ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಫೈರಿಂಗ್, ಬೆಚ್ಚಿಬಿದ್ದ ಬೆಂಗಳೂರು

ಈ ಸುದ್ದಿಯನ್ನು ಶೇರ್ ಮಾಡಿ

Firing--5

ಬೆಂಗಳೂರು, ಫೆ.3- ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಗುಂಡಿನ ಸದ್ದುಮೊಳಗಿ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ. ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿನ ಯಲಹಂಕ ಸಮೀಪದ ಕೋಗಿಲು ಕ್ರಾಸ್‍ನಲ್ಲಿ ಇಂದು ಮಧ್ಯಾಹ್ನ ಕಾರಿನಲ್ಲಿ ಸಿಗ್ನಲ್‍ಗೆ ಕಾಯುತ್ತಾ ಕುಳಿತಿದ್ದ ಎಪಿಎಂಸಿ ಅಧ್ಯಕ್ಷರೊಬ್ಬರ ಮೇಲೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಗುಂಡಿನ ದಾಳಿಯಿಂದ ಗಾಯಗೊಂಡಿದ್ದು, ಕೊಲಂಬಿಯಾಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು-ಬಳ್ಳಾರಿ ರಸ್ತೆ ಮೂಲಕ ಕಾರಿನಲ್ಲಿ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಅವರು, ಇಂದು ಮಧ್ಯಾಹ್ನ 11.45ರಲ್ಲಿ ಕೋಗಿಲು ಕ್ರಾಸ್ ಸಿಗ್ನಲ್‍ನಲ್ಲಿದ್ದರು.  ಈ ವೇಳೆ ಕಪ್ಪು ಪಲ್ಸರ್‍ಬೈಕ್‍ನಲ್ಲಿ ಕಪ್ಪು ಚರ್ಕಿನ್, ಹೆಲ್ಮೆಟ್ ಹಾಗೂ ಮುಖಕ್ಕೆ ಮುಸುಕು ಧರಿಸಿದ್ದ ಇಬ್ಬರು ಹಂತಕರು ಅಲ್ಲಿಗೆ ಬಂದು ಎಪಿಎಂಸಿ ಅಧ್ಯಕ್ಷರತ್ತ 7 ಸುತ್ತು ಗುಂಡು ಹಾರಿಸಿದ್ದಾರೆ. ಗುಂಡು ತಗುಲುತ್ತಿದ್ದಂತೆಯೇ ಚಾಲಕನಿಗೆ ಕಾರನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಶ್ರೀನಿವಾಸ್ ಸೂಚಿಸಿದ್ದಾರೆ.

ಗುಂಡು ಹಾರಿಸಿದ ದುಷ್ಕರ್ಮಿಗಳು ದೇವನಹಳ್ಳಿ ಕಡೆಗೆ ಪರಾರಿಯಾಗಿದ್ದು, ಸ್ವಲ್ಪ ದೂರದಲ್ಲಿ ಮುಖಕ್ಕೆ ಧರಿಸಿದ್ದ ಮುಸುಕನ್ನು ಬಿಸಾಡಿ ಹೋಗಿದ್ದಾರೆ. ಸಿಗ್ನಲ್‍ನಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಸ್ಥಳದಲ್ಲಿದ್ದ ಇತರೆ ವಾಹನ ಸವಾರರು ಹಾಗೂ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಸಿಗ್ನಲ್‍ನಲ್ಲಿ ಪೊಲೀಸರಿದ್ದರೂ ಏನಾಯಿತು, ಏನಾಗಿದೆ ಎಂಬುದು ಕೆಲ ಕ್ಷಣಗಳ ಕಾಲ ಅವರಿಗೂ ಅರಿವಿಗೆ ಬಂದಿಲ್ಲ.  ಈ ಸಿಗ್ನಲ್‍ನಲ್ಲಿ ಎರಡು ದಿನಗಳ ಹಿಂದಷ್ಟೇ ಸಿಸಿ ಟಿವಿಯನ್ನು ಅಳವಡಿಸಿದ್ದು, ಅದರ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ದುಷ್ಕರ್ಮಿಗಳು ದೇವನಹಳ್ಳಿ ಕಡೆಗೆ ಪರಾರಿಯಾಗಿರುವುದು ಗೊತ್ತಾಗಿದೆ.

Firring--3

ಗಾಯಗೊಂಡ ಶ್ರೀನಿವಾಸ್ ಅವರನ್ನು ಕೂಡಲೇ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಘಟನೆ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬಗೆರೆ ಶ್ರೀನಿವಾಸ್ ಈ ಹಿಂದೆ ರೌಡಿಶೀಟರ್ ಆಗಿದ್ದ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ರಿಯಲ್‍ಎಸ್ಟೇಟ್ ವ್ಯವಹಾರವನ್ನೂ ನಡೆಸುತ್ತಿರುವ ಶ್ರೀನಿವಾಸ್ ಪ್ರಸ್ತುತ ದಾಸನಪುರ ಎಪಿಎಂಸಿ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿದ್ದ ಈತ ಶಾಸಕ ವಿಶ್ವನಾಥ್ ಅವರ ಆಪ್ತನಾಗಿದ್ದರು. ನಂತರ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡು ಎಪಿಎಂಸಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿದ್ದಾರೆ. ಪಕ್ಷಾಂತರ ಹಾಗೂ ಚುನಾವಣೆ ಸಂದರ್ಭದಲ್ಲಿ ಜಗಳಗಳು ಆಗಿದ್ದವೂ ಎಂದು ತಿಳಿದು ಬಂದಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin