ಬೆಂಗಳೂರಿಗರಿರೇ ನಿಮ್ಮ ಟೆನ್ಷನ್ ಕಡಿಮೆ ಮಾಡಲಿದೆ ಈ ಸಿಹಿಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

Bangalore--01

ಬೆಂಗಳೂರು, ಫೆ.6- ಬೆಂಗಳೂರು ನಾಗರಿಕರಿಗೊಂದು ಸಿಹಿ ಸುದ್ದಿ… ಇನ್ನು ಮುಂದೆ ಆಸ್ತಿಗಳ ಖಾತಾ ಮತ್ತು ಖಾತೆ ವರ್ಗಾವಣೆಗೆ ಕಚೇರಿಯಿಂದ ಕಚೇರಿಗೆ ಅಲೆಯಬೇಕಿಲ್ಲ. ಅಧಿಕಾರಿಗಳ ಕೈ ಬಿಸಿ ಮಾಡಬೇಕಿಲ್ಲ. ನಿಮ್ಮ ಬಳಿ ಸಮರ್ಪಕ ದಾಖಲೆ ಇದ್ದರೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಕಾಲ ಮಿತಿಯೊಳಗೆ ಖಾತಾ ಮತ್ತು ಖಾತಾ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾತಾ ಮತ್ತು ಖಾತಾ ವರ್ಗಾವಣೆಗೆ ಅರ್ಜಿ ಹಾಕಿದರೆ ಇದು ಸಿಗುವುದು ವಿಳಂಬ ಆಗುತ್ತಿತ್ತು. ಜತೆಗೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಈ ಕಳಂಕ ತೊಡೆದು ಹಾಕಲು ಬಿಬಿಎಂಪಿ ಇಂದಿನಿಂದ ಆನ್‍ಲೈನ್ ಖಾತಾ ವ್ಯವಸ್ಥೆ ಜಾರಿಗೆ ತಂದಿದೆ. ನಾಗರಿಕರು ಬೆಂಗಳೂರು ಒನ್‍ನಲ್ಲಿ ಮತ್ತು ಸಕಾಲ ಪೋರ್ಟಲ್‍ನಲ್ಲಿ ಸಮರ್ಪಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಕಾಲ ಮಿತಿಯೊಳಗೆ ಅವರವರ ಖಾತಾ ಅವರಿಗೆ ಸಿಗುತ್ತದೆ.

ಖಾತಾ ವರ್ಗಾವಣೆ ಬಯಸುವ ನಾಗರಿಕರು ತಮ್ಮ ಸೇಲ್ ಡೀಡ್, ಪ್ರಸಕ್ತ ವರ್ಷದ ತೆರಿಗೆ ಪಾವತಿ ರಶೀದಿ, ಫಾರಂ ನಂ.15ರೊಂದಿಗೆ ಸಕಾಲ ಹಾಗೂ ಬೆಂಗಳೂರು ಒನ್‍ನಲ್ಲಿ ಅರ್ಜಿ ಹಾಕಬೇಕು. ನಾಗರಿಕರ ಅರ್ಜಿ ದಾಖಲಾತಿಗಳನ್ನು ಬಿಬಿಎಂಪಿ ಕಂದಾಯಾಧಿಕಾರಿಗಳು ಆನ್‍ಲೈನ್ ವೆರಿಫೀಕೇಶನ್ ಮಾಡುತ್ತಾರೆ. ದಾಖಲಾತಿಗಳು ಸಮರ್ಪಕವಾಗಿದ್ದರೆ ಅಧಿಕಾರಿಗಳೇ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತಾರೆ. ಎಲ್ಲವೂ ಸಮರ್ಪಕವಾಗಿದ್ದರೆ ಖಾತಾ ವರ್ಗಾವಣೆಗೆ ಅನುಮತಿ ನೀಡುತ್ತಾರೆ. ಮತ್ತು ಅದಕ್ಕೆ ತಗಲುವ ವೆಚ್ಚವನ್ನು ಇಂತಿಷ್ಟು ಎಂದು ಸೂಚಿಸುತ್ತಾರೆ. ನಾಗರಿಕರು ಶುಲ್ಕ ಪಾವತಿಸಿದ ಕೂಡಲೇ ಖಾತೆನೂ ಬರುತ್ತೆ. ಹಾಗೂ ಖಾತಾ ಎಕ್ಸ್‍ಟ್ರ್ಯಾಕ್ಟ್ ಕೂಡಾ ಬರಲಿದೆ.

ಸಂಬಂಧಪಟ್ಟ ಮೇಲಧಿಕಾರಿಗಳ ಇ.ಸೈನ್ ಇರುವ ಖಾತಾಗಳನ್ನು ನಾಗರಿಕರು ಆನ್‍ಲೈನ್‍ನಲ್ಲೇ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಸರ್ಕಾರಿ ಸಂಸ್ಥೆಗಳು ಹಂಚಿಕೆ ಮಾಡಿರುವ ನಿವೇಶನಗಳು, ಗಿಫ್ಟ್ ಡೀಡಾ ಅಥವಾ ಕೋರ್ಟ್‍ನಿಂದ ಬಂದ ಡಿಕ್ರಿಗಳೇ ಎಂಬುದನ್ನು ಆನ್‍ಲೈನ್‍ನಲ್ಲೇ ನಾಗರಿಕರು ಸಲ್ಲಿಸಬೇಕಿದೆ. ದಾಖಲೆಗಳು ಸರಿಯಿಲ್ಲದಿದ್ದರೆ ಖಾತಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಅರ್ಜಿಗಳು ಸರಿಯಾಗಿದ್ದರೆ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಕೂಡಾ ಆನ್‍ಲೈನ್‍ನಲ್ಲೇ ಪರಿಶೀಲಿಸಬಹುದು. ಇದುವರೆಗೆ ಜನರಿಗೆ ತಲೆನೋವಾಗಿದ್ದ ಖಾತಾ ವರ್ಗಾವಣೆ ಆನ್‍ಲೈನ್ ವ್ಯಾಪ್ತಿಗೆ ಬಂದಿರುವುದು ನಿಜಕ್ಕೂ ಸಂತಸದ ವಿಚಾರ. ಆದರೆ ಇದು ಸಮರ್ಪಕವಾಗಿ ಜಾರಿಯಾಗುವುದೇ ಎಂಬುದು ಅನುಮಾನ.

Facebook Comments

Sri Raghav

Admin