ಬೆಂಗಳೂರಿಗರಿಗೆ ಶಾಕಿಂಗ್ ನ್ಯೂಸ್ : ಇನ್ನೆರಡು ತಿಂಗಳಲ್ಲಿ ಎದುರಾಗಲಿದೆ ನೀರಿನ ಅಭಾವ..!

ಈ ಸುದ್ದಿಯನ್ನು ಶೇರ್ ಮಾಡಿ

Kaveri

ಬೆಂಗಳೂರು, ಮೇ 1- ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ಜಲಾನಯನ ಭಾಗದಲ್ಲಿ ನೀರಿನ ಸಂಗ್ರಹದ ಪ್ರಮಾಣ ಕಡಿಮೆಯಿದ್ದು, ಮಿತವಾಗಿ ಬಳಸಿದರೆ ಮಾತ್ರ ಜೂನ್ ಅಂತ್ಯದವರೆಗೂ ನೀರು ಸಾಕಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ನಿನ್ನೆ ರಾಜ್ಯ ಸರ್ಕಾರದ ಅಭಿವೃದ್ಧಿ ಆಯುಕ್ತ ಡಿ.ವಿ.ಪ್ರಸಾದ್ ನೇತೃತ್ವದಲ್ಲಿ ನಡೆದ ಇಲಾಖಾ ಮುಖ್ಯಸ್ಥರು, ಮಳೆ-ಬೆಳೆ, ಕುಡಿಯುವ ನೀರು, ಮೇವಿನ ಪರಿಸ್ಥಿತಿ ಕುರಿತ ಸಭೆಯಲ್ಲಿ ರಾಜ್ಯದ ಕುಡಿಯುವ ನೀರಿನ ಸ್ಥಿತಿಗತಿ ಕುರಿತ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳ ಒಟ್ಟು ನೀರಿನ ಸಂಗ್ರಹ 10.39 ಟಿಎಂಸಿ ಅಡಿಗಳಷ್ಟು ಮಾತ್ರ ನೀರಿದೆ. ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಲ್ಲಿ ಪ್ರಸ್ತುತ 5.68 ಟಿಎಂಸಿ ಅಡಿಗಳಷ್ಟು ಮಾತ್ರ ನೀರಿದೆ.

ಈ ನೀರನ್ನು ಮಿತವಾಗಿ ಬಳಸಿದರೆ ಮಾತ್ರ ಬೆಂಗಳೂರು ಸೇರಿದಂತೆ ಕಾವೇರಿ ಜಲಾನಯನ ಭಾಗದ ನಗರ, ಪಟ್ಟಣಗಳಿಗೆ ಕುಡಿಯಲು ಸಾಕಾಗಲಿದೆ. ಇದೇ ನೀರನ್ನು ಇನ್ನೆರಡು ತಿಂಗಳ ಕಾಲ ಬಳಸಬಹುದು. ಇಲ್ಲದಿದ್ದರೆ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಲ್ಲದೆ, ರಾಜ್ಯದ ಅಂತರ್ಜಲ ಮಟ್ಟವು ಶೇ.60ರಷ್ಟು ತಾಲೂಕುಗಳಲ್ಲಿ ಕಡಿಮೆಯಾಗಿರುವುದು ಕಂಡುಬಂದಿದೆ. ಮಾರ್ಚ್ ಅಂತ್ಯದವರೆಗಿನ ಅಂತರ್ಜಲದ ಮಟ್ಟವನ್ನು ಕಳೆದ 10 ವರ್ಷಗಳಿಗೆ ಹೋಲಿಸಿದಾಗ ಬೇಸಿಗೆ ಅವಧಿಯ ಸರಾಸರಿ ಅಂತರ್ಜಲದ ಮಟ್ಟ ಕಡಿಮೆ ಇದೆ. ಹೀಗಾಗಿ ಬೇಸಿಗೆಯಲ್ಲಿ ನೀರಿನ ಮಿತ ಬಳಕೆ ಬಗ್ಗೆ ಜನಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ. ರಾಜ್ಯದ 13 ಜಿಲ್ಲೆಗಳ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು, 200 ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಕಳೆದ ವರ್ಷ ಬರಗಾಲವಿದ್ದದ್ದರಿಂದ ಇದೇ ಅವಧಿಯಲ್ಲಿ 1715 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಟ್ಯಾಂಕರ್‍ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಸುಧಾರಿಸಿದ್ದು, ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ 59, ಹಾಸನ ಜಿಲ್ಲೆ 33, ವಿಜಯಪುರ ಜಿಲ್ಲೆಯ 24 ಗ್ರಾಮಗಳಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಜತೆಗೆ ನಗರ ಪ್ರದೇಶಗಳ 368 ಪುರಸಭೆ ವಾರ್ಡ್‍ಗಳಿಗೆ 199 ಟ್ಯಾಂಕರ್ ಮೂಲಕ ನಿತ್ಯ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಬಳಿ ತುರ್ತು ಕುಡಿಯುವ ನೀರಿನ ಸರಬರಾಜಿಗೆ ಬೇಕಾಗಿರುವ ಅನುದಾನದ ಕೊರತೆ ಇಲ್ಲ ಎಂಬ ಮಾಹಿತಿಯನ್ನು ಸಭೆಯ ಗಮನಕ್ಕೆ ಅಧಿಕಾರಿಗಳು ತಂದಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ವತಿಯಿಂದ ಪ್ರತಿ ಜಿಲ್ಲೆಗೆ ತಲಾ 1 ಕೋಟಿಯಂತೆ ಅನುದಾನ ಒದಗಿಸಿದ್ದು, ಹೊಸ ಕೊಳವೆ ಬಾವಿ, ದುರಸ್ತಿ, ವಿದ್ಯುದ್ದೀಕರಣ ಇತ್ಯಾದಿ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡಲಾಗಿದೆ. ರಾಜ್ಯದಲ್ಲಿ ಜಾನುವಾರುಗಳ ಮೇವು ಸಾಕಷ್ಟಿದ್ದು, ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಸಮಸ್ಯೆಯು ಸದ್ಯಕ್ಕೆ ಕಂಡುಬಂದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜನವರಿ 1ರಿಂದ ಏಪ್ರಿಲ್ ಅಂತ್ಯದ ವರೆಗೆ ರಾಜ್ಯದಲ್ಲಿ 59 ಮಿ.ಮೀ.ನಷ್ಟು ಪೂರ್ವ ಮುಂಗಾರು ಮಳೆಯಾಗಿದ್ದು, ವಾಡಿಕೆಗಿಂತ ಶೇ.29ರಷ್ಟು ಹೆಚ್ಚು ಮಳೆಯಾಗಿದೆ. ಆದರೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin