ಬೆಂಗಳೂರಲ್ಲಿ ಬೀದಿ ನಾಯಿ ಹಾವಳಿ ತಪ್ಪಿಸುವುದು ಅಸಾಧ್ಯ

ಈ ಸುದ್ದಿಯನ್ನು ಶೇರ್ ಮಾಡಿ

Manjunath-Prasad--01

ಬೆಂಗಳೂರು, ಸೆ.6- ನಗರದಲ್ಲಿ ಹೆಚ್ಚಾಗಿರುವ ಬೀದಿನಾಯಿ ಹಾವಳಿ ತಪ್ಪಿಸಲು ಅಸಾಧ್ಯ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರ್ಕಾರ ಬೀದಿ ನಾಯಿಗಳನ್ನು ಸಾಯಿಸಬಾರದು ಹಾಗೂ ದೂರದ ನಿರ್ಜನ ಪ್ರದೇಶಗಳಿಗೂ ಬಿಡಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿವೆ. ಹಾಗಾಗಿ ನಾವು ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕಳೆದ ವರ್ಷ ಬೀದಿ ನಾಯಿ ಗಳನ್ನು ಬೇರೆಡೆ ಕೊಂಡು ಹೋಗಿ ಸುಟ್ಟು ಹಾಕಿದ್ದೆವು. ಬೀದಿ ನಾಯಿಗಳನ್ನು ಹಿಡಿಯಬೇಕು, ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಬೇಕು, ರೇಬಿಸ್ ಬರದಂತೆ ಅವುಗಳಿಗೆ ಚುಚ್ಚು ಮದ್ದು ಕೊಡಿಸುವುದು ನಮ್ಮ ಕೆಲಸ. ಅದನ್ನು ಪ್ರತಿ ವರ್ಷವೂ ಕಟ್ಟು ನಿಟ್ಟಾಗಿ ಮಾಡುತ್ತಿದ್ದೇವೆ. ಅದು ಬಿಟ್ಟು ನಾಯಿಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯ ವಾಗುವುದಿಲ್ಲ ಎಂದು ಸ್ಪಷ್ಟಪಡಿಸಿ ದರು.

# ನಿರ್ದಾಕ್ಷಿಣ್ಯವಾಗಿ ರಾಜಕಾಲುವೆ ಒತ್ತುವರಿ ತೆರವು:
ನಗರದಲ್ಲಿ ರಾಜಕಾಲುವೆಯಿಂದಾಗುವ ಅನಾಹುತವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಮತ್ತು ರಾಜಕಾಲುವೆ ಒತ್ತುವರಿ ತೆರವನ್ನು ನಿರ್ದಾಕ್ಷಿಣ್ಯವಾಗಿ ಮಾಡಲಾಗುವುದು ಎಂದು ಇದೇ ವೇಳೆ ಮಂಜುನಾಥ ಪ್ರಸಾದ್ ತಿಳಿಸಿದರು. ರಾಜಕಾಲುವೆ ಒತ್ತುವರಿ ಮಾಡಿ ಕೊಳ್ಳಲು ಸಹಕರಿಸಿರುವ 20 ಅಧಿಕಾರಿಗಳ ವಿರುದ್ಧ ದೋಷಾ ರೋಪಣ ಪಟ್ಟಿ ಸಲ್ಲಿಸಲಾಗಿದ್ದು, ಇದು ವಿಚಾರಣೆ ಹಂತದಲ್ಲಿದೆ ಎಂದು ಹೇಳಿದರು. ನಗರದಲ್ಲಿ ಎಲ್ಲೆಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ ಎಂಬ ಬಗ್ಗೆ ಬಿಎಂಟಿಎಫ್‍ನಲ್ಲಿ ದಾಖಲೆಗಳಿವೆ. ಇದನ್ನು ತರಿಸಿಕೊಂಡು ತಕ್ಷಣವೇ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಆಯುಕ್ತರು ತಿಳಿಸಿದರು.

# ಮತ್ತೆ ಬೀದಿ ನಾಯಿ ಹಾವಳಿ ಐವರಿಗೆ ಗಾಯ
ಬೆಂಗಳೂರು, ಸೆ.6- ಇತ್ತೀಚೆಗಷ್ಟೆ ಬೀದಿ ನಾಯಿಗಳ ಹಾವಳಿಯಿಂದ ಬಾಲಕನೊಬ್ಬ ಮೃತಪಟ್ಟ ಘಟನೆ ಮಾಸುವ ಮುನ್ನವೇ ಇಂದು ರಾಜಾಜಿನಗರ 6ನೆ ಬ್ಲಾಕ್‍ನಲ್ಲಿ ಶಾಲಾ ಮಕ್ಕಳು ಮತ್ತು ಪೋಷಕರ ಮೇಲೆ ನಾಯಿಗಳು ದಾಳಿ ನಡೆಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜಾಜಿನಗರ 6ನೆ ಬ್ಲಾಕ್, ಗುಬ್ಬಣ್ಣ ಲೇಔಟ್‍ನಲ್ಲಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಬೀದಿನಾಯಿಗಳು ದಾಳಿ ನಡೆಸಿದ್ದು, ಆಕಾಶ್ ಮತ್ತು ಸಾಯಿಸಿರಿ ಎಂಬ ಮಕ್ಕಳು ಹಾಗೂ ಪೋಷಕರು ಸೇರಿ ಐದು ಮಂದಿ ಗಾಯಗೊಂಡಿದ್ದಾರೆ.  ಗಾಯಗೊಂಡ ಮಕ್ಕಳು ಮತ್ತು ಪೋಷಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ತಕ್ಷಣವೇ ಬೀದಿ ನಾಯಿಗಳನ್ನು ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಬಿಬಿಎಂಪಿ ಸಿಬ್ಬಂದಿ ನಾಯಿಗಳನ್ನು ಹಿಡಿಯಲು ಪ್ರಯತ್ನಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin