ಬೆಂಗಳೂರಿಗರೇ ಈಗ ಸರಳವಾಗಿ ಆಸ್ತಿ ತೆರಿಗೆ ಪಾವತಿಸಿ
ಬೆಂಗಳೂರು, ಏ.25-ಆನ್ಲೈನ್ ಆಸ್ತಿ ತೆರಿಗೆ ಪದ್ಧತಿಯಲ್ಲಿದ್ದ ಶೇ.65ರಷ್ಟು ಲೋಪದೋಷಗಳನ್ನು ಈಗಾಗಲೇ ಸರಿಪಡಿಸಲಾಗಿದ್ದು, ಉಳಿದ ಕೆಲ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ಸಾರ್ವಜನಿಕರು ಸುಲಲಿತವಾಗಿ ತೆರಿಗೆ ಪಾವತಿಸಲು ಅನುಕೂಲ ವಾಗುವಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್ ಇಂದಿಲ್ಲಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 1-10-2016ರ ನಂತರ ಕಟ್ಟಡ ನಿರ್ಮಿಸಿರುವ ಮಾಲೀಕರು ಅರ್ಧ ವರ್ಷದ ತೆರಿಗೆ ಪಾವತಿಸಲು ಅವಕಾಶ ಇರಲಿಲ್ಲ. ಈಗ ಆನ್ಲೈನ್ನಲ್ಲಿ ಅದಕ್ಕೆ ಅವಕಾಶ ಮಾಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ ಆರ್ಥಿಕ ತೆರಿಗೆಯನ್ನು ಪಾವತಿಸುವವರನ್ನು ಮುಂದಿನ ವರ್ಷದ ತೆರಿಗೆಗೆ ಸರಿಹೊಂದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಇದೇ ರೀತಿ ಶೇ.60ರಷ್ಟು ಸಮಸ್ಯೆಯನ್ನು ನಾವು ಈಗಾಗಲೇ ಬಗೆಹರಿಸಿದ್ದೇವೆ. ಏಪ್ರಿಲ್ ತಿಂಗಳೊಳಗೆ ತೆರಿಗೆ ಪಾವತಿಸಿದ ತೆರಿಗೆದಾರರಿಗೆ ಶೇ.5ರಷ್ಟು ವಿನಾಯಿತಿ ನೀಡುವುದನ್ನು ಇನ್ನೂ ಮುಂದುವರೆಸಬೇಕೇ, ಬೇಡವೇ ಎಂಬುದನ್ನು ನಾಳೆ ನಡೆಯಲಿರುವ ಪಾಲಿಕೆ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.ಆನ್ಲೈನ್ ಮೂಲಕ ಸುಮಾರು 100 ಕೋಟಿ, ಚಲನ್ ಮೂಲಕ 150 ಕೋಟಿ ಸೇರಿದಂತೆ ಇದುವರೆಗೂ ಸುಮಾರು 250 ಕೋಟಿ ತೆರಿಗೆಯನ್ನು ವಸೂಲಾತಿ ಮಾಡಿದ್ದೇವೆ ಎಂದು ಹೇಳಿದರು.ಕೆಲವು ತೆರಿಗೆದಾರರಿಗೆ ಆನ್ಲೈನ್ ಮೂಲಕ ಯಾವ ರೀತಿ ತೆರಿಗೆ ಕಟ್ಟಬೇಕೆಂಬುದರ ಬಗ್ಗೆ ಅರಿವಿಲ್ಲ. ಹಾಗಾಗಿ ಅರಿವು ಮೂಡಿಸಲು ಮಾಧ್ಯಮಗಳಿಗೆ ಜಾಹೀರಾತು ನೀಡುವುದು ಸೇರಿದಂತೆ ಹಲವು ಮಾದರಿಯಲ್ಲಿ ಜಾಗೃತಿ ಮೂಡಿಸಲು ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ತೆರಿಗೆ ಪಾವತಿಸಲು ಬ್ಯಾಂಕ್ಗಳಿಗೆ ಹೋಗುವ ಗ್ರಾಹಕರಿಗೆ ಅಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಇದೆ.ಹಾಗಾಗಿ ಕೆನರಾ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದೇವೆ. ತಮ್ಮ ತಮ್ಮ ಬ್ಯಾಂಕ್ಗಳಲ್ಲಿ ಹೆಚ್ಚು ತೆರಿಗೆ ಕೌಂಟರ್ಗಳನ್ನು ತೆರೆಯಬೇಕು ಹಾಗೂ ತೆರಿಗೆ ಪಾವತಿದಾರರಿಗೆ ಬ್ಯಾಂಕ್ ಸಿಬ್ಬಂದಿ ಅಗತ್ಯ ನೆರವು ನೀಡಬೇಕೆಂದು ಕೂಡಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದು ಹೇಳಿದರು.ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಕೆಲವು ಬೃಹತ್ ಕಟ್ಟಡ ಮಾಲೀಕರು ತಪ್ಪು ಮಾಹಿತಿ ನೀಡಿದ್ದಾರೆ. ಆದ್ದರಿಂದ ಪಾಲಿಕೆ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಸಂಭವಿಸುತ್ತಿದೆ.
ಹೀಗೆ ತಪ್ಪು ಮಾಹಿತಿ ನೀಡಿರುವವರನ್ನು ಪತ್ತೆ ಹಚ್ಚಿ ಟೋಟಲ್ ಸ್ಟೇಷನ್ ಸರ್ವೆ ಆರಂಭಿಸುವ ಕುರಿತು ಈಗಾಗಲೇ ಎಂಟು ವಲಯಗಳ ಜಂಟಿ ಆಯುಕ್ತರೊಂದಿಗೆ ಚರ್ಚೆ ನಡೆಸಿದ್ದೇವೆ. ಯಾವ್ಯಾವ ಬೃಹತ್ ಕಟ್ಟಡಗಳನ್ನು ಟೋಟಲ್ ಸ್ಟೇಷನ್ ಸರ್ವೆಗೆ ಒಳಪಡಿಸಬೇಕೆಂಬುದನ್ನು ಅಂತಿಮಗೊಳಿಸಿ ಏ.30ರೊಳಗೆ ಕಾರ್ಯಾದೇಶ ಹೊರಡಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.ಒಟ್ಟಾರೆ ಆನ್ಲೈನ್ ತೆರಿಗೆ ಪಾವತಿಯಲ್ಲಿನ ಲೋಪದೋಷ ಸರಿಪಡಿಸುವುದು, ತಪ್ಪು ಮಾಹಿತಿ ನೀಡುವವರನ್ನು ಪತ್ತೆ ಹಚ್ಚುವ ಮೂಲಕ ಉದ್ದೇಶಿತ ತೆರಿಗೆ ಸಂಗ್ರಹ ಗುರಿ ಮುಟ್ಟುತ್ತೇವೆ ಎಂದು ಎಂ.ಕೆ.ಗುಣಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS