ಬೆಂಗಳೂರಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಯುವತಿ ಮೇಲೆರಗಿದ ಕಾಮುಕ

ಈ ಸುದ್ದಿಯನ್ನು ಶೇರ್ ಮಾಡಿ

Chinaswamy-Stadum

ಬೆಂಗಳೂರು, ಜ.7-ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳ ಪ್ರಕರಣ ನಗರದ ಜನತೆಯನ್ನು ಬೆಚ್ಚಿ ಬೀಳಿಸಿರುವಾಗಲೇ ಮತ್ತೊಂದು ಇಂತಹದ್ದೇ ಘಟನೆ ನಡೆದಿದೆ. ಈ ಬಾರಿ ನಗರದ ಹೃದಯಭಾಗದಲ್ಲಿರುವ ಅತ್ಯಂತ ಜನನಿಬಿಡ ಪ್ರದೇಶವಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಯುವತಿಯೊಬ್ಬಳ ಮೇಲೆ ದುಷ್ಕರ್ಮಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.  ನಡೆದಿರುವ ಘಟನೆ ಕುರಿತು ಯುವತಿ ಫೇಸ್‍ಬುಕ್‍ನಲ್ಲಿ ಹೇಳಿಕೊಂಡಿದ್ದಾಳೆ. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಯುವತಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದುಕೊಂಡು ಬರುತ್ತಿದ್ದ ವೇಳೆ ದಿಢೀರನೆ ಎದುರಾದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.

ನಾನು ಮೊಬೈಲ್ ನೋಡಿಕೊಂಡು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬರುತ್ತಿದ್ದೆ. ಆಗಂತುಕನೊಬ್ಬ ಬಂದು ನನ್ನನ್ನು ಹಿಡಿದು ಎಳೆದಾಡಿದ್ದಲ್ಲದೆ, ಮೊಬೈಲ್, ವ್ಯಾನಿಟಿ ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸಿದ. ಗಾಬರಿಗೊಂಡ ನಾನು ಕಿರುಚಾಡಿದೆ. ಹತ್ತಿರದಲ್ಲೇ ಇದ್ದ ಮಹಿಳಾ ಪೇದೆಗಳು ನನ್ನ ಸಹಾಯಕ್ಕೆ ಬರಲಿಲ್ಲ ಎಂದು ನೊಂದ ಯುವತಿ ಆಪಾದಿಸಿದ್ದಾಳೆ. ಕನ್ನಡದಲ್ಲೇ ಮಾತನಾಡುತ್ತಿದ್ದ ಆತ ತೊದಲು ನುಡಿಯುತ್ತಿದ್ದ. ಬಹುಶಃ ಮದ್ಯಪಾನ ಸೇವಿಸಿದ್ದ ಆ ದುಷ್ಕರ್ಮಿ ಮೊದಲು ಕತ್ತಿನಲ್ಲಿದ್ದ ಚೈನ್, ಉಂಗುರ, ಮೊಬೈಲ್, ನಗದು ಕಿತ್ತುಕೊಳ್ಳಲು ಯತ್ನಿಸಿದ. ಅಲ್ಲದೆ ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿದ.

ನಾನೂ ಕೂಡ ಕನ್ನಡದಲ್ಲಿ ಮಾತನಾಡಿ, ಈ ರೀತಿ ಮಹಿಳೆಯ ವರ್ತಿಸುವುದು ಸರಿಯಲ್ಲ. ನಿನ್ನ ವಿರುದ್ಧ ಪೊಲೀಸರಿಗೆ ದೂರುನೀಡುತ್ತೇನೆ ಎಂದು ಎಚ್ಚರಿಸಿದೆ. ಅಷ್ಟಕ್ಕೂ ಸುಮ್ಮನಾಗದ ಆತ ನನ್ನನು ಅವಾಚ್ಯ ಶಬ್ಧಗಳಿಂದ ನಿಂದಿಸಿದ. ಇನ್ನು ಸುಮ್ಮನಿದ್ದರೆ ನನ್ನ ಮೇಲೆ ಹಲ್ಲೆ ನಡೆಸಬಹುದೆಂಬ ಭೀತಿಯಿಂದ ಕಿರುಚಿಕೊಂಡು ಆತನನ್ನು ಹಿಡಿಯಲು ಯತ್ನಿಸಿದೆ. ಇಷ್ಟೆಲ್ಲಾ ನಡೆದರೂ ಇಬ್ಬರು ಮಹಿಳಾ ಪೇದೆಗಳು ನೋಡಿಯೂ ನೋಡದಂತೆ ಸುಮ್ಮನಿದ್ದರು ಎಂದು ಆರೋಪಿಸಿದ್ದಾಳೆ. ಇದೀಗ ನೊಂದ ಯುವತಿ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ದುಷ್ಕರ್ಮಿಯ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ.

ಸಿಸಿ ಟಿವಿಯಲ್ಲಿ ಸೆರೆ:

ಇಡೀ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಸ್ತೂರ ಬಾ ರಸ್ತೆಯಿಂದ ಚಿನ್ನಸ್ವಾಮಿ ಸ್ವಾಮಿ ಕ್ರೀಡಾಂಗಣದ ಮುಖ್ಯ ದ್ವಾರದ ಸಮೀಪ 25ವರ್ಷದ ಯುವತಿ ಬರುತ್ತಿದ್ದಾಗ ಈ ಕಾಮುಕ ಬಂದು ದೌರ್ಜನ್ಯವೆಸಗಿದ್ದಾನೆ. ಸಿಸಿ ಟಿವಿಯಲ್ಲಿ ಈತನ ಮುಖ ಅಸ್ಪಷ್ಟವಾಗಿ ಕಾಣುತ್ತಿದೆ.  ಹೊಸ ವರ್ಷಾಚರಣೆ ವೇಳೆ ಬ್ರಿಗೇಡ್ ರಸ್ತೆ, ಕಮ್ಮನಹಳ್ಳಿ ಹಾಗೂ ಕೆ.ಜೆ.ಹಳ್ಳಿಯಲ್ಲಿ ಯುವತಿಯರ ಮೇಲೆ ನಡೆದಿರುವ ಲೈಂಗಿಕ ಕಿರುಕುಳ ಪೊಲೀಸರಿಗೆ ಭಾರೀ ತಲೆ ಬಿಸಿಯಾಗಿರುವಾಗಲೇ ಈ ಘಟನೆ ನಡೆದಿರುವುದು ಸಾರ್ವಜನಿಕರನ್ನು ಇನ್ನಷ್ಟು ಧೃತಿಗೆಡಿಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin