ಬೆಂಗಳೂರು ಜನರನ್ನು ಸುಲಿಗೆ ಮಾಡಲು ಹೊರಟ ಬಿಬಿಎಂಪಿ ಮತ್ತು ರಾಜ್ಯಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Padmanabhareddy--01

ಬೆಂಗಳೂರು, ನ.24-ಹಾಲಿ ಇರುವ ಆಸ್ತಿ ತೆರಿಗೆ ಮೇಲೆ ಶೇ.15ರಷ್ಟು ಘನತ್ಯಾಜ್ಯ ನಿರ್ವಹಣಾ ಕರವನ್ನು ವಿಧಿಸಲು ಮುಂದಾಗುವ ಮೂಲಕ ನಗರದ ನಾಗರಿಕರಿಗೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಸುಲಿಗೆ ಭಾಗ್ಯ ಕರುಣಿಸಲು ಸಿದ್ಧವಾಗಿವೆ. ಬಿಬಿಎಂಪಿಯ ಸುಲಿಗೆ ಭಾಗ್ಯ ಕೇವಲ ನಾಗರಿಕರಿಗೆ ಮಾತ್ರ ಹೊರೆಯಾಗುವುದಿಲ್ಲ. ಇದರ ಪರಿಣಾಮ ಘಟಾನುಘಟಿ ರಾಜ ಕಾರಣಿಗಳು, ಖ್ಯಾತ ಚಿತ್ರನಟರು, ಮಾಧ್ಯಮ ಕ್ಷೇತ್ರದ ಮುಖ್ಯಸ್ಥರಿಗೂ ತಟ್ಟಲಿದೆ. ಸರ್ಕಾರ ಮತ್ತು ಬಿಬಿಎಂಪಿಯ ಈ ಸುಲಿಗೆ ಭಾಗ್ಯದ ಸಂಪೂರ್ಣ ವಿವರವನ್ನಿಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅಂಕಿಅಂಶಗಳ ಸಹಿತ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಗೊಳಿಸಿದರು. ಕೆಲ ವ್ಯಕ್ತಿಗಳು ಕಸದ ತೆರಿಗೆಯನ್ನು ಸುಮಾರು 200 ಪಟ್ಟು ಹೆಚ್ಚು ಕಟ್ಟುವ ಪರಿಸ್ಥಿತಿ ಉದ್ಭವವಾಗಿದೆ.

ಉದಾಹರಣೆಗೆ: ಖ್ಯಾತ ಚಿತ್ರನಟ ಪುನೀತ್‍ರಾಜ್‍ಕುಮಾರ್ ಅವರು ಕಸದ ತೆರಿಗೆಯನ್ನು ಕೇವಲ 600 ರೂ. ಕಟ್ಟುತ್ತಿದ್ದರು. ಹೊಸ ಘನ ತ್ಯಾಜ್ಯ ಉಪ ಕರ ಪ್ರಕಾರ ಇನ್ನು ಮುಂದೆ ಅವರು 6537 ರೂ. ಕಟ್ಟಬೇಕು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇದುವರೆಗೂ 1200 ರೂ. ಕಟ್ಟುತ್ತಿದ್ದಾರೆ. ಅವರು ಇನ್ನು ಮುಂದೆ 7523 ರೂ. ಕಟ್ಟಬೇಕಾಗುತ್ತದೆ. ಸಂಸದ ಮಲ್ಲಿಕಾರ್ಜುನ ಖರ್ಗೆ 800 ರೂ. ಕಟ್ಟಿದರೆ ಇನ್ನು ಮುಂದೆ 5414 ರೂ. ಕಟ್ಟಬೇಕಾಗುತ್ತದೆ. ಅದೇ ರೀತಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ 1800 ರೂ. ಕಸದ ತೆರಿಗೆ ಕಟ್ಟುತ್ತಿದ್ದಾರೆ. ಇನ್ನು ಮುಂದೆ 12029 ರೂ. ಕಟ್ಟಬೇಕು. ಇದು ವಸತಿಗೆ ಮಾತ್ರ. ವಸತಿಯೇತರ ಘನತ್ಯಾಜ್ಯ ಉಪಕರ ನಾಗರಿಕರನ್ನು ನಿದ್ದೆಯಲ್ಲೂ ಬೆವರುವಂತೆ ಮಾಡುತ್ತದೆ ಎಂದು ಹೇಳಿದರು.

ರಾಘವರೆಡ್ಡಿ ಎಂಬುವರು 2400 ರೂ. ಕಟ್ಟುತ್ತಿದ್ದು, ಇನ್ನು ಮುಂದೆ 4,52,000 ರೂ. ಕಟ್ಟಬೇಕಾಗುತ್ತದೆ. ಸಂಯುಕ್ತ ಕರ್ನಾಟಕ ಪತ್ರಿಕೆ ಇರುವ ಕಟ್ಟಡ ಮಾಲೀಕರು 2,400 ರೂ. ಕಟ್ಟುತ್ತಿದ್ದು, ಅವರು ಇನ್ನು ಮುಂದೆ 1,47,893 ರೂ. ಕಟ್ಟಬೇಕಾಗುತ್ತದೆ. ಪ್ರಜಾವಾಣಿಯ ಹರಿಕುಮಾರ್ 2400 ರೂ. ಕಟ್ಟುತ್ತಿದ್ದು, ಇನ್ನು ಮುಂದೆ 89 ಸಾವಿರ ರೂ. ಕಟ್ಟಬೇಕಾಗುತ್ತದೆ. ಈ ಸಂಜೆ ಕಟ್ಟಡದ ಮಾಲೀಕರು 2,400 ರೂ. ಕಟ್ಟುತ್ತಿದ್ದು, ಇನ್ನು ಮುಂದೆ ಅವರು 34,044 ರೂ. ಕಟ್ಟಬೇಕಾಗುತ್ತದೆ.  ಹೊಟೇಲ್‍ಗಳು, ಆಸ್ಪತ್ರೆಗಳವರು ಕೂಡ 200 ಪಟ್ಟು ಹೆಚ್ಚು ಉಪಕರವನ್ನು ಕಟ್ಟಬೇಕು. ಇದರಲ್ಲಿ ಅಶೋಕ ಹೊಟೇಲ್‍ನವರು 3,600 ರೂ. ಕಟ್ಟುತ್ತಿದ್ದು, ಇನ್ನು ಮುಂದೆ 7 ಲಕ್ಷಕ್ಕೂ ಹೆಚ್ಚು ಉಪಕರ ಕಟ್ಟಬೇಕಾಗುತ್ತದೆ. ಅದೇ ರೀತಿ ಅಭಿಮಾನಿ ವಸತಿ ಹೊಟೇಲ್‍ನವರಿಗೂ ಮನಸೋ ಇಚ್ಛೆ ಘನ ತ್ಯಾಜ್ಯ ಉಪಕರ ವಿಧಿಸಲಾಗಿದೆ. ಆಸ್ಪತ್ರೆಗಳು, ಶಾಲಾ-ಕಾಲೇಜುಗಳು, ಕೈಗಾರಿಕೆಗಳಿಗೂ ಕೂಡ ಮನಬಂದಂತೆ ಉಪಕರ ಹಾಕಲಾಗಿದೆ.

ಭಾಗ್ಯಗಳ ಸರದಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುಲಿಗೆ ಭಾಗ್ಯ ಇದು ಎಂದು ಪದ್ಮನಾಭರೆಡ್ಡಿ ಲೇವಡಿ ಮಾಡಿದರು.
ಈ ಹಿಂದೆ ಆಸ್ತಿ ತೆರಿಗೆ ದರವನ್ನು ವಸತಿಗೆ ಶೇ.20ರಷ್ಟು ಹಾಗೂ ವಸತಿಯೇತರ ಶೇ.25ರಷ್ಟು ಹೆಚ್ಚಳ ಮಾಡಿ ಶಾಕ್ ನೀಡಲಾಗಿತ್ತು. ವೆಂಕಯ್ಯನಾಯ್ಡು ಅವರು ಕೇಂದ್ರ ಸಚಿವರಾಗಿದ್ದಾಗ ರಾಜಸ್ಥಾನ ಮಾದರಿ ಉಪಕರ ಹಾಕುವಂತೆ ಪತ್ರ ಬರೆದಿದ್ದರು. ಈಗ ಅದನ್ನೇ ಬಿಬಿಎಂಪಿ ಮಾನದಂಡವನ್ನಾಗಿಟ್ಟುಕೊಂಡು ಉಪಕರ ಹಾಕಿ ನಾಗರಿಕರನ್ನು ಸುಲಿಗೆ ಮಾಡಲು ಹೊರಟಿದೆ ಎಂದು ರೆಡ್ಡಿ ದೂರಿದರು. ಕಸ ವಿಲೇವಾರಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಡಿಸಿ ಬಿಲ್ ಮೂಲಕ ಕೋಟ್ಯಂತರ ಹಣ ಲೂಟಿಯಾಗುತ್ತಿದೆ. ಇದಲ್ಲದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾವೇರಿ ನೀರಿನ ದರ, ವಿದ್ಯುತ್ ಶುಲ್ಕ, ಕೊಳವೆಬಾವಿ ಶುಲ್ಕ, ಪ್ರೊರೇಟ ಶುಲ್ಕ, ಆಸ್ತಿಗಳ ಮಾರ್ಗಸೂಚಿ ದರ, ಬಸ್ ದರ ಮತ್ತಿತರ ತೆರಿಗೆಗಳಲ್ಲೂ ಕೂಡ ಹೆಚ್ಚಳ ಮಾಡಲಾಗಿದೆ. ಇವುಗಳನ್ನೇ ಜನರಿಗೆ ತಡೆಯಲಾಗುತ್ತಿಲ್ಲ ಎಂದು ಹೇಳಿದರು.
ಬಿಬಿಎಂಪಿಯಲ್ಲಿ ಜಾಹೀರಾತು ಮಾಫಿಯಾ, ಒಎಫ್‍ಸಿ ಮಾಫಿಯಾ ಕೂಡ ತಲೆ ಎತ್ತಿದೆ. ಇವರಿಂದ ಸಾವಿರಾರು ಕೋಟಿ ವಸೂಲಿ ಮಾಡಬೇಕು. ಇಂತಹ ಸೋರಿಕೆಯನ್ನೆಲ್ಲ ಬಿಟ್ಟು ಆಸ್ತಿ ಮಾಲೀಕರ ಮೇಲೆ ಶೇ.15ರಷ್ಟು ಘನತ್ಯಾಜ್ಯ ಉಪಕರ ವಿಧಿಸಲು ಮುಂದಾಗಿರುವುದು ಖಂಡನೀಯ ಎಂದರು. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ 10,301 ಕೋಟಿ ರೂ. ಅನುದಾನವನ್ನು ಪಾಲಿಕೆಗೆ ನೀಡುವುದಾಗಿ ಘೋಷಿಸಿದ್ದರು. ಆದರೆ 7300 ಕೋಟಿ ರೂ. ಗಳ ಕಾಮಗಾರಿಗೆ ಕ್ರಿಯಾಯೋಜನೆ ರೂಪಿಸಲಾಯಿತು. ಆದರೆ ಇದುವರೆಗೆ 2129 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ ಎಂದು ಹೇಳಿದರು. ಪಾರದರ್ಶಕ ಆಡಳಿತ ಎಂಬ ಮಂತ್ರ ಜಪಿಸಿದ ಕಾಂಗ್ರೆಸ್ ಸರ್ಕಾರ ನಗರದ ನಾಗರಿಕರ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದು ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಮಾಸಿಕ ಸಭೆಯಲ್ಲಿ ವೈಜ್ಞಾನಿಕ ಘನತ್ಯಾಜ್ಯ ಉಪಕರ ವಿಧಿಸುವ ನಿರ್ಣಯಕ್ಕೆ ಅನುಮೋದನೆ ಪಡೆಯಲು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷ ಮುಂದಾಗಿವೆ. ಈ ರೀತಿ ನಾಗರಿಕರಿಗೆ ಗದಾಪ್ರಹಾರವಾಗಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು. ಉಪಕರ ವಿಧಿಸುವುದರಿಂದ ಹಿಂದೆ ಸರಿಯದಿದ್ದರೆ ಕೌನ್ಸಿಲ್ ಸಭೆ ಹಾಗೂ ಹೊರಗಡೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಪದ್ಮನಾಭರೆಡ್ಡಿ ಎಚ್ಚರಿಸಿದರು.

Facebook Comments

Sri Raghav

Admin