ಬೆಂಗಳೂರಲ್ಲಿ ಹಾಡುಹಗಲೇ ನಡುರಸ್ತೆಯಲ್ಲಿ ರೌಡಿ ಗಣೇಶ್ ಮರ್ಡರ್

ಈ ಸುದ್ದಿಯನ್ನು ಶೇರ್ ಮಾಡಿ

Rowdy-Ganesh

ಬೆಂಗಳೂರು, ಅ.23- ಕಾರಿನಿಂದ ಇಳಿದು ಹೋಗುತ್ತಿದ್ದ ರೌಡಿಯೊಬ್ಬನನ್ನು ದುಷ್ಕರ್ಮಿಗಳ ತಂಡವೊಂದು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಇಂದು ಬೆಳಗ್ಗೆ ಉದ್ಯಾನಗರಿಯ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಗಣೇಶ್(37) ದುಷ್ಕರ್ಮಿಗಳಿಂದ ಕೊಲೆಗೀಡಾದ ರೌಡಿಶೀಟರ್. ಚುಂಚಘಟ್ಟ ಮುಖ್ಯರಸ್ತೆಯಲ್ಲಿರುವ ವಿನಾಯಕ ಥಿಯೇಟರ್ ಸಮೀಪ ಈ ಭೀಕರ ಕೊಲೆ ನಡೆದಿದ್ದು, ಬೆಂಗಳೂರಿನ ನಾಗರಿಕರು ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ.

ಘಟನೆ ವಿವರ:

ಚುಂಚಘಟ್ಟದ ಹರಿನಗರ ನಿವಾಸಿಯಾದ ಗಣೇಶ್  ಇಂದು ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ವಿನಾಯಕ ಚಿತ್ರಮಂದಿರದ ಬಳಿ ಇರುವ ರಿಕ್ರಿಯೇಷನ್ ಕ್ಲಬ್‍ಗೆ ಕಾರಿನಲ್ಲಿ ಬಂದಾಗ ಮಾರಕಾಸ್ತ್ರಗಳನ್ನು ಹೊಂದಿದ್ದ ಐವರು ದುಷ್ಕರ್ಮಿಗಳು ಹಠಾತ್ ದಾಳಿ ನಡೆಸಿ ಮಚ್ಚು, ಲಾಂಗ್ ಮೊದಲಾದ ಹರಿತವಾದ ಆಯುಧಗಳಿಂದ ತಲೆ, ಕೈಕಾಲುಗಳ ಮೇಲೆ ಭೀಕರ ಪ್ರಹಾರ ನಡೆಸಿದರು.  ತೀವ್ರ ಹಲ್ಲೆಗೆ ಒಳಗಾಗಿದ್ದ ಗಣೇಶ್ ರಕ್ತಸ್ರಾವದಿಂದ  ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕಗ್ಗೊಲೆ ನಂತರ ದುಷ್ಕರ್ಮಿಗಳ ತಂಡ ಪರಾರಿಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ದಕ್ಷಿಣ ವಿಭಾಗದ ಡಿಸಿಪಿ  ಶರಣಪ್ಪ ಪರಿಶೀಲಿಸಿ ಆರೋಪಿಗಳ ಬಂಧನಕ್ಕೆ ಮಾರ್ಗದರ್ಶನ ನೀಡಿದ್ದಾರೆ.

ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿ ಗಣೇಶ್ ಹೆಸರಿತ್ತು. ಈತನ ವಿರುದ್ಧ ಸುಬ್ರಹ್ಮಣ್ಯಪುರ ಮತ್ತು ತಲಘಟ್ಟಪುರ ಪೊಲೀಸ್ ಠಾಣೆಗಳಲ್ಲಿ ಒಟ್ಟು ಆರು ಪ್ರಕರಣಗಳು ದಾಖಲಾಗಿದ್ದವು. ರೌಡಿಗಳ ಪೆರೇಡ್ ಸಂದರ್ಭದಲ್ಲಿ ಗಣೇಶನಿಗೆ ಉನ್ನತ ಪೊಲೀಸ್ ಅಧಿಕಾರಿಗಳು ಅಪರಾಧ ಕೃತ್ಯಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ಸಹ ನೀಡಿ ಕಳುಹಿಸಿದ್ದರು. ಹಲವು ಪ್ರಕರಣಗಳಲ್ಲಿ  ಜೈಲಿಗೆ ಹೋಗಿ ಬಂದಿದ್ದ ಗಣೇಶ್ ರಿಯಲ್ ಎಸ್ಟೇಟ್ ಹಾಗೂ ಕೇಬಲ್ ವ್ಯವಹಾರ ನಡೆಸುತ್ತಿದ್ದ  ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಈ ಕಗ್ಗೊಲೆಗೆ ಹಳೆ ವೈಷಮ್ಯ ಕಾರಣ ಇರಬಹುದೆಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಂತಕರನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು , ತನಿಖೆ ತೀವ್ರಗೊಂಡಿದೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ರೌಡಿಗಳ ಹತ್ಯೆ  ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಗಣೇಶ್‍ನ ಕೊಲೆ ನಡೆದಿದೆ.

► Follow us on –  Facebook / Twitter  / Google+

Facebook Comments

Sri Raghav

Admin