ಬೆಂಗಳೂರು ಉತ್ತರವನ್ನು ಬಿಟ್ಟುಕೊಟ್ಟ ಜೆಡಿಎಸ್, ಯಾರಾಗಲಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.25- ಅಳೆದೂ ತೂಗಿ ಜೆಡಿಎಸ್ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದ್ದು, ಈ ಕ್ಷೇತ್ರದಲ್ಲಿ ಎಸ್.ಪಿ.ಮುದ್ದಹನುಮೇಗೌಡ ಸೇರಿದಂತೆ ಹಲವಾರು ಕಾಂಗ್ರೆಸ್ ಪ್ರಮುಖರು ಅಭ್ಯರ್ಥಿಗಳಾಗಲು ಪ್ರಯತ್ನಿಸುತ್ತಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅಂತಿಮವಾಗಿ ತುಮಕೂರು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿಂದ ಸ್ಪರ್ಧಿಸಲು ಇಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ದೇವೇಗೌಡರ ಸ್ಪರ್ಧೆಗಾಗಿಯೇ ಜೆಡಿಎಸ್ ತುಮಕೂರು ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳನ್ನು ಕಾಯ್ದಿರಿಸಿಕೊಂಡಿತ್ತು.

ಕೊನೆಗೆ ತುಮಕೂರು ಕ್ಷೇತ್ರವನ್ನು ದೇವೇಗೌಡರು ಆಯ್ಕೆ ಮಾಡಿಕೊಂಡು ಬೆಂಗಳೂರು ಉತ್ತರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ದೋಸ್ತಿಗಳ ನಡುವೆ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್‍ಗೆ 21 ಹಾಗೂ ಜೆಡಿಎಸ್ 7 ಕ್ಷೇತ್ರಗಳು ದಕ್ಕಿದಂತಾಗಿದೆ. ಇಂದು ಬೆಳಗ್ಗೆ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಟ್ವೀಟ್ ಮಾಡಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದ್ದಕ್ಕಾಗಿ ದೇವೇಗೌಡರಿಗೆ ಧನ್ಯವಾದ ಹೇಳಿದರು.

ಎರಡು ಪಕ್ಷಗಳು ಸೇರಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಪ್ರಯತ್ನದಲ್ಲಿ ಕೈಜೋಡಿಸಿದೆ ಎಂದು ಟ್ವೀಟ್ ಮಾಡಿದ ವೇಣುಗೋಪಾಲ್ ಅವರು, ಕೆಲವು ನಿಮಿಷಗಳಲ್ಲಿ ತಮ್ಮ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ. ಆದರೂ ಬೆಂಗಳೂರು ಉತ್ತರ ಕ್ಷೇತ್ರ ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿರುವುದು ಖಚಿತವಾಗಿದೆ.

ಈ ದಿಢೀರ್ ಬೆಳವಣಿಗೆಯಿಂದಾಗಿ ಕಾಂಗ್ರೆಸ್‍ನಲ್ಲಿ ಸಂಚಲನ ಆರಂಭವಾಗಿದ್ದು, ಬೆಂಗಳೂರು ಉತ್ತರ ಕ್ಷೇತ್ರದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿರುಸಿನ ಚಟುವಟಿಕೆಗಳು ಶುರುವಾಗಿದೆ.

ತುಮಕೂರಿನ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಕಾಂಗ್ರೆಸ್‍ನ ಉಪಾಧ್ಯಕ್ಷ ಬಿ.ಎಲ್.ಶಂಕರ್, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ , ಮಾಜಿ ಸಂಸದ ಜಿ.ನಾರಾಯಣಸ್ವಾಮಿ ಮತ್ತಿತರರು ಈ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಅಭ್ಯರ್ಥಿಗಳ ಕೊರತೆ ಇದ್ದುದರಿಂದ ಜೆಡಿಎಸ್ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದೆ. ಇದೇ ರೀತಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೂ ಜೆಡಿಎಸ್ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿತ್ತು. ಅಂತಿಮ ಕ್ಷಣದಲ್ಲಿ ಅಲ್ಲಿಂದ ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಅವರನ್ನು ಮಿತ್ರಪಕ್ಷಗಳ ಜಂಟಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ.

ಇದೇ ಮಾದರಿಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದಲೂ ಬಿ.ಎಲ್.ಶಂಕರ್ ಅವರನ್ನು ಜಂಟಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ದೇವೇಗೌಡರು ಸಲಹೆ ನೀಡಿದ್ದಾರೆ. ಈ ಮಧ್ಯೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ತುಮಕೂರು ಕ್ಷೇತ್ರದಲ್ಲಿ ಟಿಕೆಟ್ ವಂಚಿತರಾಗಿರುವ ಮುದ್ದಹನುಮೇಗೌಡರನ್ನು ಸಮಾಧಾನ ಪಡಿಸಲು ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸಲು ಮುಂದಾಗಿದ್ದಾರೆ.

ಮುದ್ದಹನುಮೇಗೌಡರು ಈಗಾಗಲೇ ತುಮಕೂರು ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ಅವರನ್ನು ಸಮಾಧಾನಪಡಿಸಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಅಭ್ಯರ್ಥಿ ಮಾಡುವ ಚರ್ಚೆಗಳು ನಡೆದಿವೆ.

ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಮುದ್ದಹನುಮೇಗೌಡರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ವಿಶ್ವಾಸದ ಮಾತುಗಳನ್ನು ಆಪ್ತವಲಯದಲ್ಲಿ ಆಡಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಪೈಕಿ 5ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇಬ್ಬರು ಜೆಡಿಎಸ್ ಶಾಸಕರಿದ್ದು, ಬಿಜೆಪಿ ಒಂದರಲ್ಲಿದೆ. ಹೀಗಾಗಿ ಮುದ್ದಹನುಮೇಗೌಡರಿಗೆ ತುಮಕೂರಿಗಿಂತಲೂ ಬೆಂಗಳೂರು ಉತ್ತರ ಸುರಕ್ಷಿತ ವಲಯ ಎಂದು ಹೇಳಲಾಗುತ್ತಿದೆ.

ಆದರೆ, ಸುದೀರ್ಘ ರಾಜಕೀಯ ಜೀವನವನ್ನು ತುಮಕೂರಿನಲ್ಲಿ ಕಳೆದ ಮುದ್ದಹನುಮೇಗೌಡರು ಈಗ ಏಕಾಏಕಿ ಬೆಂಗಳೂರಿನತ್ತ ಮುಖ ಮಾಡಲು ಒಪ್ಪುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

ಪರಮೇಶ್ವರ್ ಅವರ ಆಪ್ತರಾಗಿರುವ ರಾಜೀವ್ ಚಂದ್ರಶೇಖರ್ ಕೂಡ ಬೆಂಗಳೂರು ಉತ್ತರ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಬಿ.ಎಲ್.ಶಂಕರ್ ಅವರನ್ನು ಮಿತ್ರಪಕ್ಷಗಳ ಜಂಟಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ದೇವೇಗೌಡರು ಒಲವು ತೋರಿದ್ದಾರೆ ಎಂದು ಹೇಳಲಾಗಿದೆ.

ಕಳೆದ ಬಾರಿ ಡಿ.ವಿ.ಸದಾನಂದಗೌಡರ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಸಂಸದ ಜಿ.ನಾರಾಯಣಸ್ವಾಮಿ ಅವರು ಕ್ಷೇತ್ರ ಹಂಚಿಕೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರ ಕಾಂಗ್ರೆಸ್ ಕೈ ತಪ್ಪಿದಾಗ ಮತ್ತೆ ಸ್ಪರ್ಧಿಸುವ ಆಸೆ ಕೈ ಬಿಟ್ಟಿದ್ದರು.

ಆದರೆ, ಆಚಾನಕ್ ಬೆಳವಣಿಗೆಯಲ್ಲಿ ಕ್ಷೇತ್ರ ಮತ್ತೆ ಕಾಂಗ್ರೆಸ್ ಪಾಲಿಗೆ ದಕ್ಕಿರುವುದರಿಂದ ನಾರಾಯಣಸ್ವಾಮಿ ಕೂಡ ಹಿರಿಯ ನಾಯಕರನ್ನು ಸಂಪರ್ಕಿಸಿ ಟಿಕೆಟ್ ಪಡೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಅಂತಿಮವಾಗಿ ಬೆಂಗಳೂರು ಉತ್ತರ ಕ್ಷೇತ್ರ ಕಾಂಗ್ರೆಸ್‍ನ ಯಾರ ಪಾಲಾಗಲಿದೆ ಎಂಬುದು ಇಂದು ಸಂಜೆಯೊಳಗಾಗಿ ನಿರ್ಧಾರವಾಗಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin