ಬೆಂಗಳೂರಿನ ಎಲ್ಲ ಅಂಗಡಿ, ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ..!

ಈ ಸುದ್ದಿಯನ್ನು ಶೇರ್ ಮಾಡಿ

Kannada--01

ಬೆಂಗಳೂರು, ಆ. 9- ನಗರದಲ್ಲಿರುವ ಎಲ್ಲ ಅಂಗಡಿ-ಮುಂಗಟ್ಟುಗಳ ನಾಮಫಲಕ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು. ಇನ್ನು 15-20 ದಿನದಲ್ಲಿ ನಾಮಫಲಕಗಳು ಕನ್ನಡಮಯವಾಗದಿದ್ದರೆ ಅಧಿಕಾರಿಗಳ ವಿರುದ್ಧ ದಂಡನೆ ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಕನ್ನಡ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಬೆಂಗಳೂರಿನಂತಹ ಕಾಸ್ಮೋಪಾಲಿಟನ್ ನಗರದಲ್ಲಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಒಟ್ಟಾಗಿ ಮನಸ್ಸು ಮಾಡಿದರೆಕನ್ನಡ ಅನುಷ್ಠಾನ ಸುಲಭವಾಗುತ್ತದೆ ಹಾಗೂ ಬೆಂಗಳೂರಿನಲ್ಲಿ ಕನ್ನಡವನ್ನು ಉಳಿಸಲು ಸಾಧ್ಯಎಂದರು. ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಂಗಡಿ- ಮುಂಗಟ್ಟುಗಳು ಕಡ್ಡಾಯವಾಗಿ ನಾಮಫಲಕವನ್ನು ಕನ್ನಡದಲ್ಲಿ ಪ್ರದರ್ಶಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಅದೇರೀತಿ ನಗರ ಜಿಲ್ಲೆಗೆ ಬರುವ ಪುರಸಭೆ ವ್ಯಾಪ್ತಿಯಲ್ಲಿನ ಅಂಗಡಿ ಮುಂಗಟ್ಟುಗಳ ನಾಮಫಲಕ ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕು.ಈ ಕೆಲಸ ಆಗದಿದ್ದರೆ ಪುರಸಭಾ ಅಧಿಕಾರಿಗಳ ವಿರುದ್ದದಂಡನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಅವರು ಹೇಳಿದರು.

ಕನ್ನಡದಲ್ಲಿ ನಾಮಫಲಕವನ್ನು ಹಾಕದ ಅಂಗಡಿಗಳ ಲೈಸೆನ್ಸ್‍ಗಳನ್ನು ರದ್ದು ಮಾಡಲು ಕಾನೂನಿನಲ್ಲಿ ಅವಕಾಶವಿದೆ.ಆ ರೀತಿಯ ಕ್ರಮ ಕೈಗೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸಲಹೆ ಮಾಡಿದರು. ಸರೋಜಿನಿ ಮಹಿಷಿ ವರದಿ ಪರಿಶೀಲನೆ: ಬೆಂಗಳೂರು ನಗರಜಿಲ್ಲಾ ವ್ಯಾಪ್ತಿಯ ಕೈಗಾರಿಕೆಗಳು, ಉದ್ಯಮಗಳಲ್ಲಿ ಕನ್ನಡಿಗರಿಗೆಉದ್ಯೋಗ ಸಿಕ್ಕಿದೆಯೇ ಎಂಬ ಬಗ್ಗೆ ಹಾಗೂ ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನವಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೈಗಾರಿಕೆಗಳಿಗೆ ಭೇಟಿ ನೀಡಿ ಎಷ್ಟು ಜನ ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆಯೂ ಅವರು ಕೈಗಾರಿಕೆ ಇಲಾಖೆ ಮುಖ್ಯಸ್ಥರಿಗೆ ಸಭೆಯಲ್ಲಿ ಸೂಚಿಸಿದರು.

ಅಸಮಾಧಾನ: ನಗರ ಜಿಲ್ಲಾಡಳಿತ ಕನ್ನಡ ಬಳಕೆಯಲ್ಲಿ ಮುಂದಿದೆ. ಜಿಲ್ಲಾ ದಂಡಾಧಿಕಾರಿಗಳು ನ್ಯಾಯಾಲಯದಲ್ಲಿತಮ್ಮ ತೀರ್ಪುಗಳನ್ನು ಕನ್ನಡದಲ್ಲಿ ನೀಡುತ್ತಿದ್ದಾರೆ. ಇದಕ್ಕೆ ಅವರನ್ನುಅಭಿನಂದಿಸುತ್ತೇನೆ ಎಂದ ಪ್ರೊಎಸ್.ಜಿ. ಸಿದ್ದರಾಮಯ್ಯ, ಜಿಲ್ಲಾಡಳಿತದ ವೆಬ್‍ಸೈಟ್‍ನಲ್ಲಿ ಕನ್ನಡ ಬಳಕೆಗೆ ದ್ವಿತೀಯ ಆದ್ಯತೆ ನೀಡಲಾಗಿದೆ.ಇಂಗ್ಲೀಷ್ ರಾರಾಜಿಸುತ್ತಿದೆ.ಈ ಲೋಪವನ್ನು ಸರಿಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರ ಸಲಹೆಯನ್ನು ಮಾನ್ಯ ಮಾಡಿದ ಜಿಲ್ಲಾಧಿಕಾರಿ ಶಂಕರ್, ಸದ್ಯದಲ್ಲಿಯೇ ವೆಬ್‍ಸೈಟ್‍ನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವುದಾಗಿ ಹೇಳಿ, ಜಿಲ್ಲಾಡಳಿತದಲ್ಲಿ ಸಂಪೂರ್ಣವಾಗಿ ಕನ್ನಡ ಅನುಷ್ಠಾನವಾಗಿದೆ. ಕೇಂದ್ರ ಸರ್ಕಾರಕ್ಕೆ ಬರೆಯುವ ಪತ್ರವನ್ನು ಹೊರತುಪಡಿಸಿ ಉಳಿದೆಲ್ಲಾ ಪತ್ರಗಳು, ಆಡಳಿತ ಕನ್ನಡದಲ್ಲೇ ನಡೆದಿದೆಎಂದು ಸಮಜಾಯಿಷಿ ನೀಡಿದರು.

ಡಿಡಿಪಿಐಗಳಿಗೆ ತರಾಟೆ:

ಕನ್ನಡ ಶಾಲೆಗಳ ಬಗ್ಗೆ ವರದಿ ನೀಡದ ಡಿಡಿಪಿಐಗಳನ್ನು ತರಾಟೆಗೆ ತೆಗೆದುಕೊಂಡು, ಮುಂದೆ ಇದೇ ಪುನರಾವರ್ತನೆಯಾದರೆ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು. ನಗರ ವ್ಯಾಪ್ತಿಯಲ್ಲಿ ಐಸಿಐಸಿ ಮತ್ತು ಸಿಬಿಎಸ್‍ಸಿ ಶಾಲೆಗಳಲ್ಲಿ ಕನ್ನಡವನ್ನುಒಂದು ಭಾಷೆಯಾಗಿ ಕಲಿಸುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡುಕನ್ನಡ ಕಲಿಸದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದರು. ಜಿಲ್ಲಾಧಿಕಾರಿ ವಿ.ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಕಾಂತರಾಜು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕವಿ ಸಿದ್ದಲಿಂಗಯ್ಯ, ಗಿರೀಶ್ ಪಟೇಲ್, ನರಸಿಂಹಮೂರ್ತಿ, ಮಹಂತೇಶ್ ಪಟೇಲ್, ಪ್ರಕಾಶ್‍ಜೈನ್, ಕಾರ್ಯದರ್ಶಿ ಮುರುಳೀಧರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin