ಬೆಂಗಳೂರಿಗರೇ ಹುಷಾರ್..! ವ್ಯಾಪಕವಾಗಿ ಹರಡುತ್ತಿದೆ ಮಾರಕ ಎಚ್1ಎನ್1 ಸೋಂಕು

ಈ ಸುದ್ದಿಯನ್ನು ಶೇರ್ ಮಾಡಿ

Bengaluru-H1N1

ಬೆಂಗಳೂರು, ಫೆ.27-ಬೇಸಿಗೆ ಆರಂಭವಾಗುತ್ತಿದ್ದಂತೆ ಮಾರಣಾಂತಿಕ ರೋಗವಾದ ಎಚ್1ಎನ್1(ಹಂದಿಜ್ವರ) ಸಿಲಿಕಾನ್‍ಸಿಟಿಯಲ್ಲಿ ವ್ಯಾಪಕವಾಗಿ ಹರಡತೊಡಗಿದೆ.  ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ರೋಗಿಗಳಲ್ಲಿ ರೋಗ ದೃಢಪಟ್ಟಿರುವುದು ಕಂಡು ಬಂದಿದ್ದು, ಜನರು ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ಮಾಡುತ್ತಿದ್ದಾರೆ.
ಭೀಕರ ಬರದಿಂದಾಗಿ ಮಳೆ ಇಲ್ಲದೆ ಧೂಳಿನ ಪ್ರಮಾಣ ವಾತಾವರಣದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಇದು ಹಲವು ರೋಗಗಳಿಗೆ ಕಾರಣವಾಗುತ್ತಿದೆ. ಇದರ ಜೊತೆಗೆ ಎಚ್1ಎನ್1 ಸೋಂಕು ಕೂಡ ರೋಗಿಗಳಲ್ಲಿ ಕಂಡು ಬರುತ್ತಿರುವುದು ಆತಂಕವನ್ನು ಉಂಟು ಮಾಡಿದೆ.

ವಾಣಿವಿಲಾಸ ಮಕ್ಕಳ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಎಚ್1ಎನ್1 ಸೋಂಕಿರುವ ರೋಗಿಗಳು ಕಂಡುಬಂದಿದ್ದಾರೆ. ಕಡಿಮೆಯಾಗದ ಜ್ವರ, ಕೆಮ್ಮು, ನೆಗಡಿ, ತಲೆನೋವು, ಗಂಟಲಿನ ನೋವು ಈ ರೋಗದ ಲಕ್ಷಣವಾಗಿದೆ. ಈ ತರಹದ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಜೊತೆಗೆ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಂಡು ಸೂಕ್ತವಾದ ಔಷಧಿ ಸೇವನೆ ಮಾಡಬೇಕು ಎಂಬುದು ವೈದ್ಯರ ಸಲಹೆ.  ಎಚ್1ಎನ್1 ರೋಗದ ಬಗ್ಗೆ ಈಗ ಜನರು ಗಾಬರಿಯಾಗುವ ಅಗತ್ಯವಿಲ್ಲ. ರೋಗಕ್ಕೆ ಸೂಕ್ತ ಔಷಧಗಳು ಲಭ್ಯವಿದ್ದು, ಸಕಾಲದಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಅಲ್ಲದೆ, ಎಚ್1ಎನ್1 ರೋಗನಿರೋಧಕ ಲಸಿಕೆಗಳು ಈಗಾಗಲೇ ಲಭ್ಯವಿದ್ದು, ಆತಂಕಪಡುವ ಅಗತ್ಯವಿಲ್ಲ. ಆರೋಗ್ಯವಂತರೂ ಕೂಡ ಈ ಲಸಿಕೆಗಳನ್ನು ವರ್ಷಕ್ಕೊಮ್ಮೆ ಪಡೆಯುವ ಮೂಲಕ ರೋಗದಿಂದ ದೂರವಿರಬಹುದು. ಲಸಿಕÉ ತೆಗೆದುಕೊಂಡವರಿಗೂ ಒಂದು ವೇಳೆ ಸೋಂಕು ಹರಡಿದರೂ ಅದರ ಪರಿಣಾಮ ತೀವ್ರವಾಗಿರುವುದಿಲ್ಲ.

ವಾತಾವರಣದಲ್ಲಿ ಧೂಳು ಮಿಶ್ರಿತ ಹೊಗೆ ಹೆಚ್ಚಾಗಿರುವುದರಿಂದ ಶ್ವಾಸ ಸಂಬಂಧಿ ರೋಗಗಳು ಹೆಚ್ಚಾಗಿ ಜನರಲ್ಲಿ ಕಂಡು ಬರುವುದು ಸರ್ವೇ ಸಾಮಾನ್ಯವಾಗಿದೆ. ಅಂದರೆ ಕೆಮ್ಮು, ನೆಗಡಿ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ಜನರನ್ನು ಬಾಧಿಸಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin