್ಯಾಂಶ ಗೊತ್ತಿದ್ದರೂ ಸಂಬಂಧಪಟ್ಟವರು ತಮಗೂ, ಅದಕ್ಕೂ ಸಂಬಂಧವಿಲ್ಲವೆಂಬಂತೆ ಕಣ್ಮುಚ್ಚಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿ.

ಯಾರು ಹೊಣೆ…?

ನಗರದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಲು ಕೇವಲ ಬಿಬಿಎಂಪಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕಾರಣಕರ್ತರಲ್ಲ. ಇವರ ಜೊತೆಗೆ ಕಟ್ಟಡ ನಿರ್ಮಿಸುವ ಮಂದಗೇಡಿಗಳೂ ಕಾರಣಕರ್ತರಾಗುತ್ತಾರೆ. ಕಾನೂನಿನಂತೆ ಬಿಬಿಎಂಪಿಯಿಂದ ಕೇವಲ 2 ಅಥವಾ 3 ಅಂತಸ್ತಿನ ಕಟ್ಟಡ ನಿರ್ಮಿಸಲು ಅನುಮತಿ ಪಡೆದು ತಮಗಿಚ್ಛೆ ಬಂದಂತೆ ಬೃಹತ್ ಕಟ್ಟಡ ನಿರ್ಮಿಸುತ್ತಲೇ ಹೋಗುತ್ತಾರೆ.  ಅಕ್ರಮವಾಗಿ ಕಟ್ಟಡ ನಿರ್ಮಿಸುವುದನ್ನು ಕಣ್ಣಾರೆ ಕಂಡರೂ ಸ್ಥಳೀಯ ಬಿಬಿಎಂಪಿ ಎಂಜಿನಿಯರ್‍ಗಳು ತುಟಿಕ್-ಪಿಟಿಕ್ ಎನ್ನುವುದಿಲ್ಲ. ಒಂದು ವೇಳೆ ತುಟಿಕ್-ಪಿಟಿಕ್ ಎಂದರೆ ಸ್ಥಳೀಯ ಬಿಬಿಎಂಪಿ ಸದಸ್ಯರೇ ಅಕ್ರಮ ಬಿಲ್ಡರ್‍ಗಳ ನೆರವಿಗೆ ಬರುತ್ತಾರೆ. ಇನ್ನು ಅಕ್ರಮ ಕಟ್ಟಡ ಪತ್ತೆ ಹಚ್ಚಲು ಬರುವ ನಗರ ಯೋಜನೆ ಸದಸ್ಯರುಗಳಿಗೆ ಅಕ್ರಮ ಕಟ್ಟಡ ನಿರ್ಮಿಸುತ್ತಿರುವುದು ಕಂಡುಬಂದಾಗ ಅವರ ಕೈ ಬೆಚ್ಚಗೆ ಮಾಡಿದರೆ ಸಾಕು ಕಣ್ಮುಚ್ಚಿಕೊಂಡು ಕಚೇರಿಗೆ ತೆರಳುತ್ತಾರೆ.

ಇನ್ನಾದರೂ ಎಚ್ಚೆತ್ತುಕೊಳ್ಳಿ :

ಈಜೀಪುರದ ಐದಂತಸ್ತಿನ ಕಟ್ಟಡ ವಾಲಿದ ಪ್ರಕರಣವನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಬೇಕು. ಭವಿಷ್ಯದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತದಂತೆ ಎಚ್ಚರ ವಹಿಸಬೇಕು. ಈಗಾಗಲೇ ನಿರ್ಮಿಸಿರುವ ಅಕ್ರಮ ಕಟ್ಟಡಗಳನ್ನೂ ಪತ್ತೆ ಹಚ್ಚಿ ಸಕ್ರಮಗೊಳಿಸಬೇಕು. ಒಂದು ವೇಳೆ ಅಕ್ರಮ ಕಟ್ಟಡ ಮಾರಣಾಂತಿಕ ಎಂಬುದು ಸಾಬೀತಾದರೆ ಅಂತಹ ಕಟ್ಟಡಗಳನ್ನು ನೆಲಸಮ ಮಾಡುವ ಮೂಲಕ ಆಗಬಹುದಾದ ಅನಾಹುತ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

Facebook Comments

Sri Raghav

Admin