ಬೆಂಗಳೂರಿಗಿನ್ನು ವಾರಕ್ಕೆರಡೇ ಬಾರಿ ನೀರು ಪೂರೈಕೆ..!

ಈ ಸುದ್ದಿಯನ್ನು ಶೇರ್ ಮಾಡಿ

Water-Tap

ಬೆಂಗಳೂರು, ಅ.3-ಜೀವನದಿ ಕಾವೇರಿ ಒಡಲು ಬರಿದಾಗುತ್ತಿದ್ದು, ನೀರಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡಿರುವ ಜಲಮಂಡಳಿ ಅಧಿಕಾರಿಗಳು ಇನ್ನು ವಾರಕ್ಕೆ ಎರಡು ದಿನ ಮಾತ್ರ ನಗರಕ್ಕೆ ಕಾವೇರಿ ನೀರು ಪೂರೈಸಲು ಚಿಂತನೆ ನಡೆಸಿದ್ದಾರೆ. ಒಂದೆಡೆ ಮಳೆಯ ಕೊರತೆ, ಇನ್ನೊಂದೆಡೆ ಸುಪ್ರೀಂಕೋರ್ಟ್ ಆದೇಶದಿಂದಾಗಿ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ ಸಾಕಷ್ಟು ತಗ್ಗಿದೆ. ಸದ್ಯ ಮಳೆಯಾಗುವ ನಿರೀಕ್ಷೆಯೂ ಕಡಿಮೆ ಇದ್ದು, ನೀರಿನ ಪೂರೈಕೆಯನ್ನು ಈಗಿನಿಂದಲೇ ನಿಯಂತ್ರಿಸಲು ಜಲಮಂಡಳಿ ನಿರ್ಧರಿದೆ.
ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡುವುದಾಗಿ ವಿಧಾನಮಂಡಲ ವಿಶೇಷ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಕೆಆರೆಸ್‍ನಲ್ಲಿ ಸರಾಸರಿ 25ರಿಂದ 30 ಟಿಎಂಸಿ ನೀರು ಸಂಗ್ರಹ ಇರುತ್ತಿತ್ತು. ಕಳೆದ ವರ್ಷ ಕೂಡ 21.68 ಟಿಎಂಸಿ ನೀರು ಸಂಗ್ರಹವಿತ್ತು. ಆದರೆ, ಈ ವರ್ಷ ಅ.1ರಂದು ಉಳಿದಿರುವ ನೀರಿನ ಸಂಗ್ರಹ 11.24 ಟಿಎಂಸಿ ಮಾತ್ರ.

ಇನ್ನು ರಾಜ್ಯದಲ್ಲಿ ಹಿಂಗಾರು ಮಳೆ ಬರದಿದ್ದರೆ ಮುಂದಿನ ಜೂನ್‍ವರೆಗೂ ಇದೇ ಸಂಗ್ರಹ ನೆಚ್ಚಿಕೊಂಡು ಇರಬೇಕಾಗುತ್ತದೆ. ಇದಕ್ಕಾಗಿ ವಾರಕ್ಕೆರಡು ದಿನ ನೀರು ಬಿಡುವ ನಿಲುವು ಕೈಗೊಳ್ಳಲು ಜಲಮಂಡಳಿ ನಿರ್ಧರಿಸಿದೆ. ಕೆಆರ್‍ಎಸ್‍ನಲ್ಲಿ ಹಾಲಿ ಇರುವ ನೀರು ಮೈಸೂರು, ಮಂಡ್ಯ ಮತ್ತು ಬೆಂಗಳೂರಿಗೆ ಪೂರೈಸಬೇಕಿದೆ. ಒಟ್ಟಾರೆ ನೀರಿನಲ್ಲಿ ಬೆಂಗಳೂರು ನಗರ ಒಂದಕ್ಕೆ ಪ್ರತಿ ತಿಂಗಳು 1.5 ಟಿಎಂಸಿ ನೀರು ಬೇಕು. ಅದರ ಪ್ರಕಾರವೇ ಅಂದಾಜು ಮುಂದಿನ ಜುಲೈವರೆಗೆ ಲೆಕ್ಕ ಹಾಕಿದರೂ 12 ರಿಂದ 13 ಟಿಎಂಸಿ ನೀರು ಬೆಂಗಳೂರು ಒಂದಕ್ಕೇ ಬೇಕಿದೆ. ಮೈಸೂರಿಗೆ 3 ಹಾಗೂ ಮಂಡ್ಯ, ರಾಮನಗರ ಮತ್ತು ಚಾಮರಾಜನಗರಗಳಿಗೆ 3 ಟಿಎಂಸಿ ನೀರು ಅಗತ್ಯವಿದೆ. ಪರಿಸ್ಥಿತಿ ಗಮನಿಸಿದರೆ ನೀರಿನ ಕೊರತೆ ಕಾಡುವ ಎಲ್ಲಾ ಲಕ್ಷಣಗಳೂ ಎದ್ದು ಕಾಣುತ್ತಿವೆ.
ಹಿಂದೊಮ್ಮೆ ಈ ರೀತಿ ಆಗಿತ್ತು!:

2010ರಲ್ಲಿ ಮಳೆ ಕೊರತೆಯುಂಟಾಗಿ ಕೆಆರ್‍ಎಸ್ ನೀರಿನ ಪ್ರಮಾಣ ಕುಸಿದಿದ್ದಾಗ ಬೆಂಗಳೂರಿನಲ್ಲಿ ಜಲಮಂಡಳಿ ವಾರದಲ್ಲಿ ಎರಡು ಬಾರಿ ಮಾತ್ರ ನೀರು ಪೂರೈಸುತ್ತಿತ್ತು. ಈಗ ಮತ್ತೆ ಅದೇ ರೀತಿಯ ಪರಿಸ್ಥಿತಿ ಎದುರಾಗುತ್ತಿದ್ದು, ವಾರದಲ್ಲಿ ಎರಡು ಬಾರಿ ಮಾತ್ರ ನೀರು ಪೂರೈಸುವ ಬಗ್ಗೆ ಚಿಂತನೆ ನಡೆಸಿದೆ. ಈ ಕುರಿತು ಅಧಿಕಾರಿಗಳು ಸಭೆ ನಡೆಸಿ ಚರ್ಚಿಸುತ್ತಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ. ನವೆಂಬರ್‍ನಿಂದ ಈ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಗಳಿವೆ.

ನಗರದ ಶೇ. 90% ಕೊಳವೆ ಬಾವಿ ನೀರು ಕುಡಿಯಲು ಯೋಗ್ಯವಲ್ಲ:

ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು 2 ಲಕ್ಷ ಕೊಳವೆ ಬಾವಿಗಳಿವೆ. ಅದರಲ್ಲಿ ಬಿಬಿಎಂಪಿಗೆ ಸೇರಿದ 12 ಸಾವಿರ ಹಾಗೂ ಜಲಮಂಡಳಿಯ 8 ಸಾವಿರ ಕೊಳವೆಬಾವಿಗಳಿದ್ದು, ಉಳಿದವು ಖಾಸಗಿಯವರಿಗೆ ಸೇರಿವೆ. ಇನ್ನು ಐಐಎಸ್‍ಸಿ ತಯಾರಿಸಿದ್ದ ವರದಿ ಪ್ರಕಾರ ಬೆಂಗಳೂರಿನಲ್ಲಿ ಶೇ.90 ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ತಿಳಿಸಲಾಗಿದೆ. ಕೆರೆಗಳ ಸ್ಥಿತಿಯಂತೂ ಕುಲಗೆಟ್ಟು ಹೋಗಿದೆ. ಸದ್ಯಕ್ಕಂತೂ ನಿರ್ಧಾರವಾಗಿಲ್ಲ:ಜಲಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಸದ್ಯಕ್ಕಂತೂ ಈ ನಿರ್ಧಾರ ಕೈಗೊಂಡಿಲ್ಲ. ನೀರಿನ ಕೊರತೆ ಇರುವುದರಿಂದ ಈ ರೀತಿ ಚಿಂತನೆಗಳು ನಡೆಯುತ್ತವೆ. ಸದ್ಯ ಎರಡು ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದೇವೆ. ಬದಲಾವಣೆ ಇದ್ದರೆ ಪ್ರಕಟಣೆ ಮೂಲಕ ತಿಳಿಸುತ್ತೇವೆ ಎಂದಿದ್ದಾರೆ.

Facebook Comments

Sri Raghav

Admin