ಬೆಂಗಳೂರಲ್ಲಿ ಮಹಾ ಮಳೆಗೆ ಮೂರು ಕಡೆ ಭೂಕುಸಿತ

ಈ ಸುದ್ದಿಯನ್ನು ಶೇರ್ ಮಾಡಿ

Bangalore-Rain---01

ಬೆಂಗಳೂರು, ಅ.14-ಕಂಡೂ ಕೇಳರಿಯದ ಮಹಾಮಳೆಗೆ ನಗರ ತತ್ತರಿಸಿಹೋಗಿದ್ದು, ನಾಲ್ಕು ಕಡೆ ಭೂಕುಸಿತ ಉಂಟಾಗಿರುವುದು ನಾಗರಿಕರ ನಿದ್ದೆಗೆಡಿಸಿದೆ. ಸಮುದ್ರಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ಬೆಂಗಳೂರಿನಲ್ಲಿ ಪ್ರವಾಹ ಉಂಟಾಗುವುದಿಲ್ಲ, ಭೂಕಂಪನವಾಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಯಾವುದೇ ಸಮುದ್ರವಿಲ್ಲದಿದ್ದರೂ ಕಂಡು ಕೇಳರಿಯದ ಮಹಾಮಳೆ ಬೆಂಗಳೂರಿಗರ ನಿದ್ದೆಗೆಡಿಸಿದೆ. ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗದಲ್ಲಿರುವ ಮೆಟ್ರೋ ರೈಲು ನಿಲ್ದಾಣದ ಸಮೀಪವೂ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿದೆ. ಆದರೆ ಅಧಿಕಾರಿಗಳು ಪ್ಲ್ಯಾಸ್ಟಿಕ್ ಕವರ್‍ನಿಂದ ಭೂಕುಸಿತ ಮರೆ ಮಾಚಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳೇ ನದಿಗಳಂತಾಗಿವೆ. ನಿನ್ನೆ ರಾತ್ರಿ ಸುರಿದ ಮಳೆಗೆ ವಿಜಯನಗರದ ಎಂ.ಸಿ.ಬಡಾವಣೆ ಸಮೀಪ 7 ಅಡಿ ಆಳದ ಭೂ ಕುಸಿತ ಉಂಟಾಗಿದೆ. ಭೂ ಕುಸಿತದ ಪರಿಣಾಮ ಪಕ್ಕದ ಮನೆಯ ಕಾಂಪೌಂಡ್ ಬಿರುಕು ಬಿಟ್ಟಿದ್ದು, ಅಲ್ಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಅದೇರೀತಿ ವೈಯಾಲಿಕಾವಲ್ ರಸ್ತೆ 6 ಅಡಿ ಕುಸಿದುಬಿದ್ದು ಆತಂಕ ಸೃಷ್ಟಿಸಿದೆ. ನಿನ್ನೆ ಸಜ್ಜನ್‍ರಾವ್ ವೃತ್ತದ ಪಾದಚಾರಿ ಮಾರ್ಗ ಕುಸಿದು ಬಿದ್ದು ಎರಡು ಕಾರುಗಳು 2 ಅಡಿ ಆಳಕ್ಕಿಳಿದಿದ್ದವು. ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ನಗರದಲ್ಲಿ ಸಾಕಷ್ಟು ಪ್ರಾಣಹಾನಿ, ಅನಾಹುತ ಸೃಷ್ಟಿಸಿರುವ ಬೆನ್ನಲ್ಲೇ ಭೂಮಿ ಬಾಯ್ಬಿಡುತ್ತಿರುವುದು ಆಘಾತ ಉಂಟು ಮಾಡಿದೆ.

ಕಳಪೆ ಕಾಮಗಾರಿಯೇ ಕಾರಣ:

ಭೂ ಕುಸಿತ ಉಂಟಾಗುತ್ತಿರುವುದು, ರಸ್ತೆಗಳು ಗುಂಡಿ ಬೀಳುತ್ತಿರುವುದಕ್ಕೆ ಬಿಬಿಎಂಪಿಯ ಕಳಪೆ ಕಾಮಗಾರಿಗಳೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.  ಬಹುತೇಕ ಭೂಕುಸಿತ ಉಂಟಾಗಿರುವ ಪ್ರದೇಶಗಳಲ್ಲಿ ಇತ್ತೀಚೆಗಷ್ಟೆ ಅಭಿವೃದ್ಧಿ ಕಾಮಗಾರಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗುತ್ತಿಗೆದಾರರು ಸಮರ್ಪಕವಾಗಿ ಕಾಮಗಾರಿ ನಿರ್ವಹಿಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.  ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಅವ್ಯವಹಾರದಲ್ಲಿ ಅವರೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ.

Facebook Comments

Sri Raghav

Admin