ಬೆಂಗಳೂರೆಂದರೆ ನನಗೆ ಬಲು ಇಷ್ಟ ಎಂದಿದ್ದ ಶ್ರೀದೇವಿ

ಈ ಸುದ್ದಿಯನ್ನು ಶೇರ್ ಮಾಡಿ

Sri--01

ಬಾಲಿವುಡ್‍ನ ಸ್ನಿಗ್ಧ ಸುಂದರಿ ಶ್ರೀದೇವಿಗೆ ಬೆಂಗಳೂರು ಅಂದರೆ ತುಂಬಾ ಪ್ರೀತಿಯಿತ್ತು. ಹಲವು ಸಂದರ್ಶನಗಳಲ್ಲಿ ಅವರು ಅನೇಕ ಬಾರಿ ಸಿಲಿಕಾನ್ ಸಿಟಿಯ ಸ್ಮರಣೆ ಮಾಡಿದ್ದಾರೆ. ನನಗೆ ಕನ್ನಡ ಚಿತ್ರರಂಗ ಹಾಗೂ ಭಾಷೆ ಅಂದರೆ ಎಲ್ಲಿಲ್ಲದ ಪ್ರೀತಿ, ನಾನು ಇಲ್ಲಿನ ಸ್ಟಾರ್ ನಟರಾದ ಡಾ.ರಾಜ್‍ಕುಮಾರ್‍ರೊಂದಿಗೆ ಭಕ್ತ ಕುಂಬಾರದಲ್ಲಿ ಮುಕ್ತಬಾಯಿ ಎಂಬ ಪಾತ್ರದಲ್ಲಿ ನಟಿಸಿರುವುದು ಇಂದಿಗೂ ನನಗೆ ಖುಷಿ ತಂದಿದೆ ಎಂದು ಹೇಳಿದ್ದರು. ನಾನು ನಟಿಸಿರುವ ಜಗದೇಕವೀರುಡು ಅತಿಲೋಕ ಸುಂದರಿ ಸೇರಿದಂತೆ ಅನೇಕ ಚಿತ್ರಗಳ ಚಿತ್ರೀಕರಣವು ಕೂಡ ಬೆಂಗಳೂರಿನಲ್ಲೇ ನಡೆದಿದೆ. ನಾನು ಇಲ್ಲಿಗೆ ಬಂದಾಗ ನಾನು ಬೆಂಗಳೂರಿನಲ್ಲಿ ಕಳೆದ ಸುಂದರ ಕ್ಷಣಗಳು ನೆನಪಿಗೆ ಬರುತ್ತದೆ ಎಂದು ಬಣ್ಣಿಸಿದ್ದರು.

1992ರಲ್ಲಿ ಶ್ರೀದೇವಿ ಹಾಗೂ ಅನಿಲ್‍ಕಪೂರ್ ನಟಿಸಿದ್ದ ಜುದಾಯಿ ಚಿತ್ರದ ಚಿತ್ರೀಕರಣವು ಅಭಿಮಾನ್ ಸ್ಟುಡಿಯೋದಲ್ಲಿ ನಡೆದಿತ್ತು ಮತ್ತು ಬಾಲುಮಹೇಂದ್ರ ನಿರ್ದೇಶಿಸಿದ್ದ ಬಾಲಿವುಡ್‍ನ ಸದ್ಮಾ ಹಾಗೂ ತಮಿಳಿನ ಮೂಂಡ್ರಾ ಪಿರೈ ಚಿತ್ರಗಳ ಚಿತ್ರೀಕರಣವು ಬೆಂಗಳೂರಿನಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆಸಿದ್ದು ನನಗೆ ತುಂಬಾ ಸಂತಸ ತಂದಿತ್ತು ಎಂದು ಹೇಳಿಕೊಂಡಿದ್ದರು. ನನ್ನ 4 ದಶಕಗಳ ಚಿತ್ರ ಜೀವನದಲ್ಲಿ ತೆಲುಗು, ತಮಿಳು, ಹಿಂದಿ, ಮಲಯಾಳಂಗಳಲ್ಲಿ ಅತಿ ಹೆಚ್ಚು ಚಿತ್ರಗಳಲ್ಲೂ ನಟಿಸಿದ್ದರೂ ಕೂಡ ಕನ್ನಡದಲ್ಲಿ ಹೆಚ್ಚು ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಶ್ರೀದೇವಿಯವರು ಕನ್ನಡದ ಭಕ್ತ ಕುಂಬಾರ (1974), ಬಾಲ ಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ (1974), ಹೆಣ್ಣು ಸಂಸಾರದ ಕಣ್ಣು (1975), ಪ್ರಿಯಾ ಪ್ರಿಯಾ (1979) ಎಂಬ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ಸಿಸಿಎಲ್‍ನಲ್ಲೂ ಮಿಂಚು:
ಶ್ರೀದೇವಿಗೆ ನಟನೆ ಮಾತ್ರವಲ್ಲದೆ ಕ್ರೀಡೆಯತ್ತಲೂ ಹೆಚ್ಚು ಆಸಕ್ತಿ ಇತ್ತು. 2014ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಲ್ಲಿ ನಡೆದ ಸಿಸಿಎಲ್ ಪಂದ್ಯದಲ್ಲಿ ಬಂಗಾಳ್ ಟೈಗರ್ಸ್ ತಂಡವನ್ನು ಬೆಂಬಲಿಸಿದ್ದರಲ್ಲದೆ, ಅದೇ ದಿನ ನಡೆದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳ ನಡುವಿನ ಸಂಪೂರ್ಣ ಪಂದ್ಯವನ್ನು ವೀಕ್ಷಿಸುವ ಮೂಲಕ ಬೆಂಗಳೂರಿನಲ್ಲಿರುವ ತನ್ನ ಅಭಿಮಾನಿಗಳ ಮನವನ್ನು ರಂಜಿಸಿದ್ದರು.

ಈಡೇರದ ರವಿ ಕನಸು:
ಜೂಹಿಚಾವ್ಲಾ, ಖುಷ್ಬೂ ಸೇರಿದಂತೆ ಬಾಲಿವುಡ್‍ನ ಬಲು ಬೇಡಿಕೆಯ ನಟಿಯರೆಲ್ಲಾ ಬೆಳಕಿಗೆ ಬಂದಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರಗಳಿಂದಲೇ, , ಶಿಲ್ಪಾಶೆಟ್ಟಿ , ನಗ್ಮಾ ಕೂಡ ರವಿಯ ಸಿನಿಮಾಗಳಲ್ಲಿ ಮಿಂಚಿದ್ದರು. ಆದರೆ ರವಿಚಂದ್ರನ್‍ಗೆ ಶ್ರೀದೇವಿಯವರನ್ನು ತಮ್ಮ ಒಂದು ಚಿತ್ರದಲ್ಲಿ ಒಂದು ಪಾತ್ರ ಮಾಡಿಸಬೇಕೆಂಬ ಕನಸನ್ನು ಹೊತ್ತಿದ್ದರು. ಆದರೆ ಆ ಕನಸು ನನಸಾಗಿಯೇ ಉಳಿಯಿತು. ಶ್ರೀದೇವಿ ನಂಬರ್ 1 ನಟಿಯಾಗಿ ಮಿಂಚುತ್ತಿದ್ದ ಕಾಲದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪದೇ ಪದೇ ತಮ್ಮ ಚಿತ್ರಗಳಿಗೆ ಶ್ರೀದೇವಿಯವರಿಗೆ ಆಮಂತ್ರಣ ನೀಡುತ್ತಿದ್ದರಾದರೂ ಕೂಡ ಆಕೆಯು ರವಿಯ ಚಿತ್ರದಲ್ಲಿ ನಟಿಸಲು 50 ಲಕ್ಷ ರೂ.ಗಳ ಡಿಮ್ಯಾಂಡ್ ಇಟ್ಟಿದ್ದರು. ಆದರೆ ಅಂದಿನ ಕಾಲದಲ್ಲಿ ರವಿಚಂದ್ರನ್‍ರವರ ಇಡೀ ಚಿತ್ರವೇ ಶ್ರೀದೇವಿ ಕೇಳಿದ್ದ ಸಂಭಾವನೆಯಲ್ಲೇ ಮುಗಿದು ಹೋಗುತ್ತಿದ್ದರಿಂದ ಶ್ರೀದೇವಿಯವರನ್ನು ಸ್ಯಾಂಡಲ್‍ವುಡ್‍ಗೆ ಕರೆತರುವ ಪ್ರಯತ್ನವನ್ನು ರವಿ ಬಿಟ್ಟಿದ್ದರು .

Facebook Comments

Sri Raghav

Admin