ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ಮಹಿಳಾ ಕೆಎಸ್‍ಆರ್‍ಪಿ ತುಕಡಿ ರಚನೆ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

ಬೆಂಗಳೂರು, ಡಿ.30– ಪ್ರಥಮ ಬಾರಿಗೆ ಮಹಿಳಾ ಕೆಎಸ್‍ಆರ್‍ಪಿ ತುಕಡಿಗಳನ್ನು ಬೆಳಗಾವಿಯಲ್ಲಿ ರಚಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಕೆಎಸ್‍ಆರ್‍ಪಿ ಮೈದಾನದಲ್ಲಿ ನಡೆದ ಪದೋನ್ನತಿ ಕಾರ್ಯಕ್ರಮದಲ್ಲಿ ಕೆಎಸ್‍ಆರ್‍ಪಿ ಸಿಬ್ಬಂದಿಗೆ ಪದೋನ್ನತಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.  ಕೆಎಸ್‍ಆರ್‍ಪಿಗೆ ಹೊಸ ರೂಪ ನೀಡಲು 5 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದ ಅವರು, ಈ ಹಿಂದೆ ಮಹಿಳಾ ಸಿಬ್ಬಂದಿಗಳನ್ನು ಆರ್‍ಎಎಫ್, ಸಿಎಆರ್‍ನಿಂದ ಕರೆಸಲಾಗುತ್ತಿದ್ದು, ನಮ್ಮಲ್ಲಿಯೇ ಕೆಎಸ್‍ಆರ್‍ಪಿ ಮಹಿಳಾ ತುಕಡಿಗಳನ್ನು ರಚಿಸುವುದರಿಂದ ಇನ್ನು ಮುಂದೆ ನಮ್ಮಲ್ಲಿಯೇ ಅವರು ಸಿಗುತ್ತಾರೆ ಎಂದು ಹೇಳಿದರು.

ಪೊಲೀಸ್ ಇಲಾಖೆ ಸವಾಲಿನ ಇಲಾಖೆ. ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸಿದರೆ ಸಮಾಜ ಶಾಂತವಾಗಿ ಇರುತ್ತದೆ. ನಮ್ಮ ರಾಜ್ಯದ ಪೊಲೀಸ್ ಇಲಾಖೆ ಇತರೆ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಇಲಾಖೆಯಲ್ಲಿನ ತರಬೇತಿಗೆ ಸ್ವರೂಪ ನೀಡುವ ಅಗತ್ಯವಿದೆ. ಈಗಾಗಲೇ ವೇತನ ಪರಿಷ್ಕರಣೆಗೆ ಕೈ ಹಾಕಿದ್ದೇವೆ. ಈ ಸಂಬಂಧ ವೇತನ ಆಯೋಗಕ್ಕೆ ಶಿಫಾರಸು ಮಾಡಿದ್ದೇವೆ. ಉಳಿದಂತೆ ಇತರೆ ಭತ್ಯೆಗಳನ್ನು ಸರ್ಕಾರ ಕೊಟ್ಟಿದೆ. 11 ಸಾವಿರ ಪೊಲೀಸರಿಗೆ ಬಡ್ತಿ ನೀಡಿದ್ದೇವೆ. ಇನ್ನು ಮುಂದೆ ಪದೋನ್ನತಿ ಕ್ರಮಬದ್ಧವಾಗಿ ನಡೆಯಲಿದೆ ಎಂದು ವಿವರಿಸಿದರು.

ಕೆಎಸ್‍ಆರ್‍ಪಿ ಎಂದರೆ ಬಸ್‍ನಲ್ಲೇ ಹೆಚ್ಚು ಕಾಲ ಕಳೆಯಬೇಕಾಗುತ್ತದೆ. ಇದಕ್ಕೆ ಅನುಕೂಲವಾಗುವಂತೆ 150 ಹೊಸ ಬಸ್‍ಗಳನ್ನು ಖರೀದಿಸಲಾಗಿದ್ದು, 30 ಬಸ್‍ಗಳು ಬಂದಿವೆ. 11 ಸಾವಿರ ಮನೆ ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಪೊಲೀಸ್ ಸಿಬ್ಬಂದಿಗೆ ಶೇ.70ರಷ್ಟು ವಸತಿ ಸೌಲಭ್ಯ ಕಲ್ಪಿಸುವ ಗುರಿ ಇದೆ ಎಂದು ಮಾಹಿತಿ ನೀಡಿದರು. 14ಸಾವಿರ ಕೆಎಸ್‍ಆರ್‍ಪಿ ಸಿಬ್ಬಂದಿಯನ್ನು ಪೊಲೀಸ್ ಠಾಣೆಗಳಲ್ಲಿ ಬಳಕೆ ಮಾಡಿಕೊಳ್ಳುವ ಚಿಂತನೆ ನಡೆದಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು. ಯಾವುದೇ ಸಿಬ್ಬಂದಿಗಳು ಶಿಸ್ತು ಕಾಯ್ದುಕೊಂಡು ಹೋಗುವುದು ಬಹಳ ಮುಖ್ಯ ಎಂದು ತಿಳಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin