ಬೆಂಗಳೂರಲ್ಲಿ ಬಾವರಿಯಾ ಗ್ಯಾಂಗ್‍ನ ಕುಖ್ಯಾತ ಸರಗಳ್ಳನಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

Firing-Bangalore--01

ಬೆಂಗಳೂರು, ಏ.11- ಪಲ್ಸರ್ ಬೈಕ್‍ನಲ್ಲಿ ಬಂದು ಕ್ಷಣಮಾತ್ರದಲ್ಲಿ ಮಹಿಳೆಯರ ಕುತ್ತಿಗೆಯಲ್ಲಿನ ಸರ ಅಪಹರಿಸಿ ಮಿಂಚಿನ ವೇಗದಲ್ಲಿ ಪರಾರಿಯಾಗುತ್ತ ರಾಜಧಾನಿ ನಾಗರಿಕರಲ್ಲಿ ಭೀತಿ ಮೂಡಿಸಿದ್ದ ಬಾವರಿಯಾ ಗ್ಯಾಂಗ್‍ನ ಕುಖ್ಯಾತ ಸರಗಳ್ಳನೊಬ್ಬನನ್ನು ಗುಂಡು ಹಾರಿಸಿ ಬಂಧಿಸುವಲ್ಲಿ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಸರಗಳ್ಳನನ್ನು ಉತ್ತರ ಪ್ರದೇಶದ ಬಾವರಿಯಾ ಗ್ಯಾಂಗ್‍ನ ರಾಮ್‍ಸಿಂಗ್ ಅಲಿಯಾಸ್ ಸುಮೇರ್ ಅಲಿಯಾಸ್ ಹೋಮಿ (35) ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕಾಗಿ ಉತ್ತರ ವಿಭಾಗದ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.

ನಗರದಲ್ಲಿ ಬೀಡುಬಿಟ್ಟಿದ್ದ ಬಾವರಿಯಾ ಗ್ಯಾಂಗ್‍ನವರು ಕಣ್ ಮಿಟುಕಿಸುವುದರೊಳಗೆ ಒಂಟಿ ಮಹಿಳೆಯರ ಕತ್ತಿನಲ್ಲಿದ್ದ ಮಾಂಗಲ್ಯ ಸರ ಅಪಹರಿಸಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗುತ್ತಿದ್ದರು. ಉತ್ತರ ವಿಭಾಗದಲ್ಲಿ ಇತ್ತೀಚೆಗೆ ಬಾವರಿಯಾ ಗ್ಯಾಂಗ್‍ನವರು ಮೂರ್ನಾಲ್ಕು ಮಹಿಳೆಯರ ಸರ ಅಪಹರಿಸಿ ಪರಾರಿಯಾಗಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಸರಗಳ್ಳರ ಬಂಧನಕ್ಕೆ ಉತ್ತರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ರಾಠೋಡ್ ಅವರು ಯಶವಂತಪುರ ಎಸಿಪಿ ರವಿಪ್ರಸಾದ್ ಪಿ., ಮಹಾಲಕ್ಷ್ಮಿ ಬಡಾವಣೆ ಇನ್ಸ್‍ಪೆಕ್ಟರ್ ಲೋಹಿತ್, ನಂದಿನಿ ಲೇಔಟ್ ಇನ್ಸ್‍ಪೆಕ್ಟರ್ ಕಾಂತರಾಜು, ಆರ್‍ಎಂಸಿ ಯಾರ್ಡ್ ಇನ್ಸ್‍ಪೆಕ್ಟರ್ ರಾಮಪ್ಪ , ಸಬ್‍ಇನ್ಸ್‍ಪೆಕ್ಟರ್ ಸೋಮಶೇಖರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದರು.

ಸಿಕ್ಕಿಬಿದ್ದಿದ್ದು ಹೀಗೆ: ಪಂಜಾಬ್ ನೋಂದಣಿಯ ಪಲ್ಸರ್ ಬೈಕ್‍ನಲ್ಲಿ ಬರುವ ಬಾವರಿಯಾ ಗ್ಯಾಂಗ್‍ನ ಸದಸ್ಯರು ಸರ ಅಪಹರಣ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಿಪುರ ಕ್ರಾಸ್ ಬಳಿ ನಿನ್ನೆ ಮಧ್ಯಾಹ್ನ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ನಿನ್ನೆ ಮಧ್ಯಾಹ್ನ ಪಂಜಾಬ್ ನೋಂದಣಿಯ ಬಜಾಜ್ ಪಲ್ಸರ್ ಬೈಕ್ ಬಂದಾಗ ಆರೋಪಿಗಳ ಚಹರೆ ಪತ್ತೆಹಚ್ಚಿದ ಕಾನ್ಸ್‍ಟೆಬಲ್‍ಗಳಾದ ಬಿರಾದಾರ ಮತ್ತು ಇಮಾಮ್‍ಸಾಬ್ ಕರಿಕುಟ್ಟಿ ಅವರು ಬೈಕ್ ನಿಲ್ಲಿಸಲು ಯತ್ನಿಸಿದಾಗ ಆರೋಪಿಗಳು ಬೈಕ್‍ಅನ್ನು ಸ್ಥಳದಲ್ಲೇ ಬಿಟ್ಟು ಪೊಲೀಸರ ಮೇಲೆ ಚಾಕುವಿನಿಂದ ಕುತ್ತಿಗೆಗೆ ಇರಿದು ಪರಾರಿಯಾಗಿದ್ದರು.

ಆರೋಪಿಗಳು ನೀಲಗಿರಿ ತೋಪಿನಲ್ಲಿ ಪರಾರಿಯಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರ ವಿಶೇಷ ತಂಡ ಇಡೀ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ಕೈಗೊಂಡಿತ್ತು. ರಾತ್ರಿ 11.50ರ ಸಮಯದಲ್ಲಿ ಸೋಮಶೆಟ್ಟಿಹಳ್ಳಿ ಸಮೀಪದ ಕೆರೆಗುಡ್ಡದಹಳ್ಳಿ ಕಾಡಿನಲ್ಲಿ ಪರಾರಿಯಾಗಿದ್ದ ಆರೋಪಿಯನ್ನು ಗುರುತಿಸಿ ಆತನನ್ನು ಹಿಡಿಯಲು ಮುಂದಾದ ಕಾನ್ಸ್‍ಟೆಬಲ್ ಇಮಾಮ್‍ಸಾಬ್ ಕರಿಕುಟ್ಟಿ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾದಾಗ ಸಮಯ ಪ್ರಜ್ಞೆ ಮೆರೆದ ನಂದಿನಿ ಲೇಔಟ್ ಪಿಎಸ್‍ಐ ಸೋಮಶೇಖರ್ ಅವರು ಶರಣಾಗುವಂತೆ ಎಚ್ಚರಿಕೆ ನೀಡಿ ಗುಂಡು ಹಾರಿಸಿದರು.

ಗುಂಡೇಟಿನಿಂದ ಸರಗಳ್ಳ ರಾಮ್‍ಸಿಂಗ್‍ನ ಬಲಗಾಲು ಮತ್ತು ಬಲಗೈಗೆ ಗಾಯಗಳಾಗಿವೆ. ಆತನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿಯ ಹಲ್ಲೆಯಿಂದ ಗಾಯಗೊಂಡಿರುವ ಇಬ್ಬರು ಕಾನ್ಸ್‍ಟೆಬಲ್ ಅವರುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಎಸ್‍ಐ ಸೋಮಶೇಖರ್ ನೀಡಿದ ದೂರಿನ ಮೇರೆಗೆ ರಾಮ್‍ಸಿಂಗ್ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸರಗಳ್ಳತನಕ್ಕೆ ಬಳಸಲಾಗುತ್ತಿದ್ದ ಒಂದು ಪಲ್ಸರ್ ಬೈಕ್ ಮತ್ತು ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಿಸಿದ್ದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments

Sri Raghav

Admin