ಬೆಂಗಳೂರು ಸೇರಿ 300ಕ್ಕೂ ಹೆಚ್ಚು ನಕಲಿ ಕಂಪನಿಗಳ ಮೇಲೆ ಇ.ಡಿ ದಾಳಿ, ಭಾರೀ ಅಕ್ರಮ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ED-Department

ನವದೆಹಲಿ, ಏ.1- ಷೆಲ್(ನಕಲಿ ಮತ್ತು ಬೇನಾಮಿ) ಕಂಪನಿಗಳ ವಿರುದ್ಧ ಜಾರಿ ನಿರ್ದೇಶನಾಲಯ ರಾಷ್ಟ್ರಾದ್ಯಂತ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಕರ್ನಾಟಕ ಸೇರಿದಂತೆ 16 ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ಇಂದು ದಾಳಿ ನಡೆಸಿ 300 ಕಂಪನಿಗಳ ಭಾರೀ ಅಕ್ರಮಗಳನ್ನು ಬಯಲಿಗೆಳೆದಿದ್ದು, ಈ ಸಂಬಂಧ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರು, ದೆಹಲಿ, ಚೆನ್ನೈ, ಕೊಲ್ಕತಾ, ಚಂಡಿಗಢ, ಪಾಟ್ನಾ, ರಾಂಚಿ, ಅಹಮದಾಬಾದ್, ಭುವನೇಶ್ವರ್ ಮೊದಲಾದ ಪ್ರಮುಖ ನಗರಗಳ 300ಕ್ಕೂ ಅಧಿಕ ಷೆಲ್ ಕಂಪನಿಗಳ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳ ಬಹು ತಂಡಗಳು ಏಕ ಕಾಲಕ್ಕೆ ದಾಳಿ ನಡೆಸಿವೆ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಹಣ ವಹಿವಾಟು, ಹಣ ದುರುಪಯೋಗ ಮತ್ತು ಕಾನೂನು ಬಾಹಿರ ವಿದೇಶ ವಿನಿಮಯ ವಹಿವಾಟುಗಳ ಪ್ರಕರಣಗಳನ್ನು ತನಿಖೆ ಮಾಡಲು ದೇಶಾದ್ಯಂತ ಈ ದಾಳಿ ನಡೆಸಲಾಗಿದೆ. ದಾಳಿ ವೇಳೆ ದೊಡ್ಡ ಮಟ್ಟದ ವಂಚನೆಗಳು ಕಂಡುಬಂದಿದ್ದು, ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.  ಹಣ ದುರ್ಬಳಕೆ ನಿಯಂತ್ರಣ ಕಾಯ್ದೆ (ಪಿಎಂಎಲ್‍ಎ) ಮತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‍ಇಎಂಎ) ಅಡಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಪ್ರಧಾನಮಂತ್ರಿಯವರ ಕಾರ್ಯಾಲಯದ(ಪಿಎಂಒ) ನಿರ್ದೇಶನದ ಮೇಳೆ ಸರ್ಕಾರದಿಂದ ಇತ್ತೀಚೆಗೆ ರಚಿಸಲಾದ ವಿಶೇಷ ಕಾರ್ಯ ಪಡೆ (ಎಸ್‍ಟಿಎಫ್) ಅಡಿ ನಿರ್ದೇಶನಾಲಯವು ಈ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.   ಕಳೆದ ಒಂದು ವಾರದ ಅವಧಿಯಲ್ಲಿ ದೇಶದ ವಿವಿಧೆಡೆ ಇಂಥ ನಕಲಿ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳನ್ನು ಸಹ ಜಪ್ತಿ ಮಾಡಿದೆ.

ಕನಿಷ್ಠ ಬಂಡವಾಳದೊಂದಿಗೆ ಸಂಸ್ಥೆಯನ್ನು ಸ್ಥಾಪಿಸಿ (ಬೇನಾಮಿ ಹೆಸರಿನಲ್ಲೂ) ಆ ಮೂಲಕ ಸಾರ್ವಜನಿಕರಿಗೆ ಹೆಚ್ಚು ಹಣ ಲಾಭದ ಆಮಿಷವೊಡ್ಡಿ ನಿಧಿ ಸಂಗ್ರಹಿಸಿ ವಂಚಿಸುವ ಸಂಸ್ಥೆಗಳನ್ನು ಷೆಲ್ ಕಂಪನಿಗಳು ಎನ್ನುವರು. ಇದು ಮೇಲ್ನೋಟಕ್ಕೆ ಅಧಿಕೃತ ಸಂಸ್ಥೆಗಳಂತೆ ಕಂಡುಬಂದರೂ ಸರ್ಕಾರದಿಂದ ನಿಗದಿಗೊಳಿಸುವ ಯಾವುದೇ ನೀತಿ ನಿಯಮಗಳನ್ನು ಪಾಲಿಸದೇ ಹಣ ದುರ್ಬಳಕೆ, ಅಕ್ರಮ ವಹಿವಾಟಿನಲ್ಲಿ ತೊಡಗುತ್ತವೆ.   ಒಬ್ಬ ವ್ಯಕ್ತಿಯ ಹೆಸರಿನಲ್ಲಿ 700 ಬೇನಾಮಿ ಕಂಪೆನಿ: ಮುಂಬೈನಲ್ಲಿ ಒಬ್ಬ ವ್ಯಕ್ತಿ 700 ಬೇನಾಮಿ ಕಂಪೆನಿಗಳನ್ನು ಒಂದೇ ವಿಳಾಸ ನೀಡಿ ಆರಂಭಿಸಿ ವಂಚಿಸುತ್ತಿದ್ದ ಪ್ರಕರಣವನ್ನು ಸಹ ಇಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin