ಬೆಂಗ್ಳೂರಲ್ಲಿನ ಅನಧಿಕೃತ ಬೋರ್‍ವೆಲ್‍ಗಳು, ಟ್ಯಾಂಕರ್‍ಗಳು ಬಿಬಿಎಂಪಿ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Manjunath-Prasad

ಬೆಂಗಳೂರು, ಏ.26- ಬಿಬಿಎಂಪಿ ಮತ್ತು ಸರ್ಕಾರಿ ಆಸ್ತಿಗಳಲ್ಲಿ ಅನಧಿಕೃತವಾಗಿ ಕೊರೆಸಿರುವ ಬೋರ್‍ವೆಲ್‍ಗಳನ್ನು ವಶಕ್ಕೆ ಪಡೆಯಲಾಗುವುದು. ನೋಂದಣಿ ಮಾಡಿ ಸದ ಟ್ಯಾಂಕರ್‍ಗಳನ್ನು ಸೀಜ್ ಮಾಡಿಸಿ ಅಕ್ರಮ ಬೋರ್‍ವೆಲ್ ಹಾಗೂ ಟ್ಯಾಂಕರ್ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಮೂಲಕ ನಗರದಲ್ಲಿ ಕುಡಿ ಯುವ ನೀರಿನ ಹಾಹಾಕಾರ ತಪ್ಪಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.  ಪಾಲಿಕೆ ಸಭೆಯಲ್ಲಿಂದು ಭೀಕರ ಬರಗಾಲ ದಿಂದ ಕುಡಿಯುವ ನೀರಿಗೆ ಉಂಟಾಗಿರುವ ಹಾಹಾಕಾರ ತಪ್ಪಿಸಲು ಪಕ್ಷಾತೀತವಾಗಿ ಸದಸ್ಯರ ಒಕ್ಕೊರಲ ಒತ್ತಾಯ ಕೇಳಿಬಂದಾಗ ಕುಡಿಯುವ ನೀರು ಒದಗಿಸಲು ಆಯುಕ್ತರು ಸಮ್ಮತಿ ಸೂಚಿಸಿದರು.ಸಭೆ ಪ್ರಾರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ನಾಯಕ ಮಹಮ್ಮದ್ ರಿಜ್ವಾನ್ ಅವರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ಗಮನ ಸೆಳೆದರು.198 ವಾರ್ಡ್‍ಗಳ ಪೈಕಿ 63 ವಾರ್ಡ್ ಗಳಲ್ಲಿ ಕುಡಿಯುವ ನೀರೇ ಇಲ್ಲ. ನೀರಿನ ಕಾಮಗಾರಿ ಬಿಲ್ ಬಿಡುಗಡೆಗೆ ವಿಳಂಬ ಆಗುತ್ತಿರುವುದರಿಂದ ಬೋರ್‍ವೆಲ್ ಹಾಕಲು ಯಾರೂ ಮುಂದೆ ಬರುತ್ತಿಲ್ಲ. ಇದರ ಕಡೆ ಗಮನ ಹರಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಭೀಕರ ತೊಂದರೆ ಅನುಭವಿಸಬೇಕಾಗುತ್ತದೆ. ಈಗಲೇ ಎಚ್ಚೆತ್ತುಕೊಳ್ಳಬೇಕು.ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಈ ವೇಳೆ ಆಗ್ರಹಿಸಿದರು.

ಪದ್ಮನಾಭರೆಡ್ಡಿ ಮಾತನಾಡಿ, ನೀರಿನ ಕಾಮಗಾರಿಗಳಿಗೆ ಆನ್‍ಲೈನ್‍ನಲ್ಲಿ ಬಿಲ್ ಬಿಡುಗಡೆ ಮಾಡಬೇಡಿ, ಹಣ ಬರಲು ತಡವಾಗುತ್ತದೆಂದು ಗುತ್ತಿಗೆದಾರರು ಕೆಲಸ ಮಾಡಲು ಮುಂದೆ ಬರುವುದಿಲ್ಲ. ಬಿಲ್ ಬಿಡುಗಡೆ ಹಣ ದೊರಕುವಂತೆ ಮಾಡಲು ಮೊದಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಭೀಕರ ಬರಗಾಲ ಇರುವುದರಿಂದ ವಿಶೇಷ ಅನುದಾನ ನೀಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಎಂದು ಅವರು ಮನವಿ ಮಾಡಿದರು.  ಉಮೇಶ್‍ಶೆಟ್ಟಿ ಮಾತನಾಡಿ, ಖಾಸಗಿ ಟ್ಯಾಂಕರ್‍ನವರು ಸರ್ಕಾರಿ ಮತ್ತು ಪಾಲಿಕೆ ಆಸ್ತಿಗಳಲ್ಲಿ ಬೋರ್‍ವೆಲ್ ಹಾಕಿ ನೀರನ್ನು ಅಡ್ಡಾದಿಡ್ಡಿ ಮಾರಾಟ ಮಾಡುತ್ತಿದ್ದಾರೆ. ಮೊದಲು ಇದಕ್ಕೆಲ್ಲ ಕಡಿವಾಣ ಹಾಕಿ ಖಾಸಗಿ ಟ್ಯಾಂಕರ್ ಮಾಫಿಯಾ ಮಟ್ಟ ಹಾಕಿ ಎಂದು ಆಗ್ರಹಿಸಿದರು.

ಹೇರೋಹಳ್ಳಿ ವಾರ್ಡ್‍ನ ರಾಜಣ್ಣ ಮಾತನಾಡಿ, 110 ಹಳ್ಳಿಗೆ ಒಳಪಡುವ ವಾರ್ಡ್‍ಗಳಲ್ಲಿ ಹನಿ ನೀರಿಗೂ ತತ್ವಾರ ವಾಗಿದೆ. ಟ್ಯಾಂಕರ್ ಮೂಲಕ ಅಲ್ಲಿಗೆ ನೀರು ಕೊಡಬೇಕಿದೆ. ಆದರೆ, ನೀರಿನ ಬಿಲ್ ಬಿಡುಗಡೆ ಆಗುತ್ತಿಲ್ಲ. ಬಿಲ್ ಬಿಡುಗಡೆ ಮಾಡಿ ನೀರಿನ ಸಮಸ್ಯೆ ತಪ್ಪಿಸಿ ಎಂದು ಹೇಳಿದರು. ಕಟ್ಟೆ ಸತ್ಯನಾರಾಯಣ, ಡಾ.ರಾಜು, ಸಂಪತ್‍ರಾಜು ಮತ್ತಿತರರು ಕೂಡ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದರಲ್ಲದೆ ಬೆಂಗಳೂರು ಜಲಮಂಡಳಿ ಕಾರ್ಯವೈಖರಿ ಬಗ್ಗೆ ತರಾಟೆಗೆ ತೆಗೆದುಕೊಂಡರು. ನಗರದ ಎಲ್ಲ ಬೋರ್‍ವೆಲ್‍ಗಳನ್ನು ಜಲಮಂಡಳಿ ವ್ಯಾಪ್ತಿಗೆ ಬಿಟ್ಟುಕೊಡಲಾಗಿದೆ. ಆದರೆ, ಅವರು ನಮಗೆ ಇನ್ನೂ ಕಾರ್ಯಾದೇಶ ಪತ್ರ ಬಂದಿಲ್ಲ ಎಂದು ನೆಪಹೇಳಿ ಬೋರ್‍ವೆಲ್ ದುರಸ್ತಿ ಮಾಡಿಸುತ್ತಿಲ್ಲ. ಕೂಡಲೇ ಮಂಡಳಿಯ ಮುಖ್ಯಸ್ಥರಿಗೆ ಈ ಬಗ್ಗೆ ಎಚ್ಚರಿಕೆ ನೀಡಿ ಎಂದು ಒತ್ತಾಯಿಸಿದರು.
ಜಲಮಂಡಳಿಯ ಕಾರ್ಯವೈಖರಿಯನ್ನು ಮೇಯರ್ ಪದ್ಮಾವತಿ ತರಾಟೆಗೆ ತೆಗೆದುಕೊಂಡು ಕೂಡಲೇ ಅಧಿಕಾರಿಗಳು ಉತ್ತರ ಕೊಡಿ ಎಂದರು.

ಎಇಇ ಉತ್ತರ ಕೊಡಲು ಮುಂದಾದಾಗ ಮುಖ್ಯ ಅಭಿಯಂತರರೇ ಉತ್ತರ ನೀಡಬೇಕೆಂದು ಸದಸ್ಯರು ಪಟ್ಟು ಹಿಡಿದರು. ಮೇಯರ್ ಚೀಫ್ ಎಂಜಿನಿಯರ್ ಬಂದು ಉತ್ತರ ಕೊಡುವಂತೆ ತಾಕೀತು ಮಾಡಿದರು.ಈ ವೇಳೆ ಮಾತನಾಡಿದ ಮೇಯರ್ ಪದ್ಮಾವತಿ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಇದನ್ನು ಪರಿಹರಿಸಲು ಮೊದಲು ಆದ್ಯತೆ ನೀಡಿ. ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಆದೇಶಿಸಿದರು.
ಮೇಯರ್ ಸೂಚನೆ ಮೇರೆಗೆ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಉಲ್ಬಣಗೊಂಡಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಈಗಾಗಲೇ ನಾನು ಸುತ್ತೋಲೆ ಹೊರಡಿಸಿದ್ದೇನೆ. ಅದರಲ್ಲೂ ಪ್ರಮುಖವಾಗಿ ಕುಡಿಯುವ ನೀರಿನ ಕಾಮಗಾರಿಗಳ ಬಾಕಿ ಬಿಲ್‍ಅನ್ನು ಆದ್ಯತೆ ಮೇರೆಗೆ ಬಿಡುಗಡೆ ಮಾಡಲು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.ಬಜೆಟ್‍ನಲ್ಲಿ ಕುಡಿಯುವ ನೀರಿಗೆ ಮೀಸಲಿಟ್ಟಿರುವ ಹೊಸ ವಾರ್ಡ್‍ಗೆ 40 ಲಕ್ಷ, ಹಳೆ ವಾರ್ಡ್‍ಗೆ 15 ಲಕ್ಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುತ್ತೇವೆ ಎಂದು ಆಯುಕ್ತರು ಸಭೆಗೆ ತಿಳಿಸಿದರಲ್ಲದೆ ಬಿಬಿಎಂಪಿ ಮತ್ತು ಸರ್ಕಾರಿ ಆಸ್ತಿಗಳಲ್ಲಿ ಕೊರೆಸಿರುವ ಅನಧಿಕೃತ ಬೋರ್‍ವೆಲ್‍ಗಳನ್ನು ವಶಕ್ಕೆ ಪಡೆ ದು ಖಾಸಗಿ ಟ್ಯಾಂಕರ್ ಮಾಫಿಯಾ ಮಟ್ಟ ಹಾಕುತ್ತೇವೆ ಎಂದು ಭರವಸೆ ನೀಡಿದಸರು.

ಶ್ರದ್ಧಾಂಜಲಿ:

ಇತ್ತೀಚೆಗೆ ತೀವ್ರ ಅನಾ ರೋಗ್ಯದಿಂದ ನಿಧನರಾದ ವಿಧಾನ ಪರಿಷತ್ ಸದಸ್ಯೆ ವಿಮಲಾಗೌಡ ಅವರಿಗೆ ಪಾಲಿಕೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಷ್ಟ್ರಗೀತೆ ಕಡ್ಡಾಯ: ಮುಂದಿನ ಪಾಲಿಕೆ ಸಭೆಯಿಂದ ಇನ್ನು ಮುಂದೆ ರಾಷ್ಟ್ರಗೀತೆ ಕಡ್ಡಾಯವಾಗಲಿದೆ.ಇದುವರೆಗೆ ಸಭೆಯಲ್ಲಿ ರಾಷ್ಟ್ರಗೀತೆ ಹಾಡುತ್ತಿರಲಿಲ್ಲ. ಇನ್ನು ಮುಂದೆ ರಾಷ್ಟ್ರಗೀತೆ ಹಾಡಬೇಕೆಂದು ಸದಸ್ಯ ಸಂಪತ್‍ರಾಜ್ ಮತ್ತಿತರರು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಮೇಯರ್ ಸಭೆ ಪ್ರಾರಂಭ ವಾಗುತ್ತಿದ್ದಂತೆ ಇನ್ನು ಮುಂದೆ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯ ಮಾಡಲಾಗುವುದು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin