ಬೆಂಗಳೂರು ಪ್ರೆಸ್‍ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಧಾನ, ಪ್ರಕಾಶ್‍ರೈ ವರ್ಷದ ವ್ಯಕ್ತಿ

ಈ ಸುದ್ದಿಯನ್ನು ಶೇರ್ ಮಾಡಿ
Press-Club--01
ಪ್ರೆಸ್‍ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಈ ಸಂಜೆ ಪತ್ರಿಕೆಯ ಹಿರಿಯ ವರದಿಗಾರ ವಿ.ರಾಮಸ್ವಾಮಿ ಕಣ್ವ ಅವರಿಗೆ ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿತ್ರ ನಟ ಪ್ರಕಾಶ್ ರೈ, ಸಚಿವರಾದ ರಾಮಲಿಂಗಾರೆಡ್ಡಿ , ಎಚ್.ಎಂ.ರೇವಣ್ಣ, ಮೇಯರ್ ಜಿ.ಸಂಪತ್‍ರಾಜ್, ಪ್ರೆಸ್‍ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್, ಕಾರ್ಯದರ್ಶಿ ಜನಾರ್ದನಾಚಾರಿ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.

ಬೆಂಗಳೂರು, ಡಿ.31-ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪ್ರೆಸ್‍ಕ್ಲಬ್ ವತಿಯಿಂದ ನೀಡಲಾಗುವ ಪ್ರೆಸ್‍ಕ್ಲಬ್ ವರ್ಷದ ವ್ಯಕ್ತಿ ಮತ್ತು ಪ್ರೆಸ್‍ಕ್ಲಬ್ ವಾರ್ಷಿಕ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಿದರು. ವರ್ಷದ ವ್ಯಕ್ತಿಯಾಗಿ ಆಯ್ಕೆಯಾದ ಕಲಾವಿದ ಪ್ರಕಾಶ್‍ರೈ, ವಾರ್ಷಿಕ ಪ್ರಶಸ್ತಿಗಳನ್ನು ಈ ಸಂಜೆಯ ಹಿರಿಯ ಪತ್ರಕರ್ತ ವಿ.ರಾಮಸ್ವಾಮಿ ಕಣ್ವ, ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷ ಡಾ.ಎ.ಸೂರ್ಯಪ್ರಕಾಶ್, ಹಿರಿಯ ಪತ್ರಕರ್ತರಾದ ಅರಕೆರೆ ಜಯರಾಂ, ಈಶ್ವರ್ ದೈತೋಟ, ಎಚ್.ಆರ್.ರಂಗನಾಥ್, ಆಯಿಷಾ ಖಾನುಮ್, ಹಿರಿಯ ಛಾಯಾಗ್ರಾಹಕರ ಕೆ.ವೆಂಕಟೇಶ್, ಮಂಜುನಾಥ್ ಎಂ.ಅದ್ದೆ ಅವರಿಗೆ ಪ್ರದಾನ ಮಾಡಿ ಸನ್ಮಾನಿಸಿದರು.

Press-Club--04

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಿಚುಂಚನಗಿರಿ ಮಠಾಧೀಶರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಿದ್ದರು. ಗೃಹ ಸಚಿವ ರಾಮಲಿಂಗಾರೆಡ್ಡಿ, ಸಚಿವ ಎಚ್.ಎಂ.ರೇವಣ್ಣ, ಮೇಯರ್ ಸಂಪತ್‍ರಾಜ್, ಪ್ರೆಸ್‍ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ದೈತೋಟ, ಪತ್ರಿಕೋದ್ಯಮ ಇತ್ತೀಚೆಗೆ ಬದಲಾಗುತ್ತಿರುವ ಸ್ವರೂಪವನ್ನು ನೋಡಿದರೆ ಮುಂದೆ ಏನಾಗುತ್ತದೋ ಎಂಬ ಆತಂಕ ಉಂಟಾಗುತ್ತದೆ. ಅದರಲ್ಲೂ ಡಿಜಿಟಲೀಕರಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಮಾಧ್ಯಮ ಕ್ಷೇತ್ರ ಜನಪರವಾಗಿ ಉಳಿಯುವುದೇ ಅಥವಾ ಸ್ವಹಿತಕ್ಕೆ ನಶಿಸಿಹೋಗುವುದೇ ಎಂಬಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

Press-Club--02

ಸದಾಶಿವ ಶೆಣೈ ಮಾತನಾಡಿ, ಪ್ರೆಸ್‍ಕ್ಲಬ್‍ಗೆ ಸ್ವಂತ ಕಟ್ಟಡ ಹೊಂದುವ ಇಚ್ಛೆ ನಮಗಿದೆ. ಅದಕ್ಕಾಗಿ 2 ಕೋಟಿ ರೂ. ನಿಧಿಯೂ ಇದೆ. ಆದರೆ ಈಗಾಗಲೇ ಭರವಸೆ ನೀಡಿರುವಂತೆ ಸರ್ಕಾರದಿಂದ ಎರಡು ಎಕರೆಯಷ್ಟು ಜಾಗ ನೀಡಿದರೆ ಕಟ್ಟಡ ನಿರ್ಮಿಸಿಕೊಳ್ಳುತ್ತೇವೆ. ನಂದಿನಿ ಲೇಔಟ್‍ನಲ್ಲಿ ಜಾಗ ಗುರುತಿಸಲಾಗಿದೆ. ಅದಕ್ಕೆ ಸರ್ಕಾರ ಸಮ್ಮತಿ ನೀಡಬೇಕಿದೆ. ಇಲ್ಲದಿದ್ದಲ್ಲಿ ಇಲ್ಲೇ ಸುತ್ತಮುತ್ತ ಎಲ್ಲಾದರೂ ಜಾಗ ಮಂಜೂರು ಮಾಡುವಂತೆ ಮನವಿ ಮಾಡಿದರು. ಪತ್ರಕರ್ತರಿಗೆ ನಿವೇಶನ ಕೊಡಲು ಮನವಿ ಮಾಡಿದಾಗ ಸಹಕಾರ ಸಂಘ ಸ್ಥಾಪಿಸುವಂತೆ ಸಲಹೆ ನೀಡಲಾಯಿತು. ಆದರೆ ಸಹಕಾರ ಸಂಘದಿಂದ ಕೇವಲ 100 ಜನರಿಗೆ ಮಾತ್ರ ನಿವೇಶನ ಸಿಗಲಿದೆ. 400 ಜನಕ್ಕೆ ನಿವೇಶನವಿಲ್ಲ ಎಂದರು.

Press-Club--03

ನಿವೃತ್ತ ಪತ್ರಕರ್ತರಿಗೆ ಮಾಸಾಶನ ನೀಡುವ ಯೋಜನೆಯಲ್ಲಿ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಎಂಬ ಷರತ್ತು ವಿಧಿಸಲಾಗಿತ್ತು. ಆದರೆ ಇಂದು ಮುಖ್ಯಮಂತ್ರಿಗಳು ಈ ಷರತ್ತನ್ನು ಕೈಬಿಟ್ಟಿದ್ದಾರೆ ಎಂದು ನುಡಿದರು. ನಾಳೆಯಿಂದ 65 ವರ್ಷ ಮೇಲ್ಪಟ್ಟ ಹಿರಿಯ ಪತ್ರಕರ್ತರಿಗೆ ಪ್ರೆಸ್‍ಕ್ಲಬ್‍ನಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಿರುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಲಾಯಿತು. ಪತ್ರಕರ್ತ ಮಂಜುನಾಥ ಅದ್ದೆ ತಮಗೆ ದೊರೆತ ಪ್ರಶಸ್ತಿ ಮೊತ್ತವನ್ನು ಗಾರ್ಮೆಂಟ್ಸ್ ನೌಕರರ ಸಂಘಟನೆಯ ಮುಖ್ಯಸ್ಥೆ ಗಿರಿಜಮ್ಮ ಅವರಿಗೆ ಹಸ್ತಾಂತರಿಸಿದರು.

Facebook Comments

Sri Raghav

Admin