ಬೆಂಗಳೂರಿನಲ್ಲಿ ಪ್ರತಿದಿನ ದಾಖಲಾಗುತ್ತಿವೆ 3 ಸೈಬರ್ ಅಪರಾಧ ಪ್ರಕರಣಗಳು

ಈ ಸುದ್ದಿಯನ್ನು ಶೇರ್ ಮಾಡಿ

Cyber-Crime

ಬೆಂಗಳೂರು, ಜೂ.14-ರಾಜ್ಯದಲ್ಲಿ ಪ್ರತಿದಿನ ಕನಿಷ್ಠ 4 ಸೈಬರ್ ಅಪರಾಧಗಳು ದಾಖಲಾಗುತ್ತಿದ್ದು, ಬೆಂಗಳೂರು ಒಂದರಲ್ಲೇ ಮೂರು ಪ್ರಕರಣಗಳು ವರದಿಯಾಗುತ್ತಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿನ ವಿಶೇಷ ಸೈಬರ್ ಅಪರಾಧ ಪೊಲೀಸ್ ಠಾಣೆಗಳಿಂದ ಲಭಿಸಿದ ಅಂಕಿ-ಅಂಶಗಳು ಈ ಮಾಹಿತಿ ನೀಡಿವೆ.
ಈ ವರ್ಷದ ಮೊದಲ ಐದು ತಿಂಗಳ ಅವಧಿಯಲ್ಲಿ (151 ದಿನಗಳು) ರಾಜ್ಯದಲ್ಲಿ 679 ಪ್ರಕರಣಗಳು ದಾಖಲಾಗಿವೆ, ಇವುಗಳಲ್ಲಿ 525 ಸೈಬರ್ ಅಪರಾಧಗಳು ಬೆಂಗಳೂರಿನಿಂದ ವರದಿಯಾಗಿವೆ ಎಂದು ಗೃಹ ಸಚಿವರ ಕಚೇರಿಯಿಂದ ಪಡೆದ ಮಾಹಿತಿಗಳು ಬಹಿರಂಗಗೊಳಿಸಿವೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ರಾಷ್ಟ್ರೀಯ ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲೇ ಮುಂದುವರಿದಿರುವುದು ಆತಂಕಕಾರಿ ಸಂಗತಿಯಾಗಿದೆ.

ಅಪರಾಧ ತನಿಖಾ ವಿಭಾಗ (ಸಿಐಡಿ) ಮತ್ತು ಇತರ ಪೊಲೀಸ್ ಠಾಣೆಗಳಲ್ಲಿಯೂ ಸೈಬರ್‍ಕ್ರೈಮ್‍ಗೆ ಸಂಬಂಧಪಟ್ಟ ಪ್ರಕರಣಗಳು ವರದಿಯಾಗುತ್ತಿವೆಯಾದರೂ ರಾಜ್ಯದ ಪೊಲೀಸರು, ವಿವಿಧ ವರ್ಗಗಳ ಅಪರಾಧಗಳ ದಸ್ತಾವೇಜುಗಳನ್ನು ನಿರ್ವಹಣೆ ಮಾಡಿಲ್ಲ. ಇಂಥ ಪ್ರಕರಣಗಳ ಬಗ್ಗೆ ತನಿಖೆ ನಡೆಸುವ ಅಧಿಕಾರಿಗಳು ಹೇಳುವಂತೆ ಸೈಬರ್‍ಕ್ರೈಮ್‍ಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯದ್ದು ನಕಲಿ ಉದ್ಯೋಗ ನೀಡಿಕೆಯ ವಂಚನೆ ಕೇಸ್‍ಗಳಾಗಿವೆ(ಶೇ.52). ಬಾಂಕ್‍ಗೆ ಸಂಬಂಧಪಟ್ಟ ವಂಚನೆಗಳು (ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಂಚನೆಗಳು), ಡೆಟಾ ಕಳವು ಹಾಗೂ ಆನ್‍ಲೈನ್ ಮೂಲಕ ಕಿರುಕುಳ ನಂತರದ ಸ್ಥಾನಗಳಲ್ಲಿವೆ.

ವಂಚಕರು ಇ-ಮೇಲ್ ಅಥವಾ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಉದ್ಯೋಗ ಜಾಹೀರಾತು ನೀಡಿ, ನಕಲಿ ಪತ್ರಗಳನ್ನು ಲಗತ್ತಿಸುತ್ತಾರೆ. ನಿರುದ್ಯೋಗಿ ಯುವಕ-ಯುವತಿಯರನ್ನು ವಂಚಿಸಲು ನಕಲಿ ವೆಬ್‍ಸೈಟ್‍ಗಳನ್ನು ಸೃಷ್ಟಿಸುತ್ತಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆರಂಭದಲ್ಲಿ ಸರಳ ಸಂದೇಶದ ಮೂಲಕ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಉತ್ತಮ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ನೀಡುವ ಈ ವಂಚಕರು ನಂತರ ನೋಂದಣಿ, ಅರ್ಜಿ ಪ್ರಕ್ರಿಯ ಶುಲ್ಕ ಇತ್ಯಾದಿ ಸೋಗಿನಲ್ಲಿ ಹಣ ಸುಲಿಗೆ ಮಾಡುತ್ತಾರೆ. ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ವಿದ್ಯಾವಂತರು ಮತ್ತು ಇಂಥ ವಂಚಕರ ಜಾಲದ ಬಗ್ಗೆ ಮಾಹಿತಿ ಇರುವವರೇ ಮೋಸ ಹೋಗುತ್ತಿರುವುದು ದುರುದೃಷ್ಟಕರ ಎಂದು ಹಿರಿಯ ಅಧಿಕಾರಿಯೊಬ್ಬರು ವಿಷಾದದಿಂದ ನುಡಿಯುತ್ತಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin