ಬೆಂಗಳೂರಿಗರೇ ಇಲ್ಲಿ ಕೇಳಿ, ನಾಳೆಯಿಂದ ಹಸಿ-ಒಣ ಕಸ ವಿಂಗಡಿಸಿ ನೀಡದಿದ್ದರೆ ದಂಡ ಗ್ಯಾರಂಟಿ ..!

ಈ ಸುದ್ದಿಯನ್ನು ಶೇರ್ ಮಾಡಿ

BBMP-Bengaluru-Garbage

ಬೆಂಗಳೂರು, ಜ.31- ನಗರದ ನಾಗರಿಕರಿಗೆ ಶಾಕಿಂಗ್ ನ್ಯೂಸ್… ನಾಳೆಯಿಂದ ಕಸ ವಿಂಗಡಣೆ ಮಾಡಿ ಪೌರಕಾರ್ಮಿಕರಿಗೆ ನೀಡುವುದು ನಗರದ ಜನತೆಗೆ ಅನಿವಾರ್ಯವಾಗಿದೆ. ಒಂದು ವೇಳೆ ಹಸಿ ಹಾಗೂ ಒಣ ಕಸ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡದಿದ್ದರೆ 100ರೂ. ದಂಡ ವಿಧಿಸಲಾಗುವುದು ಎಂದು ಮೇಯರ್ ಜಿ.ಪದಮಾವತಿ ಎಚ್ಚರಿಸಿದ್ದಾರೆ. ಯಡಿಯೂರು ವಾರ್ಡ್ 167ರ ವ್ಯಾಪ್ತಿಯ ದ.ರಾ.ಬೇಂದ್ರೆ ವೃತದಲ್ಲಿ ನೂತನವಾಗಿ ನಿರ್ಮಿಸಿರುವ ದ.ರಾ.ಬೇಂದ್ರೆ ಗಗನ ಮಾರ್ಗ ಪಾದಚಾರಿ ಮೇಲುಸೇತುವೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ಕಸ ವಿಂಗಡಣೆ ಕಡ್ಡಾಯವಾಗಿದೆ. ಕಸ ವಿಂಗಡಣೆ ಮಾಡದವರಿಗೆ ದಂಡಪ್ರಯೋಗ ಅನಿವಾರ್ಯ ಎಂದು ತಿಳಿಸಿದರು.

ಬಿಬಿಎಂಪಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಸಿದ್ಧವಾಗಿದೆ. ಈಗಾಗಲೇ ಕಸ ವಿಂಗಡಣೆ ಮಾಡಿ ಕೊಡಬೇಕೆಂದು ನಗರದ ಜನತೆಗೆ ಸೂಚಿಸಲಾಗಿದೆ. ಕೆಲವೊಂದು ಭಾಗಗಳಲ್ಲಿ ನಾಗರಿಕರು ಹಸಿ ಹಾಗೂ ಒಣ ಕಸ ವಿಂಗಡಿಸಿಕೊಡುತ್ತಿದ್ದಾರೆ. ಆದರೆ, ಬಹಳಷ್ಟು ವಾರ್ಡ್‍ಗಳಲ್ಲಿ ಕಸ ವಿಂಗಡಣೆ ಆಗುತ್ತಿಲ್ಲ. ಹಾಗಾಗಿ ನಾಳೆಯಿಂದ ಕಸ ವಿಂಗಡಣೆ ಕಡ್ಡಾಯ ಮಾಡಲಾಗಿದೆ ಎಂದರು.
ಕಸ ವಿಂಗಡಣೆ ತಪ್ಪಿದರೆ ದಂಡ ಕಟ್ಟಿಟ್ಟ ಬುತ್ತಿ. ಕಸ ವಿಂಗಡಿಸದಿದ್ದರೆ 100ರೂ. ದಂಡ ವಿಧಿಸಲಾಗುತ್ತದೆ. ಒಂದು ವೇಳೆ ದಂಡ ಕಟ್ಟಿದವರು ನಾಲ್ಕನೇ ಬಾರಿಯೂ ಕಸ ವಿಂಗಡಿಸದಿದ್ದರೆ 500ರೂ. ದಂಡ ವಿಧಿಸಲಾಗುತ್ತದೆ. ಇದಕ್ಕೂ ಬಗ್ಗದಿದ್ದರೆ ಪ್ರಾಪರ್ಟಿ ಟ್ಯಾಕ್ಸ್‍ನಲ್ಲಿ ಬ್ಲಾಕ್ ಲೀಸ್ಟ್‍ಗೆ ಸೇರಿಸಲಾಗುತ್ತದೆ ಎಂದು ಪದ್ಮಾವತಿ ಎಚ್ಚರಿಸಿದ್ದಾರೆ.

ವಾರದಲ್ಲಿ ಎರಡು ದಿನ ಮಾತ್ರ ಒಣ ಕಸವನ್ನು ಸಂಗ್ರಹಿಸಲಾಗುತ್ತದೆ. ಪ್ರತಿನಿತ್ಯ ಹಸಿ ಕಸ ಪಡೆಯುವಂತೆ ಪೌರಕಾರ್ಮಿಕರಿಗೆ ಸೂಚಿಸಲಾಗಿದೆ. ನಗರದ ನಾಗರಿಕರು ಬಿಬಿಎಂಪಿಯೊಂದಿಗೆ ಸಹಕರಿಸಬೇಕಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin