ಬೆಂಗಳೂರಲ್ಲಿ ಮತ್ತೆ ಚಿಮ್ಮಿದ ರಕ್ತ, ನಡುರಸ್ತೆಯಲ್ಲೇ ಮಚ್ಚು-ಲಾಂಗಿನಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Murdr-v-01
ಬೆಂಗಳೂರು, ಜ.5- ಇಂದು ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲೇ ಯುವಕನನ್ನು ಅಡ್ಡಗಟ್ಟಿದ ಗುಂಪು ಮಚ್ಚು-ಲಾಂಗುಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಲ್ಕರೆ ಮೂಲದ ಸತೀಶ್‍ರೆಡ್ಡಿ ಕೊಲೆಯಾದ ಯುವಕ. ಆನೆಕಲ್ ತಾಲೂಕಿನ ಬನ್ನೇರುಘಟ್ಟ ವ್ಯಾಪ್ತಿಯ ಬಿಂಗಿಪುರದ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿರುವ ಪತ್ನಿಯನ್ನು ಇಂದು ಬೆಳಗ್ಗೆ ಎಂದಿನಂತೆ ಬೈಕ್‍ನಲ್ಲಿ ಕರೆದುಕೊಂಡು ಕಂಪೆನಿಗೆ ಡ್ರಾಪ್ ಮಾಡಿ ಸತೀಶ್‍ರೆಡ್ಡಿ 9 ಗಂಟೆಯಲ್ಲಿ ವಾಪಸಾಗುತ್ತಿದ್ದರು.

ಈ ವೇಳೆ ಜನನಿಬಿಡ ಸ್ಥಳವಾದ ಬಿಂಗಿಪುರದ ಬಳಿ ಈತನಿಗಾಗಿ ಕಾದು ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಸತೀಶ್‍ರೆಡ್ಡಿ ಬೈಕ್‍ಅನ್ನು ಅಡ್ಡಗಟ್ಟಿ ಮಚ್ಚು-ಲಾಂಗ್‍ಗಳಿಂದ ಹಲ್ಲೆ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಓಡಿದರೂ ಬಿಡದೆ ಅಟ್ಟಾಡಿಸಿಕೊಂಡು ನಡುರಸ್ತೆಯಲ್ಲೇ ಭೀಕರವಾಗಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸತೀಶ್‍ರೆಡ್ಡಿಯವರು ಇಂದು ಬೆಳಗ್ಗೆ ಮಾಲೆ ಧರಿಸಿದ್ದರು ಎನ್ನಲಾಗಿದೆ. ಇತ್ತೀಚೆಗೆ ಜಯಕರ್ನಾಟಕ ಸಂಘಟನೆಯಲ್ಲೂ ಗುರುತಿಸಿಕೊಂಡಿದ್ದ ಈತ ಸಂಸದ ಸುರೇಶ್ ಅವರ ಆಪ್ತರ ಬಳಗದಲ್ಲೂ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಸುದ್ದಿ ತಿಳಿದ ಬನ್ನೇರುಘಟ್ಟ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹಳೆ ದ್ವೇಷದಿಂದ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಈತನ ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಡಿವೈಎಸ್‍ಪಿ ಎಸ್.ಕೆ.ಉಮೇಶ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ.

Facebook Comments

Sri Raghav

Admin