ಬೆಂಗಳೂರು ಉತ್ತರ ತಾಲೂಕಿನಲ್ಲಿ ಭಾರೀ ಗೋಲ್‍ಮಾಲ್ : ಗ್ರಾ.ಪಂ. ಅಧ್ಯಕ್ಷ ಪಿಡಿಒ ಮತ್ತು ಸಿಬ್ಬಂಧಿ ವಿರುದ್ಧ ಕ್ರಿಮಿನಲ್ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

HK-Paltil

ಬೆಂಗಳೂರು, ಡಿ.8– ಬೆಂಗಳೂರು ಉತ್ತರ ತಾಲೂಕಿನ ಅರಕೆರೆ, ಮುದ್ದಚಿಕ್ಕನಹಳ್ಳಿ, ಮೂಡಯ್ಯನಹಳ್ಳಿ, ಬಾಗಲೂರು ಮತ್ತು ಹೆಸರಘಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಸ್ವತ್ತು ಗ್ರಾಮಸಭೆ ಮೂಲಕ ಅವ್ಯವಹಾರ ನಡೆಸಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ನಿಯಮಾವಳಿಗಳನ್ನು ಪಾಲಿಸದೆ ನಮೂನೆ-9 ಮತ್ತು ನಮೂನೆ-11 ಬಿ ಅಡಿಯಲ್ಲಿ ನಡೆಸಿರುವ ದಾಖಲಾತಿಗಳ ವ್ಯವಹಾರದ ಬಗ್ಗೆ ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ಆರ್.ಬಿ.ಅಗವಾನೆ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಬಗ್ಗೆ ಆ ಸಮಿತಿಯು ವರದಿ ನೀಡಿದ್ದು, ನಿಯಮ ಬಾಹಿರವಾಗಿ ಅವ್ಯವಹಾರ ನಡೆಸಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಶಾಮಾಚಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಶಂಕರ್, ಕಾರ್ಯದರ್ಶಿ ಎಸ್.ವಿ.ವೆಂಕಟರಂಗ, ಡಾಟಾ ಎಂಟ್ರಿ ಆಪರೇಟರ್ ಎಂ.ಎನ್.ಪ್ರವೀಣ್, ಹುರುಳಿ ಚಿಕ್ಕನಹಳ್ಳಿ ಗ್ರಾಪಂ ಅಧ್ಯಕ್ಷೆ ಬಿ.ಮಹಾಲಕ್ಷ್ಮಿ, ಪಿಡಿಒ ಕೋಮಲಾ, ಕಾರ್ಯದರ್ಶಿ ಗಿರಿಯಪ್ಪ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದರು.
ನಾರೇನಹಳ್ಳಿ ಗ್ರಾಪಂ ಅಧ್ಯಕ್ಷೆ ಶೋಭಾ, ಕಾರ್ಯದರ್ಶಿ ರಾಜಶಂಕರ್, ಬಾಗಲೂರು ಗ್ರಾಪಂ ಅಧ್ಯಕ್ಷ ಸುಬ್ಬಯ್ಯ, ಕಾರ್ಯದರ್ಶಿ ನರೇಂದ್ರಬಾಬು, ಹೆಸರುಘಟ್ಟ ಗ್ರಾಪಂ ಅಧ್ಯಕ್ಷ ಎಸ್.ನಾರಾಯಣ್, ಪಿಡಿಒ ಎಚ್.ಎಸ್.ಗಿರೀಶ್, ಕಾರ್ಯದರ್ಶಿ ಗಿರಿಯಪ್ಪ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಕ್ರಮ ಕೈಗೊಳ್ಳಲಾಗಿದೆ. ಅವ್ಯವಹಾರದಲ್ಲಿ ಭಾಗಿಯಾದ ಸಿಬ್ಬಂದಿ, ಅಧಿಕಾರಿಗಳನ್ನು ಅಮಾನತಿನಲ್ಲಿಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ ಸ್ವತ್ತಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಿತಿ ವರದಿ ನೀಡಿದ್ದು, ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ವರದಿಯಲ್ಲಿ ಪ್ರಸ್ತಾಪಿಸಿರುವ ಗ್ರಾಪಂ ವ್ಯಾಪ್ತಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ 11ಬಿ ಖಾತೆ ಹೊರಡಿಸುವುದನ್ನು ತಡೆಹಿಡಿಯಲಾಗಿದೆ. ಪ್ರಕರಣದ ಕುರಿತು ವಿಚಾರಣೆ ನಡೆಸಲು ಕೋಲಾರ ಸಿಇಒ ಬಿ.ಬಿ.ಕಾವೇರಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಎ.ಕೆ.ಚಿಟಗುಪ್ಪಿ ಅವರನ್ನು ನೇಮಕ ಮಾಡಲಾಗಿದೆ.
ಲ್ಯಾಂಡ್ ಡೆವಲಪರ್ಸ್ ಮತ್ತು ಉಪನೋಂದಣಾಧಿಕಾರಿಗಳು ಶಾಮೀಲಾಗಿ ನೋಂದಣಿ ಮಾಡುವ ಮೂಲಕ ಖರೀದಿದಾರರನ್ನು ವಂಚಿಸಿರುವುದರಿಂದ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin