ಬೆಂಗಳೂರು ವಿವಿ ಆವರಣದಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪನೆಗೆ ಬಿಬಿಎಂಪಿ ಒಪ್ಪಂದ

ಈ ಸುದ್ದಿಯನ್ನು ಶೇರ್ ಮಾಡಿ

BBM-00

ಬೆಂಗಳೂರು, ಸೆ.2- ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಸಂಶೋಧನಾ ಅಧ್ಯಯನ ಕೇಂದ್ರ ಸ್ಥಾಪಿಸಲು ಇಂದು ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರು ವಿವಿ ಕುಲಪತಿ ಪ್ರೊ.ತಿಮ್ಮೇಗೌಡ, ಮೇಯರ್ ಮಂಜುನಾಥರೆಡ್ಡಿ, ಪಾಲಿಕೆ ಆಯುಕ್ತ ಮಂಜುನಾಥಪ್ರಸಾದ್, ಉಪಮೇಯರ್ ಹೇಮಲತಾ ಗೋಪಾಲಯ್ಯ, ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ನಾಡಪ್ರಭು ಕೆಂಪೇಗೌಡ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎ.ಎಚ್.ಬಸವರಾಜ್ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಬೆಂಗಳೂರು ವಿವಿ ಆವರಣದಲ್ಲಿ ಕೆಂಪೇಗೌಡ ಸಂಶೋಧನಾ ಕೇಂದ್ರಕ್ಕೆ 3 ಎಕರೆ ಜಾಗವನ್ನು ವಿವಿಯು ನೀಡಲು ಒಪ್ಪಿದ್ದು, ಇಲ್ಲಿ ಕಟ್ಟಡ ಕಟ್ಟಲು ಪಾಲಿಕೆ ಆರ್ಥಿಕ ನೆರವು ನೀಡಲಿದೆ.

ಸೆಪ್ಟೆಂಬರ್ 2015ರಲ್ಲಿ ಸಂಶೋಧನಾ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವ ಕುರಿತು ಬಿಬಿಎಂಪಿಯು ವಿವಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಮಾಗಡಿಯಲ್ಲಿ ಇತ್ತೀಚೆಗೆ ಕೆಂಪೇಗೌಡ ಸಮಾಧಿ ಸ್ಥಳ ಸಿಕ್ಕ ಹಿನ್ನೆಲೆಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಉತ್ಸುಕತೆ ತೋರಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿವಿ ಕುಲಪತಿ ತಿಮ್ಮೇಗೌಡರೊಂದಿಗೆ ಪಾಲಿಕೆಯು ಒಪ್ಪಂದ ಮಾಡಿಕೊಂಡಿದೆ.
ಒಪ್ಪಂದಕ್ಕೆ ಸಹಿ ಹಾಕಿದ ನಂತರ ಪ್ರೊ.ತಿಮ್ಮೇಗೌಡರು ಸುದ್ದಿಗಾರರೊಂದಿಗೆ ಮಾತನಾಡಿ, ಜ್ಞಾನಭಾರತಿ ಆವರಣದ ಆಡಳಿತ ಕಟ್ಟಡದ ಎದುರು ಇರುವ ಜಾಗದಲ್ಲಿ 2ರಿಂದ 3 ಎಕರೆ ಜಾಗವನ್ನು ಸಂಶೋಧನಾ ಅಧ್ಯಯನ ಕೇಂದ್ರಕ್ಕೆ ನೀಡಲು ಸಿದ್ಧರಿದ್ದೇವೆ. ಬಿಬಿಎಂಪಿಯು ಇನ್ನೂ ಹೆಚ್ಚು ಜಾಗ ಕೇಳಿದರೆ ಕೊಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ಕೆಂಪೇಗೌಡರು ಇತಿಹಾಸ ಪುರುಷ. ಅವರ ಬಗ್ಗೆ ಎಲ್ಲ ಜನರಿಗೂ ತಿಳಿಸಿಕೊಡುವ ಅಗತ್ಯವಿದೆ. ಈ ಸಂಶೋಧನಾ ಕೇಂದ್ರಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಬಿಬಿಎಂಪಿ ಹೇಳಿದೆ.
ಆಸಕ್ತ ವಿದ್ಯಾರ್ಥಿಗಳಿಗೆ ಸಮಗ್ರ ಅಧ್ಯಯನ ಮಾಡಲು ಈ ಜಾಗದಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಸುಂದರ ಹಾಗೂ ದೇಶ, ವಿದೇಶಗಳ ಗಮನ ಸೆಳೆಯುವಂತಹ ಅತ್ಯಾಕರ್ಷಕ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು. ಮೇಯರ್ ಮಂಜುನಾಥರೆಡ್ಡಿ ಮಾತನಾಡಿ, ಬೆಂಗಳೂರು ವಿಶ್ವ ಮೆಚ್ಚಿದ ನಗರ. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬಗ್ಗೆ ಮಾಹಿತಿ ತಿಳಿಯಲು ಇದುವರೆಗೆ ಸರಿಯಾದ ಅವಕಾಶವಿರಲಿಲ್ಲ. ಈಗ ಬೆಂಗಳೂರು ವಿವಿಯಲ್ಲಿ ಸಂಶೋಧನಾ ಅಧ್ಯಯನ ಕೇಂದ್ರ ಸ್ಥಾಪನೆಯಾಗುತ್ತಿರುವುದು ಸಂತಸ ತಂದಿದೆ ಎಂದರು.

ಬೇರೆಡೆಗಳಲ್ಲಿ ರಾಜ, ಮಹಾರಾಜರ ಇತಿಹಾಸ, ಅವರ ಆಡಳಿತಾವಧಿ ತಿಳಿಸುವ ಕೆಲಸ ಆಗಿದೆ. ಆದರೆ ಕೆಂಪೇಗೌಡರ ಬಗ್ಗೆ ತಿಳಿಸಿಕೊಡಲು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇತ್ತೀಚೆಗೆ ಮಾಗಡಿಯಲ್ಲಿ ನಾಡಪ್ರಭು ಐಕ್ಯವಾದ ಸ್ಥಳ ಸಿಕ್ಕಿದೆ. ಹಾಗಾಗಿ ಅವರ ಬಗ್ಗೆ ತಿಳಿಸಲು ಆಸಕ್ತಿ ಮೂಡಿದೆ. ಬೆಂಗಳೂರು ವಿವಿಯು ಜಾಗ ಕೊಡಲು ಒಪ್ಪಿದೆ. ನಾವು ಆರ್ಥಿಕ ನೆರವು ನೀಡುತ್ತೇವೆ. ಇಲ್ಲಿ ಸಂಶೋಧನಾ ಅಧ್ಯಯನ ಕೇಂದ್ರ ಮಾಡುತ್ತೇವೆ. ಅದಕ್ಕಾಗಿ ಇಂದು ವಿವಿ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು. ಬೆಂಗಳೂರಿನ ಜನರು ಹಾಗೂ ನಾಡಪ್ರಭುವಿಗೆ ಗೌರವ ಕೊಡುವಂತಹ ಒಪ್ಪಂದ ಇದಾಗಿದೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin