ಬೆಂಗಳೂರಿಗರಿಗೆ ತಪ್ಪದ ಮಳೆರಾಯನ ಕಾಟ : ಕೆರೆಯಾದ ಕೆಂಪೇಗೌಡ ಬಸ್ ನಿಲ್ದಾಣ
ಬೆಂಗಳೂರು, ಅ.8- ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಹಲವೆಡೆ ಮರಗಳು ಬುಡ ಮೇಲಾಗಿದ್ದು, ಪ್ರಮುಖವಾಗಿ ಕೆಂಪೇಗೌಡ ಬಸ್ ನಿಲ್ದಾಣ, ಸಿಟಿ ರೈಲ್ವೆ ನಿಲ್ದಾಣದಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆಯೂ ನಡೆದಿದೆ. ಎಂದಿನಂತೆ ಎಚ್ಎಸ್ಆರ್ ಲೇ ಔಟ್, ಬೊಮ್ಮನಹಳ್ಳಿ, ಮಡಿವಾಳ, ಕೋರಮಂಗಲ ಸೇರಿದಂತೆ ಹಲವು ತಗ್ಗು ಪ್ರದೇಶದ ಜನ ವಸತಿ ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ರಾತ್ರಿ ಇಡೀ ಜಾಗರಣೆ ಮಾಡಿದ ಘಟನೆ ಜರುಗಿದೆ. ಕೆಲವು ಅಪಾರ್ಟ್ಮೆಂಟ್ಗಳ ನೆಲಮಹಡಿ ಮುಳುಗಿದ್ದು, ಅಲ್ಲಿದ್ದ ವಾಹನಗಳು ಸಹ ಹಾನಿಗೊಂಡಿದೆ.
ಬಿಬಿಎಂಪಿ ಕಾಲ್ ಸೆಂಟರ್ಗೆ ರಾತ್ರಿ ಇಡೀ ದೂರುಗಳ ಸುರಿಮಳೆಯೇ ಹರಿದು ಬಂದಿದೆ. ಕೆಲವೆಡೆ ತುರ್ತು ಸೇವೆ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಪಡೆ ಭೇಟಿ ನೀಡಿದ್ದು, ನೀರನ್ನು ಹೊರ ಹಾಕುವ ಪ್ರಯಾಸ ಪಟ್ಟಿದ್ದಾರೆ. ಓಕಳಿಪುರದ ಬಳಿ ನಿರ್ಮಾಣಗೊಳ್ಳುತ್ತಿರುವ ಪೆರಿಫೆರಲ್ ರಸ್ತೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಿದ್ದ ಸೇತುವೆ ಕೂಡ ಕುಸಿದಿದೆ. ಬೆಳಗ್ಗೆ ಇದು ನಡೆದಿದ್ದರೆ ಭಾರೀ ಅವಘಡ ನಡೆಯುತ್ತಿತ್ತು. ಆದರೆ ರಾತ್ರಿಯಾದ ಕಾರಣ ಯಾವುದೇ ಕಾರ್ಮಿಕರು ಇರದಿದ್ದರಿಂದ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತಿದೆ.
ವೈಯಾಲಿಕಾವಲ್ ಬಳಿ ಭಾರೀ ಗಾತ್ರದ ಮರವೊಂದು ಬಿದ್ದ ಪರಿಣಾಮ 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂಗೊಂಡಿದೆ. ವಿದ್ಯುತ್ ಕಂಬಗಳು ಕೂಡ ಜಖಂಗೊಂಡಿದ್ದರಿಂದ ವಿದ್ಯುತ್ ಕೈಕೊಟ್ಟಿತ್ತು. ಭಾನುವಾರ ಮಧ್ಯಾಹ್ನದವರೆಗೂ ವಿದ್ಯುತ್ ಕಡಿತದಿಂದ ಸ್ಥಳೀಯರು ದಿನನಿತ್ಯದ ಕಾರ್ಯಗಳಿಗೆ ಅಡಚಣೆಯಾಗಿತ್ತು.