ಬೆಂಗಳೂರಿಗಾಗಿ ಬಿಜೆಪಿ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ಏನೇನಿದೆ..?

ಈ ಸುದ್ದಿಯನ್ನು ಶೇರ್ ಮಾಡಿ

BKJP-Manifesto--01

ಬೆಂಗಳೂರು,ಮೇ8- ಬಡವರಿಗೆ ಉತ್ತಮ ಆರೋಗ್ಯ ನೀಡಲು 198 ವಾರ್ಡ್‍ಗಳಲ್ಲಿ ಮೋದಿ ಕೇರ್ ಆರಂಭ, ಆರೋಗ್ಯ ಕವಚ ಹೆಸರಿನಲ್ಲಿ ಐದು ಲಕ್ಷ ವಿಮೆ, ನಾಗರಿಕರ ರಕ್ಷಣೆಗೆ ರಾಣಿ ಚನ್ನಮ್ಮ ಪಡೆ, ಪ್ರಮುಖ ಜಂಕ್ಷನ್‍ಗಳಲ್ಲಿ ಮಹಿಳಾ ಅಧಿಕಾರಿಗಳ ನಿಯೋಜನೆ, 2ನೇ ಫೇಸ್ ಮೆಟ್ರೊ ರೈಲು ವಿಸ್ತರಣೆ, ಪ್ರತಿ ವಾರ್ಡ್‍ಗಳಲ್ಲಿ ಸಿಸಿ ಟಿವಿ ಅಳವಡಿಕೆ… ಇದು ಬೆಂಗಳೂರು ನಗರಕ್ಕೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಮುಖ್ಯಾಂಶಗಳು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸಿರುವ ಬಿಜೆಪಿ ಮಹಾನಗರಕ್ಕೆ ಹತ್ತು ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದೆ.
ಕೇಂದ್ರ ಸಚಿವರಾದ ಅನಂತಕುಮಾರ್, ಪ್ರಕಾಶ್ ಜಾವ್ಡೇಕರ್, ರಾಜೀವ್ ಚಂದ್ರ ಶೇಖರ್, ಆರ್.ಅಶೋಕ್ ಸೇರಿದಂತೆ ಮತ್ತಿತರರು ಇಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಬೆಂಗಳೂರು ಮಹಾನಗರದಲ್ಲಿರುವ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಆಯುಷ್ಮಾನ್ ಆರೋಗ್ಯ ಯೋಜನೆಯನ್ನು ಘೋಷಿಸಲಾಗಿದೆ. ಈ ಪ್ರಕಾರ 198 ವಾರ್ಡ್‍ಗಳಲ್ಲಿ ಮೋದಿ ಕೇರ್ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜನೌಷಧ ಮಳಿಗೆಗಳ ಸ್ಥಾಪನೆ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಐದು ಲಕ್ಷದವರೆಗೂ ಆರೋಗ್ಯ ವಿಮೆ ಒದಗಿಸುವ ಆಶ್ವಾಸನೆ ನೀಡಲಾಗಿದೆ.

ಕಾಂಗ್ರೆಸ್ ಆಡಳಿತದಲ್ಲಿ ಬೆಂಗಳೂರು 3ಜಿಗೆ ಸಿಲುಕಿ ನಲುಕಿದೆ. 3ಜಿ ಎಂದರೆ ಗೂಂಡಾ-ಗುಂಡಿ-ಗಾರ್ಬೇಜ್ ಆಗಿದೆ. ಅಲ್ಲದೆ ಬಿಲ್ಡರ್, ಕಾಂಟ್ರಾಕ್ಟರ್, ಲ್ಯಾಂಡ್ ಮಾಫಿಯಾದಿಂದ ಬೆಂಗಳೂರನ್ನು ಮುಕ್ತಗೊಳಿಸಿ ನಾಡಪ್ರಭು ಕೆಂಪೇಗೌಡರಂತೆ ಉದ್ಯಾನನಗರಿಯನ್ನು ಅಭಿವೃದ್ಧಿ ಮಾಡುವುದಾಗಿ ಹೇಳಿದೆ.
ಬಿಬಿಎಂಪಿಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಇಡೀ ನಗರವನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ. ನಾಡ ಪ್ರಭು ಕೆಂಪೇಗೌಡರ ಬೆಂಗಳೂರು ಅವಕಾಶವಾದಿ ರಾಜಕಾರಣಕ್ಕೆ ಸಾಕ್ಷಿಯಾಗಿವೆ. ಇದನ್ನು ಬದಲಾಯಿಸುವುದೇ ನಮ್ಮ ಪ್ರಮುಖ ಗುರಿ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ನವ ಬೆಂಗಳೂರು ನಿರ್ಮಾಣಕ್ಕೆ ನವ ಆಡಳಿತ, ಮೆಟ್ರೋಪಾಲಿಟಿನ್ ಕಾನೂನು ಜಾರಿಗೆ, ಬೆಂಗಳೂರು ಮೂಲಭೂತ ಸೌಕರ್ಯಗಳಿಗೆ ಒತ್ತು.ಸಾರ್ವಜನಿಕ ವ್ಯವಸ್ಥೆ ಜಾರಿ ಮಾಡುವ ಭರವಸೆ ನೀಡಲಾಗಿದೆ.  ಬೆಳೆಯತ್ತಿರುವ ಬೆಂಗಳೂರಿನಲ್ಲಿ ಸಂಚಾರಿ ಸಮಸ್ಯೆ ನಿವಾರಿಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ. 2001ರಲ್ಲಿ ಆಗಿನ ಎನ್‍ಡಿಎ ಸರ್ಕಾರ ಮೆಟ್ರೋ ರೈಲು ಯೋಜನೆ ಘೋಷಿಸಿತ್ತು. ಈಗ ಒಂದನೇ ಹಂತ ಮುಗಿದಿರುವುದರಿಂದ 2ನೇ ಹಂತದಲ್ಲಿ ಮಲ್ಟಿ ಕನೆಕ್ಟಿವಿಟಿ ಜಾರಿ ಮಾಡಲಾಗುವುದು.   ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ನೆಲಮಂಗಲದವರೆಗೂ ಮೆಟ್ರೋ ರೈಲು ವಿಸ್ತರಣೆ ಮಾಡಲಾಗುವುದು. ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕಾಲಮಿತಿಯೊಳಗೆ ಅನುಷ್ಠಾನ ಮಾಡುವ ವಾಗ್ದಾನ ನೀಡಲಾಗಿದೆ.

ರಾಣಿ ಚನ್ನಮ್ಮ ಪಡೆ:
ಕಳೆದ ಐದು ವರ್ಷಗಳ ಅವಧಿಯಲ್ಲಿ ಬೆಂಗಳೂರು ಮಹಾನಗರ ಕೊಲೆ, ಸುಲಿಗೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಿಂದ ನಗರದ ಮಾನ ಹರಾಜಾಗಿತ್ತು. ಇಲ್ಲಿನ ಪ್ರತಿಯೊಬ್ಬ ಮಹಿಳೆಯರಿಗೂ ರಕ್ಷಣೆ ನೀಡುವ ಉದ್ದೇಶದಿಂದ ರಾಣಿ ಚನ್ನಮ್ಮ ಪಡೆಯನ್ನು ಸ್ಥಾಪನೆ ಮಾಡಲಾಗುವುದು. ನಗರವನ್ನು ಅಪರಾಧದಿಂದ ಮುಕ್ತಗೊಳಿಸಲು ಪ್ರತಿಯೊಂದು ಪ್ರಮುಖ ಸ್ಥಳಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು.

Facebook Comments

Sri Raghav

Admin