ಬೆಂಗಳೂರು, ಮಂಡ್ಯ, ರಾಮನಗರ, ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

Earthquake-01

ಬೆಂಗಳೂರು, ಏ.18- ರಾಜಧಾನಿ ಬೆಂಗಳೂರು, ಮಂಡ್ಯ, ರಾಮನಗರ, ತುಮಕೂರು, ಚಾಮರಾಜನಗರ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಭೂಮಿ ಕಂಪಿಸಿದ್ದು, ಮನೆಗಳು , ರಸ್ತೆಗಳು ಬಿರುಕು ಬಿಟ್ಟು ಜನರು ಆತಂಕಕ್ಕೀಡಾಗಿರುವ ಘಟನೆ ಬೆಳಗ್ಗೆ ನಡೆದಿದೆ.  ಬೆಂಗಳೂರಿನ ಕೆಂಗೇರಿ, ಕಾರುಬೆಲೆ, ಮಾಗಡಿ ರಸ್ತೆ, ಬಸವನಗುಡಿ , ಕಾಮಾಕ್ಷಿಪಾಳ್ಯ , ಗಿರಿ ನಗರ ಸುತ್ತಮುತ್ತ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಸುಮಾರು 7.30ರಲ್ಲಿ ಭೂಮಿ ನಡುಗಿದ ಅನುಭವವಾಗಿದ್ದು, ಸುಮಾರು 2-3 ಸೆಕೆಂಡುಗಳ ಕಾಲ ಭೂಮಿ ನಡುಗಿದೆ ಎಂದು ಹವಮಾನ ಇಲಾಖೆ ನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಕಂಪನದ ತೀವ್ರತೆ ಕಡಿಮೆ ಇದ್ದುದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಇದು ಲಘು ಭೂ ಕಂಪನವಾಗಿದ್ದು, ಐದು ಸೆಕೆಂಡಿಗಿಂತ ಕಡಿಮೆ ಅವಧಿಯಲ್ಲಿ ಕಂಪಿಸಿದರೆ ಅದು ಕೇಂದ್ರದಲ್ಲಿ ದಾಖಲಾಗುವುದಿಲ್ಲ. ಪ್ರಸ್ತುತ ಕಂಪನವಾಗಿರುವುದು 2ರಿಂದ 3 ಸೆಕೆಂಡುಗಳಷ್ಟು ಕಾಲ ಎಂದು ಅವರು ಸ್ಪಷ್ಟಪಡಿಸಿದರು.  ಕಳೆದ 2ರಂದು ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಭೂಮಿ ಕಂಪಿಸಿದ್ದು, 4.5 ತೀವ್ರತೆ ದಾಖಲಾಗಿತ್ತು. ಅದನ್ನು ಹೊರತುಪಡಿಸಿದರೆ ರಾಜ್ಯದಲ್ಲಿರುವ 13 ಕಂಪನ ಕೇಂದ್ರಗಳಲ್ಲಿ ಯಾವುದೇ ಕಂಪಿಸಿದ ತೀವ್ರತೆ ದಾಖಲಾಗಿಲ್ಲ ಎಂದು ಅವರು ತಿಳಿಸಿದರು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಂಚಿದೊಡ್ಡಿ, ಹಲಗೂರು, ನಾಗೇಗೌಡನ ದೊಡ್ಡಿ ಹಾಗೂ ಮದ್ದೂರು ತಾಲ್ಲೂಕಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದ್ದು, ಭೂಮಿಯ ಲಘು ಕಂಪನದಿಂದ ಮೂರ ರಿಂದ 4 ಸೆಂಕೆಂಡುಗಳ ಕಾಲ ಕಂಪನವಾಗಿದೆ. ಇದರಿಂದಾಗಿ ಮನೆಯಲ್ಲಿರುವ ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿದ್ದು, ಆತಂಕಗೊಂಡ ಜನರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.ಇಂದು ಬೆಳಗ್ಗೆ ಸುಮಾರು 7.30ರಲ್ಲಿ ಭೂಮಿ ಕಂಪಿಸಿದ ಅನುಭವವಾಗಿ ಜನ ಆತಂಕದಿಂದ ಮನೆಯಿಂದ ಓಡಿ ಬಂದಿದ್ದಾರೆ. ಗ್ರಾಮದ ಸಿದ್ದಲಿಂಗ ಸ್ವಾಮಿ ಹಾಗೂ ಮಹದೇವ ಸ್ವಾಮಿ ಎಂಬುವವರಿಗೆ ಸೇರಿದ ಮನೆಗಳ ಗೋಡೆಗಳು ಭಾರೀ ಬಿರುಕು ಕಾಣಿಸಿಕೊಂಡಿದ್ದು, ಉಳಿದಂತೆ ಕೆಲ ಮನೆಗಳಲ್ಲಿ ಸಣ್ಣ ಪುಟ್ಟ ಬಿರುಕು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೆಟ್ಟೇಹಳ್ಳಿ ಸುತ್ತಮುತ್ತ ಹಳ್ಳಿಗಳಲ್ಲಿ ಲಘು ಭೂಕಂಪವಾಗಿದ್ದು, 3ರಿಂದ 4 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಅಲ್ಲಿನ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣ, ಕನಕಪುರ ತಾಲ್ಲೂಕಿನ ಸುತ್ತಮುತ್ತ ಪ್ರದೇಶಗಳಲ್ಲಿ ಭೂಕಂಪನವಾಗಿದ್ದು, 2 ರಿಂದ 3 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಮುಂಜಾನೆ ಸುಮಾರು 7.30 ನಿಮಿಷದಲ್ಲಿ ಭೂಮಿ ಕಂಪಿಸಿದ್ದು, ಜನರು ಆತಂಕದಿಂದ ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.  ಕೆಲವು ದಿನಗಳ ಹಿಂದೆ ಚನ್ನಪಟ್ಟಣ ತಾಲ್ಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ಭೂಕಂಪನವಾಗಿದ್ದು, 5 ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದವು. ಇದೀಗ ಮತ್ತೆ ಭೂಕಂಪನವಾಗಿರುವುದರಿಂದ ಅಲ್ಲಿನ ಜನರು ಆತಂಕದಿಂದಲೇ ಇದ್ದಾರೆ.  ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ರಾಜು ನಗರದಲ್ಲಿ ಭೂಕಂಪನವಾಗಿರುವ ವರದಿಯಾಗಿದೆ. ಬೆಳಗ್ಗೆ 7.45ರಲ್ಲಿ ಕೆಲ ಸೆಕೆಂಡುಗಳ ಕಾಲ ಭೂಕಂಪನವಾಗಿದೆ.
ಅಲ್ಲದೆ ಮಾಗಡಿ ಪಟ್ಟಣದ ಮಂಜುನಾಥ ನಗರ, ವಿದ್ಯಾ ನಗರದಲ್ಲಿ ಭೂಮಿ ಕಂಪಿಸಿದ್ದು ಸ್ಥಳೀಯ ಮದ್ದು ವೀರಪ್ಪ ಎಂಬುವರು ಇಂದು ಬೆಳಗ್ಗೆ ಮನೆಯಲ್ಲಿ ಪೇಪರ್ ಓದುತ್ತಿದ್ದಾಗ ಭೂಮಿ ನಡುಗಿದ ಅನುಭವವಾಗಿದೆ ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin