ಬೆಂಗಳೂರಿಗರಿಗೊಂದು ಗುಡ್ ನ್ಯೂಸ್ : ಬಿಎಂಟಿಸಿ ಬಸ್ ಪ್ರಯಾಣದರದಲ್ಲಿ ಇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

BMTC-Bus--01

ಬೆಂಗಳೂರು, ಏ.13- ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಚಿಲ್ಲರೆ ಸಮಸ್ಯೆ ನಿವಾರಣೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಯಾಣ ದರವನ್ನು ಪರಿಷ್ಕರಿಸಿ ಸಾಮಾನ್ಯ ಬಸ್‍ನ ಎರಡನೆ ಹಂತದಲ್ಲಿ 2 ರೂ. ಹಾಗೂ ವೊಲ್ವೋ ಬಸ್‍ಗಳ ಪ್ರತಿ ಹಂತದಲ್ಲಿ 5 ರೂ. ಇಳಿಕೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಪ್ರಕಟಿಸಿದರು.  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾನ್ಯ ಬಸ್‍ಗಳ ಎರಡನೆ ಹಂತದಲ್ಲಿರುವ 12 ರೂ.ಗಳನ್ನು 10 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಆದರೆ 3,6,8ನೆ ಹಂತಗಳಲ್ಲಿ 1 ರೂ. ಹೆಚ್ಚಳ ಮಾಡಲಾಗಿದೆ. ವೋಲ್ವೋ ಬಸ್‍ಗಳಲ್ಲಿಯೂ ಕೆಲವು ಹಂತಗಳಲ್ಲಿ ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕøತ ದರವು ಏ.15ರಿಂದ ಜಾರಿಗೆ ಬರಲಿದೆ.

ಹವಾ ನಿಯಂತ್ರಿತ (ವೊಲ್ವೋ) ಬಸ್‍ಗಳ ಹಲವು ಸ್ಟೇಜ್‍ಗಳ ದರಗಳನ್ನು ಕೂಡ ಪರಿಷ್ಕರಿಸಲಾಗಿದ್ದು, ಹಲವಾರು ಹಂತಗಳಲ್ಲಿ 5 ರೂ. ಇಳಿಕೆ ಮಾಡಲಾಗಿದೆ. ಮೊದಲನೆ ಹಂತದಲ್ಲಿ 15 ರೂ. ನಿಂದ 10 ರೂ.ಗೆ, 35 ರಿಂದ 30 ರೂ.ಗೆ , 4ನೆ ಹಂತದಲ್ಲಿ 45 ರಿಂದ 40 ರೂ.ಗೆ , 14 ನೆ ಹಂತದಲ್ಲಿ 95 ರೂ. ನಿಂದ 90 ರೂ.ಗೆ ಇಳಿಕೆ ಮಾಡಲಾಗಿದೆ.  ವೋಲ್ವೋ ಬಸ್‍ಗಳಲ್ಲಿ ಶೇ.35ರಷ್ಟು ಪ್ರಯಾಣಿಕರಿಗೆ ಅನುಕೂಲವಾದರೆ ಸಾಮಾನ್ಯ ಬಸ್‍ಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಸಾಮಾನ್ಯ ಬಸ್‍ಗಳಲ್ಲಿ 2ನೆ ಹಂತದಲ್ಲಿ ಶೇ.30 ರಷ್ಟು ಪ್ರಯಾಣಿಕರು ಬಸ್‍ಗಳನ್ನು ಬಳಸುತ್ತಾರೆ. 3,6,8ನೆ ಹಂತಗಳಲ್ಲಿ ಶೇ.8ರಿಂದ 10 ರಷ್ಟು ಜನ ಪ್ರಯಾಣಿಸಬಹುದು.  ದರ ಇಳಿಕೆಯಿಂದ ಸಾಮಾನ್ಯ ಬಸ್‍ಗಳಲ್ಲಿ ಪ್ರತಿ ನಿತ್ಯ 1.50 ಲಕ್ಷ ಹಣ ಆದಾಯ ಕಡಿಮೆಯಾದರೆ ವೊಲ್ವೋ ಬಸ್‍ಗಳಿಂದಾಗಿ 3 ಲಕ್ಷ ರೂ. ಕಡಿಮೆಯಾಗಲಿದೆ.  ದರ ಇಳಿಕೆಯಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ನಿರೀಕ್ಷಿಸಲಾಗುತ್ತಿದ್ದು, ಲಾಭ-ನಷ್ಟ ಉಂಟಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಮಾನ್ಯ ಬಸ್‍ಗಳಲ್ಲಿ ಮೊದಲನೆ ಹಂತದ ಪ್ರಯಾಣ ದರ 5 ರೂ. ಯಥಾ ರೀತಿ ಮುಂದುವರೆಯಲಿದೆ. 3,6,8 ನೆ ಹಂತಗಳಲ್ಲಿ 1 ರೂ. ಹೆಚ್ಚಳವಾಗಿದ್ದು, ಉಳಿದ ಹಂತಗಳಲ್ಲಿ ಯಥಾ ಸ್ಥಿತಿ ಮುಂದುವರೆಯಲಿದೆ. ಹವಾ ನಿಯಂತ್ರಿತ ಬಸ್‍ಗಳಲ್ಲಿ 1,3,4 ಹಾಗೂ 14ನೆ ಹಂತಗಳಲ್ಲಿ ದರ ಇಳಿಕೆ ಮಾಡಲಾಗಿದೆ. ಆದರೆ 10, 13, 15, 22ನೆ ಹಂತಗಳಲ್ಲಿ 5 ರೂ. ನಷ್ಟು ಹೆಚ್ಚಳ ಮಾಡಲಾಗಿದೆ.

ಐಟಿ ಕಂಪೆನಿ, ಕೇಂದ್ರ ಸರ್ಕಾರದ ಸಂಸ್ಥೆಗಳು, ಶಾಲಾ- ಕಾಲೇಜುಗಳಿಗೆ ಖಾಯಂ ಗುತ್ತಿಗೆ ಆಧಾರದಲ್ಲಿ ಬಸ್‍ಗಳ ಸೇವೆ ಒದಗಿಸಲಾಗುತ್ತಿದ್ದು, ಆ ಬಸ್‍ಗಳಲ್ಲಿ ಜಿಪಿಎಸ್ , ಅಗ್ನಿಶಾಮಕ ವೇಗ ನಿಯಂತ್ರಕ , ಶಾಲಾ ಬಸ್‍ಗಳಲ್ಲಿ ಸಿಸಿ ಕ್ಯಾಮೆರಾ, ಕಂಪೆನಿ ಬಸ್‍ಗಳಲ್ಲಿ ವೈ-ಫೈ ಮತ್ತು ಮನರಂಜನಾ ಸೌಲಭ್ಯ ಒದಗಿಸಲಾಗಿದೆ. ಇದಲ್ಲದೆ ಬಸ್‍ಗಳ ವೇಳೆ ಒಳಗೊಂಡ ಮೊಬೈಲ್ ಆ್ಯಪ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುವುದು.
ಈ ಸಂದರ್ಭದಲ್ಲಿ ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್, ಉಪಾಧ್ಯಕ್ಷ ಗೋವಿಂದರಾಜು, ವ್ಯವಸ್ಥಾಪಕ ನಿರ್ದೇಶಕರಾದ ಏಕರೂಪ್ ಕೌರ್, ನಿರ್ದೇಶಕರಾದ ಬಿ.ಎ.ಮಹೇಶ್, ಬಿಸ್ವಜಿತ್ ಮಿಶ್ರಾ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin